ನೌಕಾಪಡೆಯ ರಿಯರ್ ಎಡ್ಮಿರಲ್ ಆಗಿ ಕೊಡಗಿನ ಐಚೆಟ್ಟಿರ ಬಿ.ಉತ್ತಯ್ಯ ನೇಮಕ
ಕೊಡಗು

ನೌಕಾಪಡೆಯ ರಿಯರ್ ಎಡ್ಮಿರಲ್ ಆಗಿ ಕೊಡಗಿನ ಐಚೆಟ್ಟಿರ ಬಿ.ಉತ್ತಯ್ಯ ನೇಮಕ

August 3, 2018

ಮಡಿಕೇರಿ:  ಕೊಡಗು ಜಿಲ್ಲೆ ಯಿಂದ ಇದೇ ಮೊದಲ ಬಾರಿಗೆ ದೇಶದ ನೌಕಾಪಡೆಯ 3ನೇ ಅತ್ಯುನ್ನತ ಸ್ಥಾನಕ್ಕೆ ಐಚೆಟ್ಟಿರ ಬಿ.ಉತ್ತಯ್ಯ ನೇಮಕವಾಗುವ ಮೂಲಕ ಹೊಸ ಸೇನಾ ಇತಿಹಾಸವೊಂದು ದಾಖಲಾಗಿದೆ.

ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗೆ ಸಂಬಂಧಿಸಿದಂತೆ ಸೇನೆಯ ಮೂರೂ ವಿಭಾಗಗಳಾದ ಭೂ ಸೇನೆ, ವಾಯುಸೇನೆ ಹಾಗೂ ನೌಕಾ ಪಡೆಯ ಏಕೈಕ ಮಹಾದಂಡ ನಾಯಕರಾಗಿ ಸೇವೆ ಸಲ್ಲಿಸಿದವರು (ಕಮಾಂಡರ್ ಇನ್ ಚೀಫ್) ಕೊಡಗಿನ ಧೀಮಂತ ಸೇನ ಧಿಕಾರಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ. ಭೂಸೇನೆ, ವಾಯು ಪಡೆ ಹಾಗೂ ನೌಕಾಪಡೆಯನ್ನು ಪ್ರತ್ಯೇಕ ವಿಭಾಗವಾಗಿ ವಿಂಗಡಿಸಿದ ಸಂದರ್ಭ ಕೆ.ಎಂ. ಕಾರ್ಯಪ್ಪ ಅವರ ಬಳಿಕ ಭೂಸೇನೆಯ ಮುಖ್ಯಸ್ಥರಾದವರು ಕೊಡಗಿನವರೇ ಆದ ಪದ್ಮಭೂಷಣ, ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಎಂಬದು ಪ್ರಸ್ತುತ ಸೇನಾ ಇತಿಹಾಸ.

ಭೂಸೇನೆಯಲ್ಲಿ ಜನರಲ್ ಹುದ್ದೆಯ ನಂತರ ಬರುವ ಲೆಫ್ಟಿನೆಂಟ್ ಜನರಲ್ ಸ್ಥಾನ ದಲ್ಲಿಯೂ ಕೊಡಗಿನ ಹಲವರು ಕರ್ತವ್ಯ ನಿರ್ವಹಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಹುದ್ದೆಯ ನಂತರದ ಮೂರನೆಯ ಅತ್ಯುನ್ನತ ಸ್ಥಾನವಾದ ಮೇಜರ್ ಜನರಲ್‍ಗಳಾಗಿ ಸುಮಾರು 20ಕ್ಕೂ ಅಧಿಕ ಕೊಡಗಿನ ಸೇನಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ.

ವಾಯುಪಡೆಗೆ ಸಂಬಂಧಿಸಿದಂತೆ ಕೊಡಗಿನ ಅಧಿಕಾರಿಗಳು ಗುರುತಿಸಲ್ಪಟ್ಟಿದ್ದಾರೆ. ವಾಯುಪಡೆಯ ಅತ್ಯುನ್ನತ ಹುದ್ದೆಯಾದ ಏರ್‍ಚೀಫ್ ಮಾರ್ಷಲ್ ಸ್ಥಾನಕ್ಕೆ ಕೊಡಗಿನ ಯಾರೂ ನೇಮಕವಾಗದಿದ್ದರೂ, ಎರಡನೆಯ ಹುದ್ದೆಯಾದ ಏರ್‍ಮಾರ್ಷಲ್ ಗಳಾಗಿ ಈ ವರೆಗೆ 4 ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ.

