ಚಾಮುಂಡೇಶ್ವರಿ ದೇವಾಲಯಕ್ಕೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಂದಿದ್ದ ಶಾಸಕ ಜಿ.ಟಿ.ದೇವೇಗೌಡರು ತಮ್ಮ ಪೂಜೆ ಮುಗಿಯುತ್ತಿದ್ದಂತೆ ಬೆಟ್ಟದಿಂದ ನಿರ್ಗ ಮಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬರುವ ವಿಚಾರ ತಿಳಿದಿ ದ್ದರೂ ಅವರು ಬರುವ ಕೆಲ ನಿಮಿಷಗಳ ಮೊದಲೇ ಅಲ್ಲಿಂದ ನಿರ್ಗಮಿಸುವ ಮೂಲಕ ಜೆಡಿಎಸ್ ನಾಯಕರ ಬಗೆಗಿನ ತಮ್ಮ ಮುನಿಸು ಇನ್ನೂ ಶಮನವಾಗಿಲ್ಲ ಎಂಬುದನ್ನು ತೋರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೆಣಸಿ, ಭಾರೀ ಅಂತರದಿಂದ ಜಯಗಳಿಸಿದ್ದ ಜಿ.ಟಿ.ದೇವೇಗೌಡರು ಚುನಾವಣಾ ಪೂರ್ವದ ಭರವಸೆಯಂತೆ ಜೆಡಿಎಸ್ ವರಿಷ್ಠರು ಸೂಕ್ತ ಸ್ಥಾನಮಾನ ಕಲ್ಪಿಸದ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡು ಪಕ್ಷದಲ್ಲೇ ತಟಸ್ಥವಾಗುಳಿದಿದ್ದಾರೆ.