ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ
ಮೈಸೂರು, ಮೈಸೂರು ದಸರಾ

ದಸರಾ ಮ್ಯಾರಥಾನ್‍ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿ

October 15, 2018

ಮೈಸೂರು:  ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್ (ದಸರಾ ಓಟ ಸ್ಪರ್ಧೆ)ನಲ್ಲಿ ಸಾವಿರಾರು ಮಂದಿ ಓಡುವ ಮೂಲಕ ಓಟದಿಂದ ಆರೋಗ್ಯ ವೃದ್ಧಿ ಎಂದು ಸಾರಿದರು.

ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಕ್ರೀಡಾಂಗಣ ಬಳಿ ಯುವರಾಜ ಕಾಲೇಜು ಬಳಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಹಸಿರು ನಿಶಾನೆ ತೋರಿಸಿ ದಸರಾ ಓಟ ಸ್ಪರ್ಧೆಗೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ. ಮಹೇಶ್, ಚಾಮರಾಜ ಶಾಸಕ ಎಲ್. ನಾಗೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಕೆ. ಸುರೇಶ್, ಮೈಸೂರು ಟ್ರಾವೆಲ್ಸ್ ಅಸೋಸಿ ಯೇಷನ್ ಕಾರ್ಯದರ್ಶಿ ಎ.ಸಿ.ರವಿ ಇನ್ನಿತರರು ಉಪಸ್ಥಿತರಿದ್ದರು.

10 ಕಿ.ಮೀ., 6 ಕಿ.ಮೀ., 5 ಕಿ.ಮೀ. 3 ಕಿ.ಮೀ ಮತ್ತು 2 ಕಿ.ಮೀ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಮೈಸೂರು, ಬೆಂಗ ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಯಿಂದ ಸ್ಪರ್ಧಾಳುಗಳು ಭಾಗವಹಿಸಿ ದ್ದರು. ವಿಜೇತರಿಗೆ ಅ.16ರಂದು ಮಂಗಳವಾರ ಮಧ್ಯಾಹ್ನ 3.30 ಗಂಟೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬಹುಮಾನ ನೀಡಲಾಗುವುದು.

10 ಕಿ.ಮೀ. ಓಟ ಸ್ಪರ್ಧೆಗೆ ಬಹುಮಾನ ಕ್ರಮವಾಗಿ 20,000, 15,000 ಮತ್ತು 10,000 ಸಾವಿರ ನಗದು ಬಹುಮಾನ. 6 ಕಿ.ಮೀ. ಮತ್ತು 5 ಕಿ.ಮೀ. ಸ್ಪರ್ಧೆಗಳಿಗೆ ಕ್ರಮವಾಗಿ 10,000, 5,000 ಮತ್ತು 3,000. 3 ಕಿ.ಮೀ. ಹಾಗೂ 2 ಕಿ.ಮೀ. ಸ್ಪರ್ಧೆಗಳ ವಿಜೇತರಿಗೆ ಕ್ರಮವಾಗಿ 5,000, 3000 ಮತ್ತು 1,000 ರೂ. ಬಹುಮಾನ ನೀಡಿ ಗೌರವಿಸಲಾಗುವುದು.

ಒಂದೂವರೆ ಗಂಟೆ ವಿಳಂಬವಾಗಿ ಪ್ರಾರಂಭವಾದ ಓಟ
ಮೈಸೂರಿನ ಓವಲ್ ಕ್ರೀಡಾಂ ಗಣದಲ್ಲಿ ಬೆಳಿಗ್ಗೆ 6 ಗಂಟೆಗೆ ಉದ್ಘಾಟನೆಗೊಳ್ಳಬೇಕಿದ್ದ ದಸರಾ ಸ್ಪರ್ಧೆ (ಮ್ಯಾರಥಾನ್) ಸಚಿವರ ವಿಳಂಬದಿಂದಾಗಿ ಹಾಗೂ ಸ್ಪರ್ಧೆಯ ಸ್ಥಳ ಗೊಂದಲದಿಂದಾಗಿ ಒಂದೂವರೆ ಗಂಟೆ ವಿಳಂಬ ವಾಗಿ ಆರಂಭವಾಯಿತು.