ನೌಕಾ ಪಡೆಯಲ್ಲಿ ಕೊಡಗಿನ ಅಧಿಕಾರಿಗಳು ಉನ್ನತ ಸ್ಥಾನಕ್ಕೆ ನಿಯುಕ್ತಿಯಾಗದಿದ್ದರೂ, 4ನೇ ಉನ್ನತ ಸ್ಥಾನವಾದ ಕಮಾಂಡರ್ ಶ್ರೇಣಿಯವರೆಗೆ ಕೊಡಗಿನ ಅಧಿಕಾರಿಗಳು ನೇಮಕವಾಗಿದ್ದರು. ಈ ಹಿಂದೆ ಕಮಾಂಡರ್‍ಗಳಾಗಿ ಚೆಕ್ಕೇರ ಬೆಳ್ಯಪ್ಪ, ಪಾಂಡಂಡ ಜಿ. ಮುತ್ತಣ್ಣ ಹಾಗೂ ಕಲಿಯಂಡ ಬೋಪಣ್ಣ ಅವರುಗಳು ಸೇವೆ ಸಲ್ಲಿಸಿದ್ದಾರೆ.

ನೌಕಾಪಡೆಯ ಮೂರನೆಯ ಅತ್ಯುನ್ನತ ಸ್ಥಾನವಾದ ‘ರಿಯರ್ ಎಡ್ಮಿರಲ್’ ಸ್ಥಾನಕ್ಕೆ ಪ್ರಪ್ರಥಮ ಬಾರಿಗೆ ಕೊಡಗಿನ ಸೇನಾಧಿಕಾರಿಯೊಬ್ಬರು ಆಯ್ಕೆಯಾಗುವ ಮೂಲಕ ಕೊಡಗಿನ ಸೇನಾ ಪರಂಪರೆಗೆ ಹೊಸ ತೊಂದು ಗರಿ ಮೂಡಿದಂತಾಗಿದೆ.

ಭಾರತೀಯ ಸೇನೆಗೆ ಕೊಡಗು ಜಿಲ್ಲೆಯ, ಅದರಲ್ಲೂ ವಿಶೇಷವಾಗಿ ಅತ್ಯಂತ ಸಣ್ಣ ಸಮುದಾಯವೂ ಆಗಿರುವ ಕೊಡವ ಜನಾಂಗದ ಬಹುದೊಡ್ಡ ಕೊಡುಗೆ ನೀಡಿ ದಂತಾಗಿದೆ. ಐಚೆಟ್ಟೀರ ಬಿ. ಉತ್ತಯ್ಯ 1984ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಇವರು ಕರ್ತವ್ಯ ನಿರ್ವಹಣೆ ಯೊಂದಿಗೆ ಬಿಟೆಕ್, ಎಂಟೆಕ್ ಹಾಗೂ ಎಂಫಿಲ್ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಪ್ರೈಮ್ ಡ್ರೈವ್ ಶಿಪ್ ಪ್ರೊಡಕ್ಷನ್ ನಲ್ಲಿ ಅಧಿಕಾರಿ ಕಮಡೋರ್ ಆಗಿ ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ರಿಯರ್ ಎಡ್ಮಿರಲ್ ಪದವಿಯನ್ನು ಅಲಂಕರಿಸಲಿದ್ದಾರೆ.

ಉತ್ತಯ್ಯ ಅವರ ತಂದೆ ಐಚೆಟ್ಟಿರ ಎಂ. ಬೆಳ್ಯಪ್ಪ ಅವರು ಚೆನ್ನೈಯಲ್ಲಿ ಈ ಹಿಂದೆ ಹಲವು ವರ್ಷ ಹೌಸಿಂಗ್ ಬೋರ್ಡ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಕಳೆದ ಹಲವು ವರ್ಷಗಳಿಂದ ಮಕ್ಕಂದೂರಿನಲ್ಲಿ ನೆಲೆಸಿದ್ದ ಬೆಳ್ಯಪ್ಪ ಅವರು ಕಳೆದ ವರ್ಷ ಕಣ್ಮರೆಯಾಗಿದ್ದಾರೆ. ಉತ್ತಯ್ಯ ಅವರ ಸಹೋದರ ಅಮೇ ರಿಕಾದಲ್ಲಿ ಕೋಕಾಕೋಲಾ ಸಂಸ್ಥೆಯಲ್ಲಿ ಗ್ಲೋಬಲ್ ಡ್ರೈವ್ ಅಧಿಕಾರಿಯಾಗಿದ್ದಾರೆ. ತಾಯಿ ಲಲಿತ (ತವರುಮನೆ -ಚೆಪ್ಪುಡೀರ) ಮಕ್ಕಂದೂರಿನಲ್ಲಿ ನೆಲೆಸಿದ್ದಾರೆ. ಉತ್ತಯ್ಯ ಅವರು ಮನೆಯಪಂಡ ರವಿ ಅವರ ಪುತ್ರಿ ರಮ್ಯ ಅವರನ್ನು ವಿವಾಹವಾಗಿದ್ದು, ಓರ್ವ ಪುತ್ರಿ ಕಾನೂನು ವ್ಯಾಸಂಗ ಮಾಡಿದ್ದರೆ, ಓರ್ವ ಪುತ್ರ ಆರ್ಕಿಟೆಕ್ಟ್ ಆಗಿ ಬೆಂಗಳೂರಿನಲ್ಲಿದ್ದಾರೆ.

Translate »