ಹುಟ್ಟೂರಿಗೆ ಆಗಮಿಸಿದ ಸೈನಿಕನಿಗೆ ಅದ್ಧೂರಿ ಸ್ವಾಗತ
ಚಾಮರಾಜನಗರ

ಹುಟ್ಟೂರಿಗೆ ಆಗಮಿಸಿದ ಸೈನಿಕನಿಗೆ ಅದ್ಧೂರಿ ಸ್ವಾಗತ

August 3, 2018

ಚಾಮರಾಜನಗರ: ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ತನ್ನ ಹುಟ್ಟೂರು ಚಾಮರಾಜನಗರಕ್ಕೆ ಆಗಮಿಸಿದ ಸೈನಿಕ ಆರ್.ಮಂಜುನಾಥ್ ಅವರನ್ನು ದೇಶ ಪ್ರೇಮಿಗಳು, ಹಿತೈಷಿಗಳು ಹಾಗೂ ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ನಡೆಸಿದರು.

ನಗರದ ದೇವಾಂಗ ಬೀದಿಯ ನಿವಾಸಿ ಸಿ.ಎಸ್.ರಂಗಸ್ವಾಮಿ ಮತ್ತು ಮಂಗಳಮ್ಮ ಅವರ ದ್ವಿತೀಯ ಪುತ್ರ ಆರ್.ಮಂಜುನಾಥ್, ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿವೃತ್ತರಾದ ಕಾರಣ ನಗರಕ್ಕೆ ಬುಧವಾರ ರಾತ್ರಿ ಆಗಮಿಸಿದರು. ಈ ವೇಳೆ ಅವರನ್ನು ಪಟಾಕಿ ಸಿಡಿಸಿ, ಹೂ ಹಾರ ಹಾಕಿ, ಜೈಕಾರ ಹಾಕಿ ಬರಮಾಡಿಕೊಳ್ಳಲಾಯಿತು.

ಬೆಳಗಾಂನಿಂದ ಮೈಸೂರು ಮಾರ್ಗವಾಗಿ ಚಾಮರಾಜನಗರಕ್ಕೆ ಸಾರಿಗೆ ಬಸ್ನಲ್ಲಿ ಆರ್.ಮಂಜುನಾಥ್ ಆಗಮಿಸಿದರು. ಈ ವೇಳೆ ಸಂತೇಮರಹಳ್ಳಿ ವೃತ್ತದಲ್ಲಿ ಅವರಿಗೆ ಹಾರ ಹಾಕಿ, ಜೈಕಾರ ಕೂಗಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ತೆರೆದ ವಾಹನದಲ್ಲಿ ಮೆರವಣೆಗೆ ಮೂಲಕ ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಪೂಜೆ ಸಲ್ಲಿಸಿದ ನಂತರ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ ಮೂಲಕ ಅವರ ದೇವಾಂಗ ಬೀದಿ ನಿವಾಸಕ್ಕೆ ಕರೆದೊಯ್ದದ್ದು ವಿಶೇಷವಾಗಿತ್ತು. ನೂರಾರು ದೇಶಪ್ರೇಮಿಗಳು, ಹಿತೈಷಿಗಳು, ಕುಟುಂ ಬಸ್ಥರು ಭಾಗವಹಿಸಿದ್ದರು.

Translate »