ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ನೂತನ ವಧು-ವರರಿಗೆ ಆಶೀರ್ವಾದ
ಮೈಸೂರು, ಜ.22(ಆರ್‍ಕೆಬಿ)- ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟುವುದು, ಗಂಡಿಗೆ ಹೆಣ್ಣು ಮಾಲೆ ಹಾಕುವುದಷ್ಟೇ ಅಲ್ಲ. ಜವಾಬ್ದಾರಿ ವಹಿಸಿಕೊಳ್ಳುವುದೇ ಮದುವೆ. ಪತಿಗೆ ಮಾತ್ರ ಜವಾಬ್ದಾರಿ ಅಲ್ಲ. ಪತಿ-ಪತ್ನಿ ಇಬ್ಬರಿಗೂ ಜವಾಬ್ದಾರಿ ಇದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಿ.ವೀರೇಂದ್ರ ಹೆಗಡೆ ತಿಳಿಸಿದರು.
ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆ ಯಲ್ಲಿ ಸಾಮೂಹಿಕ ವಿವಾಹ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ಗಂಡಸರು ಇಂದಿನ ಸಮಾಜದಲ್ಲಿ ಏನು ಬೇಕಾದರೂ ತಿನ್ನಬಹುದು, ಮೋಜು ಮಾಡಬಹುದು. ಆದರೆ ಹೆಣ್ಣು ಮಾತ್ರ ಗೌರವ ಯುತವಾಗಿ ಇರಬೇಕೆಂಬ ತಪ್ಪು ಭಾವನೆ ಬಂದಿದೆ. ಇದು ಸರಿಯಲ್ಲ. ಗಂಡು ಹೆಣ್ಣು ಇಬ್ಬರಿಗೂ ಹೊಣೆಗಾರಿಕೆ ಇದೆ. ಈ ಹೊಣೆ ಗಾರಿಕೆಯಿಂದ ಇಬ್ಬರೂ ತಪ್ಪಿಸಿಕೊಳ್ಳಬಾರದು. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಸರಳ ಬದುಕು ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದೆ ಪ್ರತಿ ಮನೆಯಲ್ಲಿ 6ರಿಂದ 12 ಮಕ್ಕಳಿರುತ್ತಿದ್ದರು. ಆವಾಗ ಅವರು ಹೇಗೆ ಮದುವೆ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಇಂದು 1-2 ಮಕ್ಕಳಿದ್ದರೆ ಮದುವೆ ಮಾಡು ವುದು ಕಷ್ಟ ಎನಿಸುತ್ತಿದೆ. ಮದುವೆಗೆ ಪಾವಿ ತ್ರ್ಯತೆ ಕೊಡಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿ, ಸುತ್ತೂರು ಮಠಕ್ಕೂ ತಮಗೂ 50 ವರ್ಷಗಳ ಅವಿನಾಭಾವ ಸಂಬಂಧ ವಿದೆ. ಈ ಮಠ ಯಾವ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಲಕ್ಷಾಂತರ ಮಕ್ಕಳಿಗೆ ಅನ್ನ ದಾಸೋಹ, ವಿದ್ಯಾ ದಾಸೋಹ, ಬಡವರಿಗೆ ಆರೋಗ್ಯ ಚಿಕಿತ್ಸೆ ಇತ್ಯಾದಿ ಸೇವಾ ಕಾರ್ಯದ ಮೂಲಕ ದೇಶ-ವಿದೇಶಗಳಲ್ಲಿ ಮಠ ಗಳನ್ನು ಸ್ಥಾಪಿಸಿ, ಅತ್ಯಂತ ಎತ್ತರಕ್ಕೆ ಕೊಂಡೊ ಯ್ದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್, ಮಾಜಿ ಸಚಿವ ಅಲ್ಲಂ ವೀರ ಭದ್ರಪ್ಪ, ಮಾಜಿ ಶಾಸಕಿ ಲೀಲಾವತಿ ಆರ್. ಪ್ರಸಾದ್, ಶಾಸಕ ಕೆ.ಎಸ್.ಲಿಂಗೇಶ್, ಎಂಎಲ್‍ಸಿ ಜಿ.ರಘು ಆಚಾರ್ ಇತರರು ಉಪಸ್ಥಿತರಿದ್ದರು.
