ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ
ಮೈಸೂರು, ಮೈಸೂರು ದಸರಾ

ಮುಗ್ಗರಿಸಿ ಬಿದ್ದ ಸಚಿವ ಜಿಟಿಡಿ

October 15, 2018

ಮೈಸೂರು:  ದಸರಾ ಮ್ಯಾರಥಾನ್‍ನಲ್ಲಿ ಅತ್ಯುತ್ಸಾಹದಿಂದ ಸ್ಪರ್ಧಿಗಳಿಗೆ ಉತ್ಸಾಹ ತುಂಬುತ್ತಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಿರಿಯರ ವಿಭಾಗದಲ್ಲಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಘಟನೆಯೂ ನಡೆಯಿತು. ಅದೃಷ್ಟವಶಾತ್ ಯಾವುದೇ ಗಾಯವಾಗಲಿಲ್ಲ.

ಸಚಿವರು, ಯುವರಾಜ ಕಾಲೇಜು ಬಳಿ ಒಂದೊಂದೇ ವಿಭಾಗದ ಸ್ಪರ್ಧಿಗಳಿಗೆ ತಮ್ಮದೇ ಭರವಸೆ ಮಾತುಗಳ ಮೂಲಕ ಉತ್ಸಾಹ ತುಂಬಿ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದರು. ಅವರು ಆಟದಲ್ಲಿ ಎಷ್ಟು ಉತ್ಸಾಹದಿಂದ ಪಾಲ್ಗೊಂಡಿದ್ದರೆಂದರೆ ಅವರ ಪ್ರತಿಯೊಂದು ಮಾತುಗಳು ಸ್ಪರ್ಧಿಗಳಲ್ಲಿ ಇನ್ನಷ್ಟು ಉತ್ಸಾಹ ತುಂಬುವಂತಿತ್ತು.

ಸ್ಪರ್ಧೆಯ ಕೊನೆಯ ವಿಭಾಗವಾದ ಹಿರಿಯರ ಸ್ಪರ್ಧೆ ಸಂದರ್ಭದಲ್ಲಿ ನೀವೂ ಸ್ವಲ್ಪ ದೂರ ಓಡುವಂತೆ ಮಾಧ್ಯಮಗಳು ಅವರನ್ನು ಒತ್ತಾಯಪಡಿಸಿದಾಗ ಉತ್ಸಾಹ ದಲ್ಲಿದ್ದ ಅವರೂ ಹಿರಿಯ ಸ್ಪರ್ಧಿಗಳ ನಡುವೆ ಓಡಿದರು. ಬಿಳಿ ಪಂಚೆ, ಬಿಳಿಯ ಶರ್ಟ್, ಅದರ ಮೇಲೆ ಕ್ರೀಡಾ ಕೂಟದ ಟೀಶರ್ಟ್ ಧರಿಸಿದ್ದ ಅವರು, ಸ್ವಲ್ಪ ದೂರ ಓಡಿ, ತಮ್ಮ ಪಂಚೆ ಮೇಲೆತ್ತಿ ಕಟ್ಟಿಕೊಳ್ಳಲು ಮುಂದಾದಾಗ ರಸ್ತೆಯ ಮಧ್ಯೆ ಆಯತಪ್ಪಿ ಮುಗ್ಗರಿಸಿ ಬಿದ್ದರು. ತಕ್ಷಣ ಅವರನ್ನು ಅಲ್ಲಿದ್ದ ಇತರೆ ಸ್ಪರ್ಧಿಗಳು ಎತ್ತಿದರು. ಅದೃಷ್ಟವಶಾತ್ ಸಚಿವರಿಗೆ ಯಾವುದೇ ಗಂಭೀರ ಗಾಯವಾಗಲಿಲ್ಲ.

Translate »