ಮೈಸೂರು ಸಂಚಾರ ಎಸಿಪಿಯಾಗಿ  ಜಿ.ಎನ್.ಮೋಹನ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಸಂಚಾರ ಎಸಿಪಿಯಾಗಿ  ಜಿ.ಎನ್.ಮೋಹನ್ ಅಧಿಕಾರ ಸ್ವೀಕಾರ

September 27, 2018

ಮೈಸೂರು: ಮೈಸೂರು ನಗರ ಸಂಚಾರ ವಿಭಾಗದ ಅಸಿಸ್ಟೆಂಟ್ ಕಮೀಷ್ನರ್ ಆಫ್ ಪೊಲೀಸ್ (ಎಸಿಪಿ) ಆಗಿ ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು.

ಮೈಸೂರಿನ ಶಿವರಾಂಪೇಟೆಯಲ್ಲಿರುವ ಸಂಚಾರ ಎಸಿಪಿ ಕಚೇರಿಯಲ್ಲಿ ಪ್ರಭಾರ ಎಸಿಪಿಯಾಗಿದ್ದ ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸಿ.ವಿ. ರವಿ ಅವರು ಮೋಹನ್ ಅವರಿಗೆ ಅಧಿಕಾರ ವಹಿಸಿಕೊಟ್ಟು, ಪುಷ್ಪಗುಚ್ಛ ನೀಡಿ ಶುಭ ಕೋರಿದರು.
ತುಮಕೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಡಿವೈಎಸ್ಪಿಯಾಗಿದ್ದ ಮೋಹನ್ ಅವರನ್ನು ಸರ್ಕಾರ ಮೈಸೂರು ನಗರ ಸಂಚಾರ ವಿಭಾಗದ ಎಸಿಪಿಯಾಗಿ ವರ್ಗಾ ವಣೆ ಮಾಡಿತ್ತು. ಅಧಿಕಾರ ವಹಿಸಿಕೊಂಡ ನಂತರ ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಇಲ್ಲಿನ ರಸ್ತೆ ಸಂಚಾರ ಸುಗಮಗೊಳಿಸುವುದು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಜನಸ್ನೇಹಿ ವಾತಾವರಣ ಮೂಡಿಸುವುದು ಅಗತ್ಯವಿದ್ದು, ನಗರ ಕಮೀಷ್ನರ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವರ ಮಾರ್ಗದರ್ಶನ ಹಾಗೂ ಸಲಹೆ ಮೇರೆಗೆ ಮತ್ತು ಸಂಚಾರ ಠಾಣೆ ಅಧೀನ ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರದಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಒತ್ತು ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದೂ ನಮ್ಮ ಮುಂದಿರುವ ಸವಾಲಾಗಿದೆ. ಅಪಘಾತಗಳನ್ನು ನಿಯಂತ್ರಿಸಿ ಅಮೂಲ್ಯ ಪ್ರಾಣಹಾನಿ ತಪ್ಪಿಸಲು ಪ್ರಯತ್ನಿಸುತ್ತೇವೆ ಎಂದು ಮೋಹನ್ ತಿಳಿಸಿದರು.
1994ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಮೋಹನ್, ಶಿವಮೊಗ್ಗ, ದಾವಣಗೆರೆ, ಸಿಓಡಿ ಬೆಂಗಳೂರು, ಮಳವಳ್ಳಿ, ಮೈಸೂರಿನ ವಿಜಯನಗರ, ಎನ್.ಆರ್. ಸಂಚಾರ ಠಾಣೆ, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆ, ಮೈಸೂರಿನ ನಜರ್‍ಬಾದ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »