ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!
ಮೈಸೂರು

ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!

August 5, 2019

ಮೈಸೂರು,ಆ.4(ಆರ್‍ಕೆಬಿ)-ಹಣಕ್ಕಾಗಿ ಪ್ರಾಣ ತೆಗೆಯಲು ಹಿಂಜರಿಯದ ಇಂತಹ ಕಾಲದಲ್ಲಿಯೂ ಪ್ರಾಮಾಣಿ ಕರು ಇದ್ದಾರೆ ಎಂಬುದಕ್ಕೆ ಭಾನುವಾರ ಮೈಸೂರಿನಲ್ಲಿ ನಡೆದ ನೈಜ ಘಟನೆ ಇದು.

ಇವರು ಎಷ್ಟು ಪ್ರಾಮಾಣಿ ಕರು ಎಂದರೆ ದಾರಿಯಲ್ಲಿ ಹೋಗುತ್ತಿದ್ದಾಗ ಸಿಕ್ಕಿದ ರಾಶಿ ಹಣವನ್ನು ಅತ್ತಿತ್ತ ನೋಡಿ ಜೇಬಿಗಿಳಿಸಲಿಲ್ಲ ಅಥವಾ ಯಾರಿಗೂ ಗೊತ್ತಾಗದಂತೆ ಹಣವನ್ನು ಎಸ್ಕೇಪ್ ಮಾಡಲಿಲ್ಲ. ಬದಲಿಗೆ ಆ ಹಣದ ಮೊತ್ತವನ್ನು ಪ್ರಾಮಾಣಿಕವಾಗಿ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿ ಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಪೊಲೀಸರು, ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಏನಿದು ಘಟನೆ?: ಭಾನವಾರ ಬೆಳಿಗ್ಗೆ ಅನಿರುದ್ಧ್ ಎಂಬ ವಿದ್ಯಾರ್ಥಿಯೊಬ್ಬ ತನ್ನ ಸ್ಕೂಟರಿನಲ್ಲಿ ಹೋಗುವಾಗ ಜನನಿಬಿಡ ರಸ್ತೆಯಲ್ಲಿ ಮಾರ್ಗ ಮಧ್ಯೆ ರೂ. 2,000 ಮುಖ ಬೆಲೆಯ 60 ಸಾವಿರ ರೂ. ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಅವರಿಗೆ ಹಣ ಕಳೆದುಕೊಂಡವನ ಬಗ್ಗೆ ಮರುಕ ಪಟ್ಟು, ಈ ವಿಚಾರವನ್ನು `ಮೈಸೂರು ಮಿತ್ರ’ ಕಚೇರಿಗೆ ಮಾಹಿತಿ ನೀಡಿದ್ದಾರೆ. ಆ ಹಣವನ್ನು ಪತ್ರಿಕಾಲಯದ ಸೂಚನೆ ಮೇರೆಗೆ ಆ ವ್ಯಾಪ್ತಿಯ ದೇವರಾಜ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅನಿರುದ್ಧ್, ಮೈಸೂರಿನ ಕೆ.ಆರ್.ಮೊಹಲ್ಲಾದ ತೊಗರಿ ಬೀದಿಯ ನಿವಾಸಿ. ಇಂದು ತಮ್ಮ ತಂದೆ ಎಸ್.ರಾಘವೇಂದ್ರ ಅವರೊಂದಿಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ, ಮೈಸೂರಿನ ಜಾವಾ ರೋಟರಿ ಶಾಲೆಗೆ ಹತ್ತಿರದಲ್ಲಿರುವ ದರ್ಗಾ ಬಳಿ ನೋಟುಗಳು ಬಿದ್ದಿದ್ದನ್ನು ಕಂಡರು. ತಕ್ಷಣ ವಾಹನ ನಿಲ್ಲಿಸುವಂತೆ ತಂದೆಗೆ ತಿಳಿಸಿದರು. ಅಲ್ಲಿ 2,000 ರೂ. ಮುಖಬೆಲೆಯ 60 ಸಾವಿರ ರೂ. ಬಿದ್ದಿದ್ದು ಕಂಡು, ಅದನ್ನು ತೆಗೆದುಕೊಂಡರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಲನ್‍ನಲ್ಲಿ ಹಣವನ್ನು ಸುತ್ತಲಾಗಿತ್ತು. ಚಲನ್‍ನಲ್ಲಿ ಖಾತೆ ಸಂಖ್ಯೆಯ ಜೊತೆಗೆ ಮೊಬೈಲ್ ಸಂಖ್ಯೆ, ಮತ್ತು ಎಂ.ಹೆಚ್.ಶಿವರಾಂ ಎಂದು ಬರೆಯಲಾಗಿದ್ದನ್ನು ನೋಡಿದರು.

ಕೂಡಲೇ ಅನಿರುದ್ಧ್ ಚಲನ್‍ನಲ್ಲಿದ್ದ ಮೊಬೈಲ್ ನಂಬರ್ ಕರೆ ಮಾಡಿದರು. ಆದರೆ ಶಿವರಾಂ ಎಂಬವರು ಕರೆಯನ್ನು ಸ್ವೀಕರಿಸಲಿಲ್ಲ. ತಕ್ಷಣ ಏನು ಮಾಡುವುದೆಂದು ತೋಚದ ಅನಿರುದ್ಧ್, ಕೂಡಲೇ `ಮೈಸೂರು ಮಿತ್ರ’ ಕಚೇರಿಗೆ ದೂರವಾಣಿ ಮಾಡಿ ಮಾಹಿತಿ ನೀಡಿ, ಅವರ ಸೂಚನೆ ಮೇರೆಗೆ ಆ ವ್ಯಾಪ್ತಿಯ ದೇವರಾಜ ಪೊಲೀಸ್ ಠಾಣೆಗೆ ಹಣವನ್ನು ಹಸ್ತಾಂತರಿಸಿದರು. ಬ್ಯಾಂಕ್ ಚಲನ್‍ನಲ್ಲಿದ್ದ ವ್ಯಕ್ತಿಯ ಮೊಬೈಲ್ ನಂಬರಿಗೆ `ಮೈಸೂರು ಮಿತ್ರ’ದಿಂದ ಕರೆ ಮಾಡಿದಾಗ ಆ ವ್ಯಕ್ತಿ ಕರ್ನಾಟಕ ಗಡಿ ದಾಟಿ ತಮಿಳುನಾಡಿನಲ್ಲಿರುವ ಬಗ್ಗೆ ತಮಿಳು ಭಾಷೆಯಲ್ಲಿ ಸಂದೇಶ ಬಂತು. ಅನಿರುದ್ಧ್ ಮತ್ತು ಆತನ ತಂದೆ ರಾಘವೇಂದ್ರ ದೇವರಾಜ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಂ.ಮಂಜುನಾಥ್ ಅವರಿಗೆ ಹಣವನ್ನು ಹಸ್ತಾಂತರಿಸಿದರು. ಪ್ರಾಮಾಣಿಕತೆ ಮೆರೆದ ಅಪ್ಪ ಮಕ್ಕಳಿಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಬಂಧಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಹಣವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಅವರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಅವರಿಂದ ಹಣ ಪಡೆದ ಬಗ್ಗೆ ಪೊಲೀಸರು ಸ್ವೀಕೃತಿ ಪತ್ರವನ್ನು ನೀಡಿದ್ದಾರೆ.

Translate »