ಸಾಮಾನ್ಯವಾಗಿ ಯಾವುದೇ ಮ್ಯಾರ ಥಾನ್ ಸ್ಪರ್ಧೆಗಳು ಬೆಳಿಗ್ಗೆ 6ರ ಆಸುಪಾಸಿನಲ್ಲಿ ಆರಂಭವಾಗು ತ್ತವೆ. ಅದೇ ರೀತಿ ದಸರಾ ಮ್ಯಾರಥಾನ್ ಸಹ ನಿಗದಿಯಂತೆ ಬೆಳಿಗ್ಗೆ 6ಕ್ಕೆ ಆರಂಭವಾಗಬೇಕಿತ್ತು. ಸ್ಪರ್ಧೆಯ ಸ್ಥಳದ ಬಗ್ಗೆ ಗೊಂದಲ ಇದ್ದುದರಿಂದ ಸಾಕಷ್ಟು ಸ್ಪರ್ಧಿಗಳು ಚಾಮುಂಡಿ ವಿಹಾರ ಕ್ರೀಡಾಂ ಗಣಕ್ಕೆ ಹೋಗಿ, ಅಲ್ಲಿ ಸ್ಪರ್ಧೆ ಇರಲಿಲ್ಲವಾದ್ದರಿಂದ ಅಲ್ಲಿ ಮಾಹಿತಿ ಪಡೆದು ಮೈಸೂರು ವಿವಿ ಓವಲ್ ಮೈದಾನಕ್ಕೆ ಬರುವಂತಾ ಯಿತು. ಮಾಧ್ಯಮಗಳೂ ಸಹ ಈ ಗೊಂದಲದಿಂದ ಹೊರತಾಗಿರ ಲಿಲ್ಲ. ಹಲವರು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಹೋಗಿ, ಅಲ್ಲಿಂದ ಓವಲ್ ಮೈದಾನಕ್ಕೆ ಬರುವಂತಾಯಿತು.

ದಸರಾ ಮಹೋತ್ಸವ ಆಹ್ವಾನ ಪತ್ರಿಕೆಯಲ್ಲಿ ದಸರಾ ಮ್ಯಾರ ಥಾನ್ ಬೆಳಿಗ್ಗೆ 6ಕ್ಕೆ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಎಂದಿತ್ತು. ಆದರೆ ನಂತರದ ಪ್ರಕಟಣೆಯಲ್ಲಿ ಕಾರ್ಯಕ್ರಮವನ್ನು ಓವಲ್ ಮೈದಾನಕ್ಕೆ ಬದಲಾಯಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು.

ಬೆಳಿಗ್ಗೆ 6ಕ್ಕೆ ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್ ಇದಕ್ಕೆ ಚಾಲನೆ ನೀಡುವುದಿತ್ತು. ಅದಾಗಲೇ ನೂರಾರು ಮಂದಿ ಸ್ಪರ್ಧೆಗೆ ಆಗಮಿಸಿ, ನಂಬರ್ ಮತ್ತು ಟೀಶರ್ಟ್ ಪಡೆಯುತ್ತಿದ್ದರು. ಆದರೆ ಸ್ಥಳದ ಗೊಂದಲದಿಂದ ಸಾಕಷ್ಟು ಸ್ಪರ್ಧಿಗಳು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಹೋಗಿ, ಸ್ಪರ್ಧೆ ಇರುವುದು ಓವಲ್ ಮೈದಾನ ಎಂದರಿತು, ಅಲ್ಲಿಂದ ತರಾತುರಿಯಲ್ಲಿ ಬರಬೇಕಾಯಿತು.
ಬೆಳಿಗ್ಗೆ 6.30ಕ್ಕೆ ಶಾಸಕ ಎಲ್.ನಾಗೇಂದ್ರ ಬಂದರು. ಅವರ ಹಿಂದೆ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ಸಹ ಬಂದು ಅವರೊಂದಿಗೆ ಉಸ್ತುವಾರಿ ಸಚಿವರಿಗೆ ಸಾಕಷ್ಟು ಹೊತ್ತು ಕಾದು ಕುಳಿತರು. ಅಷ್ಟೊತ್ತು ಕಾದಿದ್ದ ಶಾಸಕ ಎಲ್.ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಸಚಿವ ಶ್ರೀನಿವಾಸ್ ಕೂಡ ಸಚಿವರು ಬರುವವರೆಗೆ ವಾಕಿಂಗ್ ಹೋಗಿ ಬರೋಣವೆಂದು ಹೊರಟು ಹೋಗಿದ್ದರು.