ಕನಕಪುರ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಮಹಾ ಸ್ವಾಮೀಜಿ ಮಾತನಾಡಿ, ಸಾಲ ಮಾಡಿ ಮದುವೆ ಮಾಡುವ ಬಡವರು ಸಾಲ ತೀರಿಸಲಾಗದೆ ಕಷ್ಟಪಡುತ್ತಾರೆ. ಅಂತಹ ವರಿಗೆ ಸುತ್ತೂರು ಜಾತ್ರೆಯಲ್ಲಿ ಸಾಮೂ ಹಿಕ ವಿವಾಹ ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಮನಸ್ಸು ಚೆನ್ನಾಗಿ ದ್ದರೆ ನಿಮ್ಮ ಬದುಕು ಚೆನ್ನಾಗಿರುತ್ತದೆ. ಸಾಂಸಾ ರಿಕ ಜೀವನ ಚೆನ್ನಾಗಿ ನಡೆಸಿಕೊಂಡು ಹೋಗಿ ಎಂದು ಇಂದಿಲ್ಲಿ ಮದುವೆಯಾದ ನವ ದಂಪತಿಗಳಿಗೆ ಕಿವಿಮಾತು ಹೇಳಿದರು.
ಕೋಟ್ಸ್…
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ಅವರಿಂದ ಪ್ರಾರಂಭವಾದ ಸಾಮೂಹಿಕ ವಿವಾಹ, ಹಲವು ವರ್ಷಗಳಿಂದ ಸುತ್ತೂರು ಮಠದಿಂದಲೂ ನಡೆಯುತ್ತಾ ಬಂದಿದೆ. ಈಗ ಸರ್ಕಾರವೂ ಸಾಮೂಹಿಕ ವಿವಾಹಗಳನ್ನು ಮಾಡಲು ಮುಂದಾಗುತ್ತಿದೆ. ಸಾಮಾಜಿಕ, ಕೌಟುಂಬಿಕ ಮತ್ತು ಧಾರ್ಮಿಕ ನೆಲೆಯಲ್ಲಿ ಇಂತಹ ಸಾಮೂಹಿಕ ವಿವಾಹಗಳು ಹೆಚ್ಚಬೇಕು.
– ಮುಕುಂದ್, ಆರ್‍ಎಸ್‍ಎಸ್ ಮಹಾ ಜಂಟಿ ಕಾರ್ಯದರ್ಶಿ
ನೂರಾರು ವರ್ಷದಿಂದ ನಿರಂತರ ದಾಸೋಹ, ಶಿಕ್ಷಣ ನೀಡುತ್ತಾ ಬಂದಿದ್ದಾರೆ. ನಮ್ಮ ಸರ್ಕಾರಗಳು ಮಧ್ಯಾಹ್ನದ ಊಟ ಕೊಡುತ್ತಿವೆ. ಬಡ ವಿದ್ಯಾರ್ಥಿಗಳಿಗೆ ದುಡಿಮೆ ಇಲ್ಲ. ಶುಲ್ಕ ನೀಡಲಾಗುವುದಿಲ್ಲ. ಊಟಕ್ಕೂ ಇರುವುದಿಲ್ಲ ಎಂಬುದನ್ನು ತಿಳಿದು ವಿದ್ಯೆ ನೀಡಲಾಗುತ್ತಿದೆ. ಇದನ್ನು ಸುತ್ತೂರು ಮಠ ನೂರಾರು ವರ್ಷದಿಂದ ನಿರಂತರವಾಗಿ ಮಾಡುತ್ತಾ ಬಂದಿದೆ.
– ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ
ಇಬ್ಬರ ಹೃದಯ ಬೆಸುಗೆ ಹಾಕುವುದೇ ಮದುವೆ. ಇದೊಂದು ವಿಶೇಷ ಸಂಪ್ರದಾಯ. ತಾಳಿ ಎಂದರೆ ತಾಳಿದವನು ಬಾಳಬೇಕು. ಹೆಂಡತಿ ಮಾತ್ರ ತಾಳಬೇಕು ಎಂದಲ್ಲ. ಇಬ್ಬರೂ ತಾಳಿಕೊಂಡು ಬಾಳಿದರೆ ಬದುಕು ಸಾರ್ಥಕವಾಗಲು ಸಾಧ್ಯ. ಸಿರಿವಂತರು ಕೂಡ ಇಂತಹ ಸಾಮೂಹಿಕ ಮದುವೆಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡಬೇಕು. ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಬೇಕು.
– ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವೆ