ಗೌಡರ ಅನುಭವದ ಮಾತು: ವಿಶ್ವನಾಥ್ ಸಮರ್ಥನೆ
ಮೈಸೂರು

ಗೌಡರ ಅನುಭವದ ಮಾತು: ವಿಶ್ವನಾಥ್ ಸಮರ್ಥನೆ

June 22, 2019

ಮೈಸೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿರುವ ಮಾತು ಅವರಿಗಿರುವ ಅಪಾರ ಅನುಭವದಿಂದಲೇ. ಆದ್ದರಿಂದ ಅವರ ಮಾತನ್ನು ರಾಜ್ಯ ಮತದಾರರು ಗಂಭೀರ ವಾಗಿ ಪರಿಗಣಿಸುತ್ತಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಎಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು. ಕಲಾಮಂದಿ ರದ ಕಿರುರಂಗಮಂದಿರದಲ್ಲಿ `ಕನಸು’ ನೆನಪಿನೆಡೆಗೆ ಪಯಣ… ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವ ಮುನ್ನ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ದೇಶ ಮತ್ತು ರಾಜ್ಯ ರಾಜಕಾರಣದ ಎಲ್ಲಾ ಮರ್ಮವನ್ನು ಅರಿತೇ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿರಬಹುದು ಎಂದು ದೇವೇಗೌಡರ ಹೇಳಿಕೆಯನ್ನು ಸಮರ್ಥಿಸಿದರು. ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಜನರ ಬೆಂಬಲ ಗಳಿಸಿ ಅಧಿಕಾರ ನಡೆಸು ತ್ತಿದೆ. ಹಾಗೆಯೇ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಈ ಮಧ್ಯೆ ಉಭಯ ನಾಯಕರು (ಕಾಂಗ್ರೆಸ್ ಮತ್ತು ಜೆಡಿಎಸ್) ಅಪಘಾತ ಮಾಡಿಕೊಂಡರೆ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಲಿದೆ ಎಂದು ತಿಳಿಸಿದರು.  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ತಡೆಯಲು ಪರಿಹಾರವಿದೆ. ಅದು ಮೂರು ಪಕ್ಷದ ನಾಯಕರು ಒಟ್ಟಿಗೆ ಕುಳಿತು ಮಾತನಾಡಬೇಕು. ಜನರ ಸಮಸ್ಯೆಗಳ ಬಗ್ಗೆ ಒತ್ತು ನೀಡಬೇಕಾದರೆ ಮೊದಲು ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರಲ್ಲಿ ಸಮನ್ವಯತೆ ಬರಬೇಕು. ಇದು ಮಾತುಕತೆಯಿಂದ ಮಾತ್ರ ಸಾಧ್ಯ. ಆಗ ಮಾತ್ರ ರಾಜ್ಯದಲ್ಲಿ ಸುಭದ್ರ ಸರ್ಕಾರ ಇರುವ ಬಗ್ಗೆ ಜನಮಾನಸದಲ್ಲಿ ನಂಬಿಕೆ ಮೂಡುತ್ತದೆ ಎಂದು ಹೇಳಿ ತಮ್ಮ ಮಾತನ್ನು ಮೊಟಕುಗೊಳಿಸಿದರು.

Translate »