ನಮ್ಮ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ
ಮೈಸೂರು

ನಮ್ಮ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ

December 29, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಮ್ಮ ನಾಲ್ವರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಶೇ.100ರಷ್ಟು ನಮ್ಮ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮಾಜಿ ಎಂಎಲ್‍ಸಿ ಸಿ.ರಮೇಶ್, ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹ ದೇವಯ್ಯ ಇಂದಿಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಮೈಸೂರು ಜಿಲ್ಲೆಯಲ್ಲಿ ನಂಜನಗೂಡು, ತಿ.ನರಸೀಪುರ, ವರುಣಾ, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಗಳನ್ನು ಒಳ ಗೊಂಡಿದೆ. ಈ ಕ್ಷೇತ್ರಗಳಲ್ಲಿ ನಾವು ನಾಲ್ಕು ಮಂದಿಯೂ ನಮ್ಮದೇ ಆದ ಸಂಘಟನೆ ಮೂಲಕ ಪಕ್ಷವನ್ನು ಪರಿಪೂರ್ಣವಾಗಿ ಸಂಘಟಿಸಿದ್ದೇವೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವರಿಷ್ಠರು ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಒಗ್ಗಟ್ಟಿನಿಂದ ಪಕ್ಷದ ಗೆಲುವು ಖಚಿತ. ಈ ಬಗ್ಗೆ ಈಗಾಗಲೇ ನಾವು ಕೇಂದ್ರ ಮತ್ತು ರಾಜ್ಯದ ನಮ್ಮ ವರಿಷ್ಠರ ಗಮನ ಸೆಳೆದಿದ್ದೇವೆ. ಅವರೂ ಕೂಡ ನಮ್ಮ ಪರ ಒಲವು ವ್ಯಕ್ತಪಡಿಸಿದ್ದಾರೆ. ನಾವು ಪರಸ್ಪರ ಯಾವುದೇ ಭೇದ ಇಲ್ಲದೆ ಒಗ್ಗಟ್ಟಿನಿಂದ ಇದ್ದೇವೆ ಎಂಬ ಸಂದೇಶವನ್ನು ವರಿಷ್ಠರಿಗೆ ನೀಡಿದ್ದೇವೆ ಎಂದರು. ಹಾಲಿ ಬಿಜೆಪಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷನಾಗಿರುವ ನಾನು, ಹೆಚ್.ಡಿ.ಕೋಟೆಯಿಂದ 2 ಬಾರಿ ಶಾಸಕ ನಾಗಿ, 1999ರಲ್ಲಿ ಎಸ್.ಎಂ.ಕೃಷ್ಣ ಸಚಿವ ಸಂಪುಟ ದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವನಾಗಿ ಹಣಕಾಸು, ತೋಟಗಾರಿಕೆ, ವಾರ್ತಾ ಪ್ರಸಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನೀರಾವರಿ ಇಲಾಖೆ ಸಚಿವನಾಗಿ ಕೆಲಸ ನಿರ್ವಹಿಸಿದ್ದೇನೆ. ಎರಡು ಬಾರಿ ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅನುಭವ ಹೊಂದಿದ್ದೇನೆ ಎಂದು ಕೋಟೆ ಎಂ.ಶಿವಣ್ಣ ತಮ್ಮ ಅನುಭವವನ್ನು ವಿವರಿಸಿದರು.

ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ ಮಾತನಾಡಿ, ಕೊಳ್ಳೇಗಾಲ ಕ್ಷೇತ್ರದಿಂದ 2 ಬಾರಿ ವಿಧಾನಸಭೆಯನ್ನು ಪ್ರತಿನಿಧಿಸಿದ್ದೇನೆ. ಜಿಲ್ಲೆಯ ಎಸ್‍ಸಿ ಮೋರ್ಚಾ ಅಧ್ಯಕ್ಷನಾಗಿ, ರಾಜ್ಯ ಎಸ್‍ಸಿ ಮೋರ್ಚಾ ಕಾರ್ಯಾಧ್ಯಕ್ಷನಾಗಿ, ರಾಷ್ಟ್ರೀಯ ಪರಿಷತ್ ಸದಸ್ಯ ನಾಗಿ, ಮೈಸೂರು ವಿದ್ಯುತ್ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯನಾಗಿದ್ದೇನೆ ಎಂದರು.

