ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ
ಮೈಸೂರು

ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ

July 11, 2018

ಮೈಸೂರು: ಬಸ್ ಸೌಲಭ್ಯವೇ ಇಲ್ಲದ ಗ್ರಾಮದಲ್ಲಿ ಏಕಾಏಕಿ ರೈಲು ಗಾಡಿ ಬಂದು ನಿಂತರೆ ಅಚ್ಚರಿ ಎನಿಸದೇ ಇರಲಾರದು.

ಅಂತಹ ಆಶ್ಚರ್ಯಕರ ಸಂಗತಿಯೊಂದು ನಂಜನಗೂಡು ತಾಲೂಕು, ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಹಾರೋಪುರ ಗ್ರಾಮದಲ್ಲಿ ನಡೆದಿದೆ. ನಂಜನಗೂಡಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಹಾರೋಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲು ಬೋಗಿ ಗಳಾಗಿ ಮಾರ್ಪಟ್ಟಿದ್ದು, ಇದೀಗ ಶಾಲೆ ಜನಾಕರ್ಷಣೆ ಕೇಂದ್ರವಾಗಿದೆ.

ಶಾಲೆಯಲ್ಲಿ 3 ಕೊಠಡಿಗಳಿವೆ. ಮೊದಲ ಕೊಠಡಿಗೆ ಎಂಜಿನ್ ಹಾಗೂ ಉಳಿದೆರಡು ಕೊಠಡಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು, ಕಿಟಕಿ ಬಾಗಿಲು ಗಳನ್ನು ಪಕ್ಕಾ ರೈಲು ಬೋಗಿಯ ದೃಶ್ಯ ದಂತೆ ಪೇಂಟ್ ಮಾಡಲಾಗಿದೆ.1 ರಿಂದ 7ನೇ ತರಗತಿವರೆಗೆ 55 ಮಕ್ಕಳು ವ್ಯಾಸಂಗ ಮಾಡುತ್ತಿರುವ ಹಾರೋಪುರ ಸರ್ಕಾರಿ ಶಾಲೆಯ ನಾಲ್ವರು ಶಿಕ್ಷಕರು ಕಟ್ಟಡವನ್ನು ರೈಲು ಬೋಗಿಯನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಸಾಕಾರಗೊಳಿಸಿದ್ದಾರೆ.

ವಾಟ್ಸ್‍ಆ್ಯಪ್‍ನಲ್ಲಿ ಬಂದಿದ್ದ ಉತ್ತರ ಭಾರತ ಕಡೆಯ ಶಾಲೆಗೆ ರೈಲು ಮಾದರಿಯ ಪೇಂಟಿಂಗ್ ಮಾಡಿದ್ದ ದೃಶ್ಯದಿಂದ ಆಕರ್ಷಿತರಾದ ಶಾಲಾ ಮುಖ್ಯೋಪಾಧ್ಯಾಯ ಬಸವನಾಯ್ಕ ಅವರು ಸಹ ಶಿಕ್ಷಕ ಎಸ್. ದೊರೆಸ್ವಾಮಿ, ಶಿಕ್ಷಕರಾದ ನೇತ್ರಾವತಿ ಹಾಗೂ ಪಾರಾನಂ ಖಾನಮ್ ಅವರ ಆಸಕ್ತಿ ಹಾಗೂ ನೆರವಿನೊಂದಿಗೆ ಬಣ್ಣ ಬಳಿಸಿ ಈ ಪ್ರಯೋಗ ಸಾರ್ಥಕಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸರ್ಕಾರಿ ಶಾಲೆ ರೈಲುಗಾಡಿಯಂತೆ ರೂಪು ಗೊಂಡು ಜನಾಕರ್ಷಣೆಯೊಂದಿಗೆ ಅಲ್ಲಿನ ಮಕ್ಕಳು, ಪೋಷಕರು ಈ ಅಂದದ ದೃಶ್ಯವನ್ನು ನೋಡಿ ಖುಷಿ ಪಡುತ್ತಿದ್ದಾ ರಲ್ಲದೆ, ಗ್ರಾಮಸ್ಥರು ಹಾಗೂ ಸಾರ್ವಜನಿ ಕರು ನಿಂತು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದ ಹಾರೋ ಪುರ ಗ್ರಾಮಸ್ಥರು ಬಸ್ಸಿಗೆ ಹೋಗ ಬೇಕೆಂದರೆ ಎತ್ತ ಸಾಗಿದರೂ 4 ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕು. ಅಂತಹ ಕುಗ್ರಾಮದ ಸರ್ಕಾರಿ ಶಾಲೆ ಮಾತ್ರ ಜನಾಕರ್ಷಣೆ ಕೇಂದ್ರವಾಗಿದೆ.

ಶಾಲೆಗೆ ಟ್ರೇನ್ ಬಣ್ಣ ಹಾಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಖ್ಯ ಶಿಕ್ಷಕ ಬಸವನಾಯ್ಕ ಅವರು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿ, ತಮ್ಮ ಮೊಬೈಲ್‍ಗೆ ಬಂದ ವಾಟ್ಸ್‍ಆಪ್ ದೃಶ್ಯ ತಮಗೆ ಪ್ರೇರಣೆ ನೀಡಿತು. ತಾವೂ ಸಹ ಏಕೆ ನಮ್ಮ ಶಾಲೆಗೆ ಮಾಡಬಾರದೆಂದು ಯೋಚಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರ ಸಹಕಾರದಿಂದ ಈ ಪ್ರಯತ್ನ ಯಶಸ್ವಿಯಾಗಿದೆ ಎಂದರು.

ಸಾರಿಗೆ ಸಂಪರ್ಕವೇ ಇಲ್ಲದ ಗ್ರಾಮದ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನದ ಮೂಲ ಉದ್ದೇಶವಾಗಿದ್ದು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರೆಲ್ಲರೂ ಇದರಲ್ಲಿ ಕೈಜೋಡಿಸಿದ್ದಾರೆ ಎಂದು ಅವರು ತಿಳಿಸಿದರು.

Translate »