ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ
ಚಾಮರಾಜನಗರ

ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ

June 5, 2018

ಚಾಮರಾಜನಗರ:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಫಲಕ ನೋಡಿ ಅದರ ಆವರಣದೊಳಗೆ ದೃಷ್ಟಿ ಹಾಯಿಸಿದರೆ ಇದು ಶಾಲೆಯೋ ಅಥವಾ ಕೃಷಿ ಜಮೀನೋ ಅಥವಾ ಉದ್ಯಾನವೋ ಎಂಬ ಅನುಮಾನ ಮೂಡುತ್ತದೆ.ಬಾಳೆ, ತೆಂಗು, ಬೇವಿನ ಮರಗಳ ಜತೆಗೆ, ಹಣ್ಣು-ತರಕಾರಿ ಮತ್ತು ಬಣ್ಣ ಬಣ್ಣದ ಹೂವಿನ ಗಿಡಗಳ ಜಗತ್ತು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುತ್ತದೆ. ಜತೆಗೆ, ಅಲಂಕಾರಿಕ ಗಿಡಗಳು ಉದ್ಯಾನವನ್ನು ನೆನಪಿ ಸುತ್ತದೆ. ಹೀಗೆ ಶಾಲೆಯ ಆವರಣವನ್ನೇ ಪುಟ್ಟ ತೋಟವನ್ನಾಗಿಸಿರುವುದು ಜಿಲ್ಲೆಯ ಹನೂರು ತಾಲೂಕಿನ ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಶಾಲೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ಈ ಬಾರಿಯ ಘೋಷ ವಾಕ್ಯ ವಾದ ‘ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ಯನ್ನು ಅರ್ಥಪೂರ್ಣವಾಗಿಸುವ ಕೆಲಸವನ್ನು ದಶಕದ ಹಿಂದಿನಿಂದಲೇ ಮಾಡುತ್ತಿದೆ.1954ರಲ್ಲಿ ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆರಳಣ ಕೆಯ ವಿದ್ಯಾರ್ಥಿ ಗಳೊಂದಿಗೆ 1 ರಿಂದ 5ನೇ ತರಗತಿಯವರೆಗೆ ಪ್ರಾರಂಭವಾಯಿತು. ಬಳಿಕ, ಹಂತ-ಹಂತವಾಗಿ ಬೆಳೆಯುವ ಜೊತೆಗೆ ಪರಿಸರ ಕಾಳಜಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ತಾಲೂಕಿನಲ್ಲಿಯೇ ಉತ್ತಮ ಶಾಲೆಯಾಗಿದೆ. ಪ್ರಸ್ತುತ 1 ರಿಂದ 8ನೇ ತರಗತಿಯವರೆಗೆ 110ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡುತ್ತಿದ್ದು, ಖಾಸಗಿ ಶಾಲೆ ಗಳಿಗೆ ಸೆಡ್ಡು ಹೊಡೆದಿದೆ.

ಮಕ್ಕಳೇ ಕೃಷಿಕರು: ಶಾಲೆಯ ಆವರಣ ದಲ್ಲಿ ತುಳಸಿ, ಕಾಮ ಕಸ್ತೂರಿ, ಚಕ್ರಮುನಿ, ಲೋಳೆಸರ, ಮಧುನಾಶಿನಿ, ಒಂದೆಲಗ ಸೇರಿದಂತೆ 36ಕ್ಕೂ ಹೆಚ್ಚು ಔಷಧಿಯ ಸಸಿಗಳಿವೆ. ದಾಸವಾಳ, ನಂದಿಬಟ್ಟಲು, ನಾಗಕಣಗಲೆ, ಕಣಗಲೆ, ರಾಸ್‍ಮಸ್, ಚೆಂಡು ಹೂ, ಡೆಸಿಯಾ, ಪಾಮ್ಸ್, ಬಟರ್‍ಪ್ರೂಟ್, ಚಕ್ರಮುನಿ, ಸೇವಂತಿ, ಬ್ರಹ್ಮಕಮಲ ಸೇರಿದಂತೆ ಹಲವು ಜಾತಿಯ ಹೂವಿನ ಗಿಡಗಳನ್ನು ಕಾಣಬಹುದಾಗಿದೆ. ಹೊಂಗೆ, ನುಗ್ಗೆ, ಕ್ರಿಸ್ ಮಸ್ ಮರ, ಸಿಲ್ವರ್‍ಹೋರ್, ಸಿಂಗಾ ಪುರ ಚೆರ್ರಿ ಸೇರಿದಂತೆ ಇತರೆ ಮರಗಳು ಹಾಗೂ ಶಾಲೆಯ ಬಿಸಿಯೂಟಕ್ಕೆ ಬಳಸುವ ಬಹುತೇಕ ತರಕಾರಿ, ಹಣ್ಣು, ಸೊಪ್ಪು ಗಳನ್ನು ಬೆಳೆಯಲಾಗಿದೆ. ಇವುಗಳ ಪಾಲನೆ, ಪೋಷಣೆಯನ್ನು ಮಕ್ಕಳೇ ಮಾಡುತ್ತಿದ್ದು, ಇಲ್ಲಿ ಅವರೇ ಕೃಷಿಕರಾಗಿದ್ದಾರೆ. ಅವ ರೊಂದಿಗೆ ಶಿಕ್ಷಕರು ಕೈ ಜೋಡಿಸುವ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ಅವರಲ್ಲಿ ಪರಿ ಸರ ಪ್ರೇಮ ಬೆಳೆಸುತ್ತಿದ್ದಾರೆ.

