ಕೃಷಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್
ಚಾಮರಾಜನಗರ

ಕೃಷಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

July 10, 2018
  • ಜಿಲ್ಲೆಯಲ್ಲಿ ಜನರ ಬಹುದಿನಗಳ ಬೇಡಿಕೆ ಈಡೇರಿಕೆ
  • ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾಲೇಜು ಆರಂಭ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳು ಸದ್ದಿಲ್ಲದೇ ಸಾಗಿದೆ. ಈ ಮೂಲಕ ಗಡಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಸನಿಹವಾಗಿದೆ.

ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿ ಸುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಗ್ರೀನ್‍ಸಿಗ್ನಲ್ ನೀಡಿದ್ದಾರೆ. ಇದಕ್ಕೆ ಸಹಿಯನ್ನು ಸಹ ಹಾಕಿದ್ದಾರೆ. ಸರ್ಕಾರ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಬಳಿ ಕಡತ ಇಟ್ಟು ಅವರ ಅನುಮತಿ ಮುದ್ರೆ ಹಾಕು ವುದಷ್ಟೇ ಬಾಕಿ ಇದೆ. ಈ ಕಾರ್ಯವೂ ಸಹ ಇನ್ನೂ ಒಂದರೆಡು ದಿನಗಳಲ್ಲಿ ಆಗಲಿದೆ ಎಂಬ ಖಚಿತ ಮಾಹಿತಿ ‘ಮೈಸೂರು ಮಿತ್ರ’ನಿಗೆ ದೊರೆತಿದೆ.

ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು ತೆರೆ ಯಬೇಕು ಎಂದು ಸಂಸದ ಆರ್.ಧ್ರುವನಾರಾಯಣ ವಿಶೇಷ ಮುತುವರ್ಜಿ ವಹಿಸಿದರು. ಇದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿದ್ದರು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಮೇಲೆ ತೀವ್ರ ಒತ್ತಡ ತಂದು, ಜಿಲ್ಲೆಗೆ ಬಜೆಟ್‍ನಲ್ಲಿ ಕೃಷಿ ಕಾಲೇಜು ಮಂಜೂರಾಗಲು ಪರಿಶ್ರಮಪಟ್ಟಿದ್ದರು.

ಜಿಲ್ಲೆಗೆ ಬಜೆಟ್‍ನಲ್ಲಿ ಕೃಷಿ ವಿಜ್ಞಾನ ಕಾಲೇಜು ಮಂಜೂರಾಗುತ್ತಿದ್ದಂತೆಯೇ ಧ್ರುವನಾರಾಯಣ ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ನಗರಕ್ಕೆ ಕರೆಸಿ ಆಗಿನ ಜಿಲ್ಲಾಧಿಕಾರಿಗಳೊಂದಿಗೆ ಕೃಷಿ ಕಾಲೇಜು ಕಟ್ಟಡ ನಿರ್ಮಿಸಲು ಒಂದೆರಡು ಕಡೆ ಜಾಗವನ್ನೂ ಸಹ ಪರಿಶೀಲಿಸಿದ್ದಾರೆ. ಸಮೀಪದ ಯಡಬೆಟ್ಟ ತಪ್ಪಲಿ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಹಸ್ತಾಂತರಿ ಸುವ ಪ್ರಕ್ರಿಯೆಯೂ ಸಹ ಪ್ರಗತಿಯಲ್ಲಿ ಇದೆ.

ಈ ಶೈಕ್ಷಣ ಕ ಸಾಲಿನಿಂದಲೇ(2018-19) ಕೃಷಿ ಕಾಲೇಜು ಆರಂಭವಾಗಲಿದೆ. 30 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವಿದೆ. ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿಯೇ ತಾತ್ಕಾಲಿಕವಾಗಿ ಕಾಲೇಜು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಕಾಲೇಜು ಪ್ರಾರಂಭವಾದ ನಂತರ ಯಡಬೆಟ್ಟದ ತಪ್ಪಲಿನಲ್ಲಿ ಗುರುತಿಸಿರುವ ಜಾಗವನ್ನು ಹಸ್ತಾಂತರಿಸಿಕೊಂಡು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಧ್ರುವನಾರಾಯಣ ತಿಳಿಸಿದರು.

‘ನಾನು ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನಾನು ಪ್ರತಿನಿಧಿಸುವ ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿಸಬೇಕು ಎಂಬ ಆಸೆ ಇತ್ತು. ಇದಕ್ಕಾಗಿ ನಾನು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮೇಲೆ ತೀವ್ರ ಒತ್ತಡ ತಂದಿದ್ದೆ. ಮುಖ್ಯ ಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಚಾಮರಾಜನಗರದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪಿಸುವುದಾಗಿ ಪ್ರಕಟಿಸುವ ಮೂಲಕ ನನ್ನ ಆಸೆಯನ್ನು ಈಡೇರಿಸಿದರು. ಈ ವರ್ಷದಿಂದಲೇ ಕಾಲೇಜು ಸ್ಥಾಪನೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ’ ಎಂದು ಧ್ರುವನಾರಾಯಣ ಅವರು ‘ಮೈಸೂರು ಮಿತ್ರ’ನಿಗೆ ಹೇಳಿದರು.

ಕೃಷಿಗೆ ಸಂಬಂಧಿಸಿದ ಕಾಲೇಜುಗಳು ಪ್ರತಿ ಜಿಲ್ಲೆಯಲ್ಲೂ ಇವೆ. ಮೈಸೂರಿನಲ್ಲಿ ತೋಟಗಾರಿಕಾ ಕಾಲೇಜು, ಕೊಡಗಿನಲ್ಲಿ ಅರಣ್ಯ ಕಾಲೇಜು, ಮಂಡ್ಯದಲ್ಲಿ ಕೃಷಿ ಕಾಲೇಜು, ಕೋಲಾರ ದಲ್ಲಿ ರೇಷ್ಮೆ ಕಾಲೇಜು ಇರುವಂತೆ ಚಾಮರಾಜನಗರ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು ತೆರೆಯಬೇಕು ಎಂಬ ಆಸೆ ಇತ್ತು. ಇದರಲ್ಲಿ ಯಶಸ್ವಿಯಾದ ತೃಪ್ತಿ ಇದೆ. ಈ ವರ್ಷದಿಂದಲೇ ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಕ್ಕೆ ಎಲ್ಲಾ ಪ್ರಯತ್ನ ಸಾಗಿದೆ. – ಆರ್. ಧ್ರುವನಾರಾಯಣ, ಸಂಸದ

Translate »