ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ
ಮೈಸೂರು

ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ

February 22, 2019

ಮೈಸೂರು: ಮೈಸೂರು ತಾಲೂಕು, ಚಾಮುಂ ಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದ ರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ನಡೆದ ಪ್ರಸಂಗ ಇಂದು ಮಧ್ಯಾಹ್ನ ನಡೆಯಿತು. ಗ್ರಾಮದಲ್ಲಿ ಕೈಗೊಂಡಿದ್ದ ಮುಖ್ಯ ರಸ್ತೆಯ 8 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಆಗಮಿಸಿದ್ದರು. ಸಚಿವರು ಆಗಮಿಸುತ್ತಿದ್ದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಆ ವೇಳೆ ಸಿದ್ದರಾಮಯ್ಯ ಬೆಂಬಲಿಗರೆನ್ನಲಾದ ಕೆಲವರು, ನೀವು ಮುಖ್ಯ ರಸ್ತೆ ಅಭಿವೃದ್ಧಿ ಕೆಲಸ ಮಾಡಿಸುವ ಮೊದಲು, ಊರೊಳಗಿನ ಚರಂಡಿಗಳು ತುಂಬಿಕೊಂಡು ಸೊಳ್ಳೆಗಳ ತಾಣ ವಾಗಿದೆ. ಜನರು ಹೇಗೆ ಬದುಕಬೇಕು, ಅಲ್ಲಿಗೆ ಬಂದು ನೋಡಿ. ನಾವೇನು ಮನುಷ್ಯರಲ್ಲವೆ? ಎಂದು ಸಚಿವರನ್ನು ಸುತ್ತುವರಿದು ಪ್ರಶ್ನಿಸಲಾರಂಭಿಸಿದರು. ಚರಂಡಿ ಕಟ್ಟಿಕೊಂಡು ದುರ್ವಾಸನೆ ಬರುತ್ತಿರುವುದಕ್ಕೆ ನಾನು ಕಾರಣವಲ್ಲ. ಈ ಹಿಂದೆಯೇ ಚರಂಡಿ ಮತ್ತು ರಸ್ತೆಗಳನ್ನೆಲ್ಲಾ ಮಾಡಿಸಿದ್ದೆ. ಈಗ ಮತ್ತೆ ಆಯ್ಕೆಯಾದ ನಂತರ ಮುಖ್ಯ ರಸ್ತೆ ಆಸ್ಪಾಲ್ಟಿಂಗ್ ಮಾಡಲು 8 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಸೆಪ್ಟಿಕ್ ಟ್ಯಾಂಕ್ ಕಾಮ ಗಾರಿ ನಡೆಯುತ್ತಿದೆ. ರಸ್ತೆ ಕೆಲಸ ಮುಗಿಯುತ್ತಿದ್ದಂತೆಯೇ ಚರಂಡಿ ಕಾಮಗಾರಿ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲಿಯ ವರೆಗೆ ಸಹಿಸದೇ ಈ ರೀತಿ ಪ್ರಶ್ನಿಸುತ್ತಿದ್ದೀರಲ್ಲಾ ಸರಿಯೇ? ಎಂದು ಜಿಟಿಡಿ ಪ್ರಶ್ನಿಸಿದರು. ಸಮಾಧಾನವಾಗದ ಕೆಲವರು ಏರು ಧ್ವನಿಯಲ್ಲಿ ಮಾತನಾಡಲಾರಂಭಿಸಿದಾಗ ಸಚಿವರ ಜೊತೆ ಯಲ್ಲಿದ್ದ ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ ಹಾಗೂ ಇತರರು ಉತ್ತರಿಸಲು ಮುಂದಾದಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿ ದ್ದಂತೆಯೇ ಸ್ಥಳದಲ್ಲಿದ್ದ ಜಯಪುರ ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಎಚ್ಚೆತ್ತು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಹಬದಿಗೆ ತಂದರು. ನಂತರ ಗುದ್ದಲಿಪೂಜೆ ನೆರವೇರಿಸಿದ ಸಚಿವ ಜಿ.ಟಿ.ದೇವೇಗೌಡ ಹಾಗೂ ಬೆಂಬಲಿಗರು ಗ್ರಾಮದಿಂದ ತೆರಳಿದರು.

Translate »