7.30 ವೇಳೆಗೆ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಬಂದಾಗ, ಕಾರ್ಯಕ್ರಮ ಚಾಲನೆ ನೀಡಬೇಕಿದ್ದ ಸಚಿವ ಎಸ್.ಆರ್.ಶ್ರೀನಿವಾಸ್ ಇರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಬಂದ ಸಚಿವ ಶ್ರೀನಿವಾಸ್ 7.45ಕ್ಕೆ ಓಟ ಸ್ಪರ್ಧೆಗೆ ಹಸಿರು ಬಾವುಟ ಪ್ರದರ್ಶಿಸಿ, ಚಾಲನೆ ನೀಡಿದರು. ಅಷ್ಟೊತ್ತಿಗಾಗಲೇ ಸ್ಪರ್ಧಿಗಳಲ್ಲಿ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದ್ದವು. ನಂತರ ಸಚಿವರು, ಶಾಸಕರು, ಯುವರಾಜ ಕಾಲೇಜು ಬಳಿಗೆ ತೆರಳಿ ಒಂದೊಂದೇ ವಿಭಾಗದ ಸ್ಪರ್ಧೆಗೆ ಪ್ರತ್ಯೇಕವಾಗಿ ಚಾಲನೆ ನೀಡಿದರು.

ಡಿಜೆ ಮ್ಯೂಸಿಕ್ ಕಿರಿಕಿರಿ: ಯಾವುದೇ ಮ್ಯಾರಥಾನ್‍ನಲ್ಲಿ ಸ್ಪರ್ಧಿ ಗಳಿಗೆ ಆರಂಭದಲ್ಲಿ 5ರಿಂದ 10 ನಿಮಿಷ ಡಿಜೆ ಮ್ಯೂಸಿಕ್ ಹಾಕಿ ಅಭ್ಯಾಸದ ಮೂಲಕ ಉತ್ಸಾಹ ಮತ್ತು ಚೈತನ್ಯ ತುಂಬಲಾಗು ತ್ತದೆ. ಆದರೆ ಇಂದು 6.30ರಿಂದ 7.30ರವರೆಗೆ ಒಂದು ಗಂಟೆ ಕಾಲ ಅಬ್ಬರದ ಡಿಜೆ ಸಂಗೀತ ಹಾಕಿ ಸ್ಪರ್ಧಿಗಳಿಗೆ ಕಿರಿ ಕಿರಿ ಉಂಟು ಮಾಡಲಾಯಿತು. ಸಾಕಷ್ಟು ಸ್ಪರ್ಧಿಗಳು ಅಬ್ಬರದ ಡಿಜೆ ಮ್ಯೂಸಿಕ್‍ಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಇದರಿಂದ ಹಲವು ಸ್ಪರ್ಧಿಗಳು ಓಟಕ್ಕೂ ಮುಂಚೆಯೇ ಚೈತನ್ಯ ಕಳೆದುಕೊಳ್ಳುವಂತಾಗಿತ್ತು.

ಇದೆಂಥಾ ಮ್ಯಾರಥಾನ್?: ಬೆಳಿಗ್ಗೆ 5.30 ಗಂಟೆಗೇ ಬಂದಿದ್ದೇನೆ. 6 ಗಂಟೆಗೆ ಆರಂಭವಾಗಬೇಕಿದ್ದ ಓಟ 7.30 ಆದರೂ ಆರಂಭಿಸದೆ ಬರೀ ಅಬ್ಬರದ ಡಿಜೆ ಹಾಕಿ ಎಲ್ಲರನ್ನು ಕುಣಿಸುತ್ತಿದ್ದಾರೆ. 5ರಿಂದ 10 ನಿಮಿಷ ಅಭ್ಯಾಸಕ್ಕಾಗಿ ಮ್ಯೂಸಿಕ್ ಹಾಕಲಾಗುತ್ತದೆ. ಆದರೆ ಇಲ್ಲಿ ಗಂಟೆಗಟ್ಟಲೆ ಮ್ಯೂಸಿಕ್ ಹಾಕಿ, ನರ್ತಿಸಲು ಬಂದಿ ದ್ದೇವೆಯೇ? ಇದು ಸ್ಪರ್ಧಿ ಸಂಕೇತ್‍ರ ಅಸಮಾಧಾನದ ನುಡಿ. ಇದೆಂಥಾ ಮ್ಯಾರಥಾನ್? ಇದು ರಾಜ್ಯದ ಹಲವು ಮ್ಯಾರಥಾನ್ ಗಳಲ್ಲಿ ಭಾಗವಹಿಸುತ್ತಾ ಬಂದಿರುವ ಬೆಂಗಳೂರಿನ ಯತೀಶ್ ಅವರ ಅಸಮಾಧಾನದ ಮಾತು. ಅಬ್ಬರದ ಡಿಜೆ ಮ್ಯೂಸಿಕ್‍ನಿಂದ ಬೇಸತ್ತು, ಸಮಯದ ಅರಿವಿಲ್ಲದ ಕಾರ್ಯಕ್ರಮ ನಿರ್ವಾಹಕರ ವಿರುದ್ಧ ಅವರು ಕಿಡಿಕಾರಿದರು.

Translate »