ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ
ಮೈಸೂರು

ಹಸಿರು ಮೈಸೂರು-ಲಕ್ಷ ವೃಕ್ಷ ಅಭಿಯಾನ

September 5, 2019

ಮೈಸೂರು, ಸೆ.4(ಆರ್‍ಕೆಬಿ)- ಭೂಮಿ ತಾಯಿ ಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಸಂಕಲ್ಪದೊಂದಿಗೆ ಹೆಚ್.ವಿ.ರಾಜೀವ್ ಸ್ನೇಹ ಬಳಗ, ಜಿಲ್ಲಾ ಪತ್ರಕರ್ತರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸೆ.6ರಂದು ಮೈಸೂರಿನಲ್ಲಿ `ಹಸಿರು ಮೈಸೂರು – ಲಕ್ಷ ವೃಕ್ಷ ಆಂದೋಲನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂ ರಿನ ಜೆ.ಪಿ.ನಗರ ಡಾ.ಪುಟ್ಟರಾಜ ಗವಾಯಿ ಕ್ರೀಡಾಂ ಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಲಕ್ಷ-ವೃಕ್ಷ ಅಭಿಯಾನವನ್ನು ಧರ್ಮ ಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಉದ್ಘಾಟಿಸಲಿದ್ದಾರೆ. ಕೊಯಮತ್ತೂರಿನ ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ ವಾಸುದೇವ್, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ಶ್ರೀ ವಿಜಯಾನಂದತೀರ್ಥ ಸ್ವಾಮೀಜಿ ಅತಿಥಿ ಯಾಗಿ ಭಾಗವಹಿಸುವರು. ಶಾಸಕ ಎಸ್.ಎ. ರಾಮದಾಸ್ ಅಧ್ಯಕ್ಷತೆ ವಹಿಸುವರು ಎಂದರು.

ಹತ್ತು ಸಾವಿರ ಸಸಿಗಳ ಸಾರ್ವಜನಿಕ ವಿತರಣೆ ಯನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೆರವೇರಿಸುವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪರಿಸರ ಪೋಷಕ ಪ್ರಶಸ್ತಿ ಪ್ರದಾನ ಮಾಡುವರು. ಸಂಸದ ಪ್ರತಾಪ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ರಾದ ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಎಲ್. ನಾಗೇಂದ್ರ ಇನ್ನಿತರರು ಭಾಗವಹಿಸುವರು ಎಂದರು.

ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಬಹುದಾದ ಗಿಡಗಳನ್ನೇ ಮೈಸೂರಿನಾದ್ಯಂತ ನೆಡಲಾಗುವುದು. ಪ್ರತೀ ವರ್ಷ ಕನಿಷ್ಠ 1 ಲಕ್ಷ ಗಿಡ ಗಳನ್ನು ನೆಡುವ ಜೊತೆಗೆ ಅವುಗಳ ಬೆಳವಣಿಗೆಗೆ ಪೂರಕ ನೆರವು ನೀಡಲಾಗುವುದು. ಮನೆಗೊಂದು ಮರ- ಇಂಗಿದ ಬರ ಎಂಬ ಸಂಕಲ್ಪದೊಂದಿಗೆ ಮೈಸೂ ರಿನ ಜನತೆ ಈ ಮಹತ್ವದ ಕಾರ್ಯಕ್ಕೆ ಬೆಂಬಲ ವಾಗಿ ನಿಲ್ಲಬೇಕಿದೆ. ಪರಿಸರದಲ್ಲಿ ಮೈಸೂರನ್ನು ಮೊದಲ ಸ್ಥಾನಕ್ಕೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ಕೋಟಿ ವೃಕ್ಷದ ಶ್ರೀಕಾಂತ್, ನಿವೃತ್ತ ಅರಣ್ಯಾಧಿಕಾರಿ ಲಕ್ಷ್ಮಣ್, ನಮ್ಮ ಮೈಸೂರು ಫೌಂಡೇಷನ್‍ನ ದಶರಥ್, ಚಾಮ ರಾಜನಗರದ ವೆಂಕಟೇಶ್, ಮೈಸೂರಿನ ಹೆಸರಾಂತ ಪರಿಸರ ಪ್ರೇಮಿ ರಘುಲಾಲ್ ಅಂಡ್ ಕಂಪನಿಯ ರಾಘವನ್ ಅವರನ್ನು ಸನ್ಮಾನಿಸಲಾಗುವುದು  ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪತಂಜಲಿ ಯೋಗ ಶಿಕ್ಷಣದ ಎಂ.ನಾಗಭೂಷಣ್, ಮಾಜಿ ಮೇಯರ್‍ಗಳಾದ ಪುರುಷೋತ್ತಮ್, ಭೈರಪ್ಪ ಇನ್ನಿತರರು ಉಪಸ್ಥಿತರಿದ್ದರು.

 

Translate »