ಮೈಸೂರು ನಗರಪಾಲಿಕೆ ನೂತನ ಸದಸ್ಯರಿಗೆ ಸುತ್ತೂರು ಶ್ರೀಗಳಿಂದ ಸನ್ಮಾನ
ಮೈಸೂರು

ಮೈಸೂರು ನಗರಪಾಲಿಕೆ ನೂತನ ಸದಸ್ಯರಿಗೆ ಸುತ್ತೂರು ಶ್ರೀಗಳಿಂದ ಸನ್ಮಾನ

September 27, 2018

ಮೈಸೂರು: ಮೈಸೂರು ನಗರಪಾಲಿಕೆಗೆ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರನ್ನು ಬುಧ ವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿದರು.

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮ ದಲ್ಲಿ 65 ಪಾಲಿಕೆ ಸದಸ್ಯರನ್ನು ಸನ್ಮಾನಿಸಿ, ಆಶೀರ್ವದಿಸಿದರು. ನಂತರ ಮಾಜಿ ಶಾಸಕ ವಾಸು ಮಾತನಾಡಿ, ಮೈಸೂರು ನಗರ ಪಾಲಿಕೆ ದೇಶದ ಗೌರವಯುತ ಪಾಲಿಕೆಗಳಲ್ಲೊಂದಾಗಿದೆ. ಈ ಹಿಂದಿನ ಪಾಲಿಕೆ ಸದಸ್ಯರು ನಗರದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಸೇವಾ ಮನೋ ಭಾವನೆಯಿಂದ ಕೆಲಸ ಮಾಡಿದ್ದಾರೆ. ಇದನ್ನೇ ಈಗಿನ ಪಾಲಿಕೆ ಸದಸ್ಯರು ಮುಂದುವರೆಸುವಂತೆ ಸಲಹೆ ನೀಡಿದರು.
ಪಾಲಿಕೆ ಸದಸ್ಯರು ಮಾತ್ರ ನಗರದ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿ ರುತ್ತಾರೆ. ಯಾರು ಜನರ ಸಮಸ್ಯೆಯನ್ನು ನಿಭಾಯಿಸುತ್ತಾರೋ ಅಂತಹ ಸದಸ್ಯರು, ಮುಂದೆ ಶಾಸಕರಾಗಿ, ಮಂತ್ರಿಗಳಾಗಿ ಆಯ್ಕೆಯಾಗುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ನಾಗೇಂದ್ರ, ತನ್ವೀರ್‍ಸೇಠ್ ಸೇರಿದಂತೆ ಅನೇಕರು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ ಎಂದರು.

ರಾಜಕಾರಣಿಗಳು ಎಷ್ಟೇ ಎತ್ತರಕ್ಕೆ ಬೆಳೆ ದಿದ್ದರೂ ಅದು ಜನರ ಆಶೀರ್ವಾದದಿಂದಲೇ. ಆದ್ದರಿಂದ ನೂತನ ಸದಸ್ಯರು ಜನರ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ಸ್ಪಂದಿಸ ಬೇಕು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ನಗರದ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ಕಸದ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರತಿಯೊಬ್ಬ ಸದಸ್ಯರು ಕೌನ್ಸಿಲ್ ಸಭೆಯನ್ನು ಅಚ್ಚು ಕಟ್ಟಾಗಿ ಬಳಸಿಕೊಳ್ಳಬೇಕು ಎಂದರು.

ಮೈಸೂರಿನ ಅಭಿವೃದ್ಧಿಗೆ ಸುತ್ತೂರು ಮಠದ ಕೊಡುಗೆ ಸಾಕಷ್ಟಿದೆ. ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಈಗಿನ ಸ್ವಾಮೀಜಿಗಳು ಪಾಲಿಕೆ ಸದಸ್ಯರನ್ನು ಕರೆದು ಸನ್ಮಾನಿಸು ತ್ತಿರುವುದರಿಂದ ನೂತನ ಸದಸ್ಯರ ಜವಾ ಬ್ದಾರಿಯೂ ಹೆಚ್ಚಾಗಿದೆ. ಆದ್ದರಿಂದ ಎಲ್ಲರೂ ತಮ್ಮತಮ್ಮ ಕರ್ತವ್ಯವನ್ನು ಅರಿತು ನಗರದ ಸಮಸ್ಯೆಗೆ ಸಾಧ್ಯವಾದಷ್ಟೂ ಸ್ಪಂದಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ಮಾಜಿ ಮೇಯರ್‍ಗಳಾದ ಪಿ.ವಿಶ್ವನಾಥ್, ಬಿ.ಕೆ. ಪ್ರಕಾಶ್, ಹೆಚ್.ಎನ್.ಶ್ರೀಕಂಠಯ್ಯ, ಆರ್.ಲಿಂಗಪ್ಪ, ಹಾಲಿ ಪಾಲಿಕೆ ಸದಸ್ಯರು ಹಾಜರಿದ್ದರು.

Translate »