ಸಾವಯವ ಘಟಕ: ಶಾಲೆಯ ಆವರಣ ದಲ್ಲಿ ಮಳೆ ನೀರು ಸಂಗ್ರಹಕ್ಕೆ ಇಂಗುಗುಂಡಿ ಸಹ ನಿರ್ಮಿಸಲಾಗಿದೆ. ಇಲ್ಲಿ ಬೆಳೆಯುವ ಗಿಡಗಳಿಗೆ ಇಲ್ಲಿಯೇ ಗೊಬ್ಬರವೂ ತಯಾ ರಾಗುತ್ತದೆ. ಅದಕ್ಕಾಗಿ ಸಾವಯವ ಘಟಕ ನಿರ್ಮಿಸಲಾಗಿದೆ. ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಮಕ್ಕಳಿಗೆ ಕೃಷಿ ಚಟು ವಟಿಕೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿ ಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಎಸ್‍ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರದ ಜತೆಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದಿಂದ ಶಾಲೆ ಹಸಿರೀಕರಣವಾಗಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ತೃಪ್ತಿ ನೀಡಿದೆ.
-ಪುಷ್ಪಲತಾ, ಮುಖ್ಯ ಶಿಕ್ಷಕಿ, ಹಲಗಾಪುರ ಶಾಲೆ

‘ಶಾಲೆಯ ಆವರಣದಲ್ಲಿ ಕೆಲವು ಗಿಡಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸುವ ಕೆಲಸವನ್ನು ಈ ಮೊದಲೇ ಆರಂಭಿಸಲಾಗಿತ್ತು. ಪ್ರಸ್ತುತ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರು, ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಅರಣ್ಯ ಇಲಾಖೆ, ಶಾಲಾ ಮುಖ್ಯಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಶಾಲೆ ತಲುಪಿದೆ. ಪ್ರಸಕ್ತ ಸಾಲಿನ ‘ಪರಿಸರ ಮಿತ್ರ’ ಪ್ರಶಸ್ತಿಯನ್ನು ಮುಡಿಗೇಡಿಸಿ ಕೊಂಡಿದೆ’ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ಪ್ರದೀಪ್‍ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಿಂದ ಶಾಲೆಯ ಆವರಣದಲ್ಲಿ ಕೊಳವೆ ಬಾವಿ ಕೊರೆಯಿಸ ಲಾಗಿದೆ. ಇದರಿಂದ ನೀರಿನ ಸಮಸ್ಯೆಯಿಲ್ಲ. ಶಾಲಾ ಸುತ್ತಲೂ ರಕ್ಷಣಾ ಗೋಡೆ ನಿರ್ಮಿ ಸಲಾಗಿದ್ದು, ಆ ಗೋಡೆಯ ಒಳ ಹಾಗೂ ಹೊರ ಭಾಗದಲ್ಲಿ ಸಮಾಜ, ಶಿಕ್ಷಣ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸು ವಂತಹ ಜಾಗೃತಿ ಸಂದೇಶ ಬರೆಯ ಲಾಗಿದೆ. ಸುಸಜ್ಜಿತ ಶೌಚಾಲಯವಿದೆ ಎಂದು ಮಾಹಿತಿ ನೀಡಿದರು.

ಶಾಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿದ್ದೇವೆ. ಪ್ರತಿನಿತ್ಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರದ ಸಂರಕ್ಷಣೆಯ ಬಗ್ಗೆ ವಿಶೇಷ ಮಾಹಿತಿ ನೀಡುತ್ತಿದ್ದೇವೆ.
-ಬಿ.ಪ್ರದೀಪ್‍ಕುಮಾರ್ , ಶಿಕ್ಷಕ, ಹಲಗಾಪುರ ಶಾಲೆ

ಗ್ರಾಮ ನೈರ್ಮಲ್ಯ ಕೈಂಕರ್ಯ

ಶಾಲಾ ಪರಿಸರ ನಿರ್ವಹಣೆಯಲ್ಲದೆ ಗ್ರಾಮ ನೈರ್ಮಲ್ಯಕ್ಕಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನೊಳಗೊಂಡ ‘ಪರಿಸರ ಸಂಘ’ ಅಸ್ತಿತ್ವದಲ್ಲಿದೆ. ಸಂಘವು ಪ್ಲಾಸ್ಟಿಕ್ ನಿರ್ಮೂಲನೆ, ಕಸ ವಿಲೇವಾರಿ, ಪಾರ್ಥೇನಿಯಂ ನಿರ್ಮೂಲನೆ, ಪರಿಸರ ಕುರಿತು ಅರಿವಿನ ಜಾಥಾ, ಜತೆಗೆ ಗ್ರಾಮದ ಅಂಗಡಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ವಿನಂತಿಸುವ ಕೆಲಸವನ್ನು ಪುಟಾಣ ಗಳು ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗ್ರಾಮದ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುವ ಮೂಲಕ ಅವುಗಳ ಪೋಷಣೆ ಮಾಡಲಾಗುತ್ತಿದೆ.

Translate »