ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ
ಮೈಸೂರು, ಮೈಸೂರು ದಸರಾ

ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ

October 14, 2018

ಮೈಸೂರು: ಯೋಗ ದಸರಾ ಉಪಸಮಿತಿಯಿಂದ ಇಂದು ಏರ್ಪಡಿಸಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಯೋಗಪಟುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಇಂದು ಬೆಳಿಗ್ಗೆ 6.10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆರಂಭವಾದ ಯೋಗ ಚಾರಣ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಹಸಿರು ನಿಶಾನೆ ತೋರಿಸಿದರು.

ನಂತರ ಸಚಿವರು, ಯೋಗ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೂ ಸೇರಿ ಸುಮಾರು 1 ಸಾವಿರ ಮಂದಿಯೊಂದಿಗೆ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಚಾಮುಂಡಿಬೆಟ್ಟ ಏರಿದರು.

ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾ.ರಾ.ಮಹೇಶ್, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲಾ ಜನರ ಬದುಕು ದಿನೇ ದಿನೆ ಯಾಂತ್ರೀಕರಣಗೊಳ್ಳುತ್ತಿರುವುದಲ್ಲದೆ, ಒತ್ತಡದಿಂದ ಆರೋಗ್ಯ ಕ್ಷೀಣಿಸುತ್ತಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಯೋಗ, ಕ್ರೀಡೆ ಮತ್ತು ವ್ಯಾಯಾಮ ಅತ್ಯವಶ್ಯವಾಗಿದ್ದು, ಪ್ರತಿಯೊಬ್ಬರೂ ಆರೋಗ್ಯ ಪದ್ಧತಿ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಭೂಮಾಪನ ಇಲಾಖೆ ಉಪನಿರ್ದೇಶಕಿ ರಮ್ಯಾ, ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾಧಿ ಕಾರಿ ಪ್ರಭಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಸೇರಿದಂತೆ ಹಲವು ಅಧಿಕಾರಿಗಳು ಯೋಗ ಚಾರಣದಲ್ಲಿ ಪಾಲ್ಗೊಂಡಿದ್ದರು.

Translate »