ಹಾಸನ: ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಿ ಎಂದು ಹೊಳೆನರಸೀ ಪುರ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುರುವಾರ ತಮ್ಮ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡರು ಆರೋಪಗಳನ್ನು ಅಲ್ಲಗೆಳೆದ ರಲ್ಲದೆ, ಬಾಗೂರು ಮಂಜೇಗೌಡ ವಿರುದ್ಧ ಆರೋಪಗಳ ಸುರಿಮಳೆಗೈದರು. ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ. ಚುನಾವಣಾಧಿಕಾರಿಗಳಿಗೆ ದೂರು ನೀಡಲಿ. ಎಲ್ಲಾ ಹಾಲಿನ ವಾಹನಗಳನ್ನೂ ತಪಾಸಣೆ ಮಾಡಲಿ? ನಾನು ಆರೋಪ ಮಾಡಿರುವುದು ಮುಖ್ಯಮಂತ್ರಿ ವಿರುದ್ಧವೇ ಹೊರತು ಬಾಗೂರು ಮಂಜೇಗೌಡ ವಿರುದ್ಧವಲ್ಲ. ಅವನ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಏಕವಚನದಲ್ಲೇ ಗುಡುಗಿದ ರೇವಣ್ಣ, ಅವನು ನನಗೆ ಯಾವ ಲೆಕ್ಕ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಆರ್‍ಟಿಓ ಇನ್ಸ್‍ಪೆಕ್ಟರ್‍ಗಳು ನಡೆಸುತ್ತಿರುವ ಅಕ್ರಮ ವ್ಯವಹಾರ ಹಾಗೂ ಅವರ ಅಕ್ರಮ ಆಸ್ತಿ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಈ ಹಿಂದೇ ಮಂಜೇಗೌಡರಿಗೆ ಸವಾಲು ಹಾಕಿದ್ದೆ. ಹಾಗಾಗಿ ನನ್ನ ವಿರುದ್ಧ ಬಾಯಿಗೆ ಬಂದದ್ದು ಮಾತನಾಡಿದ್ದಾರೆ. ನನ್ನ ಆಸ್ತಿ ಕನ್ಯಾಕುಮಾಯಿಂದ ಕಾಶ್ಮೀರದವರೆಗೂ ಇದೆ ಎಂದು ಮಂಜೇಗೌಡರು ಹೇಳಿದ್ದಾರೆ. ಅದನ್ನು ಕಾಂಗ್ರೆಸ್ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದ ಅವರು, ನನ್ನ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಯಾವುದೇ ಪ್ರಕರಣ ಇಲ್ಲ ಎಂದು ಬಾಗೂರು ಮಂಜೇಗೌಡ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ಲಾಂಗು ಮಚ್ಚು ಸಂಸ್ಕೃತಿ ಹೊಂದಿದ್ದಾನೆ ಎಂಬ ಮಂಜೇಗೌಡರ ಹೇಳಿಕೆ ಕಿಡಿಕಾರಿದ ರೇವಣ್ಣ, ನನ್ನ ಮಗ ಸುಸಂಸ್ಕೃತನಾಗಿದ್ದಾನೆ. ಆತ ಲಾಂಗು ಮಚ್ಚು ಸಂಸ್ಕೃತಿ ಹೊಂದಿಲ್ಲ. ಆರೋಪ ಮಾಡುವವರು ಮೊದಲು ದಾಖಲೆ ತೋರಿಸಲಿ ಎಂದು ಆಗ್ರಹಿಸಿದರು.
ನಾನು ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದು ನನ್ನ ಜನರಿಗೆ ಗೊತ್ತಿದೆ. ಇಂತಹ ಹತ್ತು ಮಂದಿ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲವೆಂದ ರೇವಣ್ಣ, ಕ್ಷೇತ್ರದಲ್ಲಿ ಸ್ವಾತಂತ್ರ್ಯವಿಲ್ಲವೆಂದು ಆರೋಪಿಸಿದ್ದಾರೆ. ಇವನ ಮುಖ್ಯಮಂತ್ರಿನ ಕರೆದುಕೊಂಡು ಬಂದು ಸ್ವಾತಂತ್ರ ಪಡೆದುಕೊಳ್ಳಲಿ ಎಂದು ಕಿಡಿಕಾರಿದರಲ್ಲದೆ, ಬಾಗೂರು ಮಂಜೇಗೌಡ ಸರ್ಕಾರಿ ನೌಕರಿಯಲ್ಲಿದ್ದಾಗ. ಹಲವು ಆರೋಪಗಳಿದ್ದರೂ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಅಂಗೀಕರಿಸಿದರು ಎಂಬುದನ್ನು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.