ದೇಶದ ಸಮಸ್ಯೆಗಳಿಗೆ ಅಂಬೇಡ್ಕರ್ ವಿಚಾರಧಾರೆಯಿಂದ ಪರಿಹಾರ ಸಾಧ್ಯ
ಮೈಸೂರು

ದೇಶದ ಸಮಸ್ಯೆಗಳಿಗೆ ಅಂಬೇಡ್ಕರ್ ವಿಚಾರಧಾರೆಯಿಂದ ಪರಿಹಾರ ಸಾಧ್ಯ

ಮೈಸೂರು: ದೇಶದ ಪ್ರಸ್ತುತ ಸಮಸ್ಯೆ ಗಳ ನಿವಾರಣೆಗೆ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಧಾರೆ ಅತ್ಯಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಚಿಂತನೆಗಳನ್ನು ಅರಿತುಕೊಳ್ಳಬೇಕಿದೆ ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ಪ್ರೊ.ಜಿ.ಎಸ್.ಜಯದೇವ ಹೇಳಿದರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ.ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ `ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಶೋಧಕರ ಜವಾಬ್ದಾರಿಗಳು’ ಕುರಿತಂತೆ ಭಾನು ವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ಶೈಕ್ಷಣಿಕ ಸಾಧಕರ ಅಭಿನಂದನಾ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರನ್ನು ಓದಿದರೆ ನಮ್ಮ ಸಮಾ ಜದ ಅಸಮಾನತೆಯ ನೀತಿ ಸ್ಪಷ್ಟವಾಗಿ ಅರಿವಿಗೆ ಬರು ತ್ತದೆ. ಅವರು ಅನುಭವಿಸಿದ ಅಸಮಾನತೆಯ ನೋವು ಹೇಳತೀರದು. ವಿದೇಶದಲ್ಲಿ ವ್ಯಾಸಂಗ ಮುಗಿಸಿ ದೇಶಕ್ಕೆ ಮರಳಿದಾಗ ಉಳಿದುಕೊಳ್ಳಲು ಒಂದು ಮನೆ ಸಿಗದೇ ಯಾತನೆ ಅನುಭವಿಸುತ್ತಾರೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಅಂಬೇಡ್ಕರ್ ಅವರು ರೂಪಿಸಿದ್ದ ಹಿಂದೂ ಕೋಡ್ ಬಿಲ್‍ಗೆ ವಿರೋಧ ವ್ಯಕ್ತವಾಯಿತು. ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಯಾವುದೇ ಕಾರಣಕ್ಕೂ ಈ ಬಿಲ್ಲಿಗೆ ಅಂಕಿತ ಹಾಕುವುದಿಲ್ಲ ಎಂದು ಘೋಷಿಸಿದರು ಎಂದು ವಿಷಾದಿಸಿದರು.

ಮೋದಿ ಪಾದ ತೊಳೆದಿದ್ದೇಕೆ?: ಬಾಬು ರಾಜೇಂದ್ರ ಪ್ರಸಾದ್ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ವೇಳೆಯಲ್ಲೇ 100 ಜನ ಬ್ರಾಹ್ಮಣರ ಪಾದ ತೊಳೆದರು. ಅದು ಅವ ರಲ್ಲಿದ್ದ ವರ್ಣಾಶ್ರಮ ವ್ಯವಸ್ಥೆಯ ನಂಬಿಕೆಯಾಗಿತ್ತೇ ಹೊರತು ನಟನೆ ಆಗಿರಲಿಲ್ಲ. ಪೋಪ್ ಫ್ರಾನ್ಸಿಸ್ ಶಾಂತಿ ಸಂದೇಶಕ್ಕಾಗಿ ವಿವಿಧ ಧರ್ಮೀಯರ ಪಾದ ತೊಳೆದರು. ಇತ್ತೀಚೆಗೆ ಪ್ರಧಾನಿ ಮೋದಿ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದರು. ಮೋದಿಯವರ ವಿಚಾರಕ್ಕೆ ಬಂದಾಗ ಇದು ನಟನೆಯೋ? ಇಲ್ಲ ನಂಬಿಕೆಯೋ ಎಂಬ ಪ್ರಶ್ನೆ ಮೂಡುತ್ತದೆ. ಅವರ ನಿಲುವುಗಳಿಂದಾಗಿ ಹೀಗೆ ಪ್ರಶ್ನೆ ಮೂಡುವುದು ಸಹಜ ಎಂದು ಹೇಳಿದರು.

ಇದೇ ವೇಳೆ ಮೈಸೂರು ವಿವಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಿಹೆಚ್.ಡಿ ಪದವೀಧರರು ಹಾಗೂ ಸ್ನಾತಕೋತ್ತರ ಪದವಿ ಮತ್ತು ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದವರನ್ನು ಅಭಿನಂದಿಸಲಾಯಿತು. ಬೆಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ, ಮೈಸೂರು ವಿವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಂ.ಮಹದೇವನ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ಎಸ್.ನರೇಂದ್ರಕುಮಾರ್, ಪರಿಶಿಷ್ಟ ಜಾತಿ ಹಾಗೂ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಡಾ.ಎಸ್. ಮಹಾದೇವಮೂರ್ತಿ ಮತ್ತಿತರರು ಹಾಜರಿದ್ದರು.

April 15, 2019

Leave a Reply

Your email address will not be published. Required fields are marked *