ಮಾಜಿ ಎಂಎಲ್‍ಸಿ ಸಿ.ರಮೇಶ್ ಮಾತನಾಡಿ, ಮೈಸೂರು-ಚಾಮರಾಜನಗರ ಜಿಲ್ಲೆ (ಸ್ಥಳೀಯ ಸಂಸ್ಥೆ)ಯಿಂದ ವಿಧಾನ ಪರಿಷತ್ ಸದಸ್ಯನಾಗಿ, ರಾಜ್ಯ ಸರ್ಕಾರದ ಆಹಾರ ನಿಗಮ ಅಧ್ಯಕ್ಷನಾಗಿ, ಬಿಜೆಪಿ ಸರ್ಕಾರದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷನಾಗಿ, ಹಾಲಿ ಕೇಂದ್ರ ಸರ್ಕಾರದ ರಾಸಾಯ ನಿಕ ರಸಗೊಬ್ಬರ ಸಂಸ್ಥೆ ನಿರ್ದೇಶಕನಾಗಿದ್ದೇನೆ. ರಾಷ್ಟ್ರ ಎಸ್‍ಸಿ ಮೋರ್ಚಾ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಯಲ್ಲಿ ತೊಡಗಿದ್ದೇನೆ. ರಾಷ್ಟ್ರೀಯ ಅಂಬೇಡ್ಕರ್ ಫೌಂಡೇಷನ್ ನಿರ್ದೇಶಕನಾಗಿ, ರಾಜ್ಯ ಬಿಜೆಪಿ ಕಾರ್ಯ ದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಕೋಟೆ ಎಂ.ಶಿವಣ್ಣ ಅವರು ಎಸ್.ಮಹದೇವಯ್ಯ ರನ್ನು ಕುರಿತು ವಿವರಿಸಿ, ಚಾಮರಾಜನಗರ ಜಿಲ್ಲಾ ಪಂಚಾಯಿತಿಗೆ 2 ಬಾರಿ ಸದಸ್ಯರಾಗಿ ಆಯ್ಕೆಯಾ ಗಿದ್ದ ಎಸ್.ಮಹದೇವಯ್ಯ ಅಲ್ಲಿನ ಜಿ.ಪಂ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಚಾ.ನಗರ ಲೋಕಸಭಾ ವ್ಯಾಪ್ತಿಯ ನಂಜನ ಗೂಡು (ಮೀಸಲು) ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಅತೀ ಕಡಿಮೆ ಅಂತರ ದಿಂದ ಪರಾಭವಗೊಂಡಿ ದ್ದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಪಕ್ಷದ ಅಧ್ಯಕ್ಷರಾಗಿ, ರಾಜ್ಯ ಎಸ್‍ಸಿ ಮೋರ್ಚಾ ಕಾರ್ಯ ದರ್ಶಿಯಾಗಿ, ಉಪಾಧ್ಯಕ್ಷರಾಗಿ, ಮೈಸೂರು, ಮಂಗಳೂರು ವಿಭಾಗದ ಪ್ರಭಾರಿಯಾಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ. ಡಾ. ನಂಜುಂಡಪ್ಪ ವರದಿ ಅನುಷ್ಠಾನದ ಉನ್ನತ ಮಟ್ಟದ ರಾಜ್ಯ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2017-18ರಲ್ಲಿ ನಂಜನಗೂಡು ವಿಧಾನಸಭಾ ಉಪ ಚುನಾವಣೆ ಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಲ್ಲದೆ, ನಂಜನ ಗೂಡಿನಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ವಿಧಾನಸಭಾ ಚುನಾವಣೆಯಿಂದ ಟಿಕೆಟ್ ವಂಚಿತರಾಗಿದ್ದಾರೆ. ಆದರೂ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿ ದ್ದಾರೆ ಎಂದು ವಿವರಿಸಿದರು.

ಹಾಗಾಗಿ ನಮ್ಮ ಪಕ್ಷ ನಿಷ್ಠೆ, ಪಕ್ಷ ಸಂಘಟನೆ ಬಗ್ಗೆ ವರಿಷ್ಠರಿಗೂ ತಿಳಿದಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಕೋರಿದ್ದೇವೆ. ವರಿಷ್ಠರು ನಮ್ಮ ಮನವಿಯನ್ನು ಪುರಸ್ಕರಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ತಾವಾಗಲಿ, ತಮ್ಮ ಕುಟುಂಬದವರಾಗಲಿ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಹೀಗಾಗಿ ಅವರೂ ಕೂಡ ನಮ್ಮ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ತಿಳಿಸಿದರು.

Translate »