ಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಸಿದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕ ನುಡಿ
ಮೈಸೂರು

ಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಸಿದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕ ನುಡಿ

April 15, 2019

ಭೇರ್ಯ: ದೇವೇಗೌಡರಿಗೂ ವಯಸ್ಸಾಯಿತು. ನನಗೂ ಆರೋಗ್ಯ ಕ್ಷೀಣಿಸುತ್ತಿದೆ. ಹಾಗಾಗಿ ರೈತರು, ಬಡವರ ಬಗ್ಗೆ ಕಳಕಳಿ ಹೊಂದಿರುವ ನಾಯಕ ಪುತ್ರ ನಿಖಿಲ್‍ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಕೆ.ಆರ್.ನಗರ ತಾಲೂಕಿನ ಮಿರ್ಲೆ, ಸಾಲಿಗ್ರಾಮ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಪುತ್ರನ ಪರ ಬಿರುಸಿನ ಪ್ರಚಾರ ನಡೆಸಿದ ಸಿಎಂ, ಇಂಥ ಕಠಿಣ ಪರಿಸ್ಥಿತಿಯಲ್ಲಿ ಪುತ್ರ ನಿಖಿಲ್ ನನ್ನ ಸಹಾಯಕ್ಕೆ ನಿಂತರೆ ಬಡವರ ಕಷ್ಟ-ಸುಖಕ್ಕೆ ನೆರವಾಗಲು ಸುಲಭವಾಗುತ್ತದೆ. ಮಂಡ್ಯ ಜಿಲ್ಲೆಯ ನಮ್ಮ ಪಕ್ಷದ ಎಲ್ಲಾ ಶಾಸಕರು, ಸಚಿವರು ಅಲ್ಲದೆ ವಿಶೇಷವಾಗಿ ಕೆ.ಆರ್.ನಗರ ಶಾಸಕರೂ ಆದ ಸಚಿವ ಸಾ.ರಾ.ಮಹೇಶ್ ಅವರ ಒತ್ತಡಕ್ಕೆ ಮಣಿದು ಪುತ್ರನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನನ್ನು ನಿಮ್ಮ ಮನೆ ಮಗನೆಂದು ಭಾವಿಸಿ ಬೆಳೆಸಿ, ಹರಸಿ ಎಂದು ಕೋರಿದರು.
ಕೃಷ್ಣರಾಜನಗರ ತಾಲೂಕಿಗೆ 780 ಕೋಟಿ ರೂ. ಅನುದಾನ ನೀಡಿದ್ದೇನೆ. ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಪುನಾರಂಭಕ್ಕೂ ಕ್ರಮ ಕೈಗೊಂಡಿದ್ದೇನೆ. ಎಂದ ಮುಖ್ಯಮಂತ್ರಿ, ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗಿದ್ದು, ಸಾಲಿಗ್ರಾಮ ದೊಡ್ಡ ಪಟ್ಟಣವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಸಹಕಾರ ನೀಡಲಾಗುವುದು ಎಂದರು.
ಇದೇ ವೇಳೆ ಸಿಎಂಗೆ ಸಾಥ್ ನೀಡಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲ್ಲ ಎಂದು ಮಾಧ್ಯಮಗಳ ಸಮೀಕ್ಷೆಗಳೇ ಹೇಳಿವೆ. ಈ ರಾಷ್ಟ್ರಕ್ಕೆ ಮೋದಿಯವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಮೋದಿ ಆರೋಪಿಸಿದ್ದಾರೆ. ಮೋದಿ ಅವರು ಅಂಕಿ-ಅಂಶ ಪಡೆದು ಮಾತಾಡಲಿ ಎಂದು ತಿರುಗೇಟು ನೀಡಿದರು.

ಹಾಸನ ಕ್ಷೇತ್ರದಲ್ಲಿ ನಮ್ಮ ಪ್ರತಿಸ್ಪರ್ಧಿ ಯಾರೆಂಬುದು ಜನರಿಗೆ ಗೊತ್ತಿಲ್ಲ. ಕ್ಷೇತ್ರದ 8 ತಾಲೂಕುಗಳಲ್ಲೂ ನನ್ನ ಮಗ ಪ್ರಜ್ವಲ್ ಹೆಚ್ಚು ಲೀಡ್ ಪಡೆದು ಜಯಗಳಿಸಲಿದ್ದಾನೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ವಿಜಯ್, ನವನಗರ ಕೋ-ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್, ತಾಪಂ ಸದಸ್ಯೆ ಶೋಭಾ ಕೋಟೇಗೌಡ, ಮಿರ್ಲೆ ಧನಂಜಯ್, ರೇಖಾ ನಾಗರಾಜ್, ಮೈಮುಲ್ ನಿರ್ದೇಶಕ ಹೆಚ್.ಪಿ.ಹರೀಶ್, ಲೋಕಿ, ನಟರಾಜ್ ಇತರರಿದ್ದರು.

ಚಿತ್ರಶೀರ್ಷಿಕೆ: ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಹಾಗು ಸುತ್ತಮುತ್ತಲ ಹಳ್ಳಿಗಳಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪುತ್ರ ನಿಖಿಲ್ ಪರ ಬಿರುಸಿನ ಪ್ರಚಾರ ನಡೆಸಿದರು. ಸಚಿವ ಸಾ.ರಾ.ಮಹೇಶ್ ಇದ್ದರು.

ನಾನೂ ಸಿನಿಮಾರಂಗದಲ್ಲಿದ್ದೆ…
ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ. ನಾನೂ ಸಿನಿಮಾರಂಗದಲ್ಲಿದ್ದೆ. ಸಿನಿಮಾ ಮನರಂಜನೆ ಮಾತ್ರ ನೀಡಬಲ್ಲದು. ಬಡವರು, ರೈತರ ಕಷ್ಟ-ಸುಖಕ್ಕೆ ನಮ್ಮಂಥವರೇ ಸ್ಪಂದಿಸಬೇಕು.
-ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

Translate »