ಆನ್‍ಲೈನ್ ಸಿಇಟಿ ಸದ್ಯಕ್ಕಿಲ್ಲ
ಮೈಸೂರು

ಆನ್‍ಲೈನ್ ಸಿಇಟಿ ಸದ್ಯಕ್ಕಿಲ್ಲ

January 23, 2020

ಬೆಂಗಳೂರು, ಜ.22- ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಆನ್‍ಲೈನ್ ಮೂಲಕ ನಡೆಸುವ ಮಾದರಿಯಲ್ಲೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿತ್ತಾದರೂ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಆನ್‍ಲೈನ್ ಸಿಇಟಿ ಇರುವುದಿಲ್ಲ ಎನ್ನಲಾಗಿದೆ.

ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ವಿಜ್ಞಾನ, ಬಿ-ಫಾರ್ಮಾ, ಡಿ- ಫಾರ್ಮಾ ಸಹಿತ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರತಿ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ಪ್ರವೇಶ ಪರೀಕ್ಷೆಗಳು ಆನ್‍ಲೈನ್‍ನಲ್ಲೇ ನಡೆಯು ತ್ತಿರುವುದರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೂ ಆನ್‍ಲೈನ್‍ನಲ್ಲಿ ನಡೆಸುವ ಸಂಬಂಧ 2019ನೇ ಸಾಲಿನಲ್ಲಿಯೇ ಪ್ರಾಧಿಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿಯೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಜತೆಗೆ ದಾಖಲಾತಿ ಪರಿಶೀಲನೆಯನ್ನು ಬಹುತೇಕ ಆನ್‍ಲೈನ್‍ನಲ್ಲೇ ಮಾಡಿಸುವ ವ್ಯವಸ್ಥೆಗೆ ಚಾಲನೆ ನೀಡಿದೆ. ಅಲ್ಲದೆ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ವ್ಯವಸ್ಥೆ ಮಾಡಿತ್ತು.

2020-21ನೇ ಸಾಲಿನ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ನಡೆಸಲು ಪ್ರಾಧಿಕಾರ ಆರಂಭದಿಂದಲೂ ಚರ್ಚೆ, ಮಾತುಕತೆ ನಡೆಸುತ್ತಲೇ ಬಂದಿದೆ. ಆದರೆ ಈ ಪ್ರಸ್ತಾವನೆಗೆ ಈವರೆಗೂ ಸರಕಾರ ಅನುಮತಿ ನೀಡದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ಸಿಇಟಿಯನ್ನು ಹಿಂದಿನ ಪದ್ಧತಿ ಯಂತೆ ಮುಂದುವರಿಸಲು ನಿರ್ಧರಿಸಿದೆ. ಈಗಾಗಲೇ ಸಿಇಟಿ ದಿನಾಂಕವನ್ನು ಪ್ರಕಟಿಸ ಲಾಗಿದೆ. ಏ.22 ಮತ್ತು 23ರಂದು ಸಿಇಟಿ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೂ ಸಿಇಟಿ ಮಾಹಿತಿಯನ್ನು ನೀಡಲಾಗಿದೆ. ಸರಕಾರ ದಿಂದ ಆನ್‍ಲೈನ್ ಪರೀಕ್ಷೆಗೆ ಅನುಮತಿ ದೊರೆಯದೇ ಇರುವುದರಿಂದ ಹಿಂದಿನ ಕ್ರಮದಲ್ಲೇ ಮಾಡುವ ಬಗ್ಗೆಯೂ ಸಿಇಟಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Translate »