ಬಿಪಿಎಲ್ ಕುಟುಂಬಗಳಿಗೆ   ಆರೋಗ್ಯ ವಿಮಾ ಕಾರ್ಡ್ ವಿತರಣೆ
ಮೈಸೂರು

ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ

January 6, 2019

ಮೈಸೂರು: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ನೆರವಿ ನೊಂದಿಗೆ ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ’-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕಾರ್ಡು ಹೊಂದಿ ರುವ ಎಲ್ಲ ಕುಟುಂಬಗಳಿಗೆ ಆರೋಗ್ಯ ವಿಮಾ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ಆರೋಗ್ಯ ಸೇವೆ ಒದಗಿಸಬೇ ಕೆಂಬ ಸದುದ್ದೇಶದಿಂದ ಜಾರಿಗೆ ತಂದಿ ರುವ ಯೋಜನೆಗೆ ಕೇಂದ್ರವು ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಹಣ ಖರ್ಚು ಮಾಡಲಿದೆ ಎಂದರು.

ಒಂದು ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ವೆಚ್ಚವನ್ನು ವಿಮೆಯಲ್ಲಿ ಸರ್ಕಾರ ಭರಿಸಲಿದೆ. ಆರಂಭದಲ್ಲಿ ಕೇವಲ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸೇವೆ ಒದಗಿಸುತ್ತಿದ್ದು, ಮುಂದೆ ಎಪಿಎಲ್ ಕಾರ್ಡು ದಾರರಿಗೂ ವಿಸ್ತರಿಸಲಾಗುವುದು ಎಂದರು.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಲ್ಲಿ ಆರೋಗ್ಯ ವಿಮಾ ಕಾರ್ಡ್ ನೋಂದಣಿ ಕಾರ್ಯ ಸರ್ಕಾರಿ ಆಸ್ಪತ್ರೆ ಗಳಲ್ಲಿ ಆರಂಭವಾಗಿದ್ದು, ಮುಂದೆ ಜಿಲ್ಲೆ ಯಾದ್ಯಂತ ವಿಸ್ತರಿಸಲಾಗುವುದು. ಬಿಪಿಎಲ್ ಕಾರ್ಡ್ ನೀಡಿ ಆರೋಗ್ಯ ವಿಮಾ ಕಾರ್ಡ್ ಪಡೆಯಬಹುದಾಗಿದೆ. ಮುಂದೆ ಮೈಸೂರು ಬಸ್ ನಿಲ್ದಾಣಗಳಲ್ಲೂ ಹೆಸರು ನೋಂದಾ ಯಿಸಿ ಕಾರ್ಡ್ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ಆಯ್ದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳಲ್ಲೂ ವರ್ಷಕ್ಕೆ ಕುಟುಂಬದ ಸದಸ್ಯರು 5 ಲಕ್ಷ ರೂ.ಗಳವರೆಗೆ ಆರೋಗ್ಯ ಸೇವೆ ಯನ್ನು ಈ ಯೋಜನೆಯಡಿ ಪಡೆಯಬಹು ದಾಗಿದೆ ಎಂದು ಇದೇ ವೇಳೆ ಹೇಳಿದರು.

ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ, ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ವಿಲ್ಲದಿದ್ದರೆ ರೆಫೆರಲ್ ಪಡೆದುಕೊಂಡು ರೋಗಿಯು ತಾನು ಬಯಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರದಿಂದ ಯೋಜನೆಗೆ ಶೇ.60ರಷ್ಟು ಹಣ ನೀಡುತ್ತಿದ್ದರೂ ರಾಜ್ಯ ಸರ್ಕಾರವು ಜಾಹೀರಾತಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರವನ್ನು ಮಾತ್ರ ಹಾಕಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಇನ್ನು ಮುಂದೆ ಆಯುಷ್ಮಾನ್‍ಭವ ಹಾಗೂ ಆರೋಗ್ಯ ಕರ್ನಾಟಕ ಯೋಜ ನೆಯ ಜಾಹೀರಾತು ಪ್ರಕಟಿಸುವಾಗ ಸ್ವಲ್ಪ ಯೋಚನೆ ಮಾಡಲಿ ಎಂದರು.

ಹಾಲಿ ಸಂಸದರೆಲ್ಲರಿಗೂ ಟಿಕೆಟ್, ಎಲ್ಲರೂ ಗೆಲ್ಲುತ್ತಾರೆ: ಪ್ರತಾಪ್‍ಸಿಂಹ

ಮೈಸೂರು: ಹಾಲಿ ಸಂಸದರೆಲ್ಲರಿಗೂ ಟಿಕೆಟ್ ಸಿಗುತ್ತದೆ. ಎಲ್ಲರೂ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ಗೊಂದಲವಿಲ್ಲ, ಅದೇನಿದ್ದರೂ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಮಾತ್ರ ಎಂದರು. ನಾನೂ ಸೇರಿದಂತೆ ರಾಜ್ಯದ ಎಲ್ಲಾ ಹಾಲಿ ಸಂಸತ್ ಸದಸ್ಯರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ. ಅಷ್ಟೂ ಅಭ್ಯರ್ಥಿಗಳೂ ಗೆಲುವು ಸಾಧಿಸುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಕೆಲ ಅನ್ಯ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಹಾಗೆಯೇ ಕನಸು ಕಾಣುತ್ತಿರಲಿ. ನಮ್ಮ ಪಕ್ಷದಲ್ಲಿ ಟಿಕೆಟ್ ಗೊಂದಲವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಟಿಕೆಟ್ ನೀಡುವ ಬಗ್ಗೆ ಗೊಂದಲವಿದೆ ಎಂದು ಪ್ರತಾಪ್‍ಸಿಂಹ ನುಡಿದರು.

ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಟೈಪಿಸ್ಟ್ ಬಳಿ 26 ಲಕ್ಷ ರೂ ಹಣ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್‍ಸಿಂಹ, ನೂರಾರು, ಸಾವಿರಾರು ಕೋಟಿ ರೂ ಅವ್ಯವಹಾರ ನಡೆಸುವ ಕಾಂಗ್ರೆಸಿಗರಿಗೆ 26 ಲಕ್ಷ ರೂ ಯಾವ ಲೆಕ್ಕ. ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ‘ಪುಟ್‍ಗೋಸಿ’ ಎಂಬ ಹೇಳಿಕೆ ಸರಿಯಾಗೇ ಇದೆ ಎಂದು ವ್ಯಂಗ್ಯವಾಡಿದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಪ್ರತಿ ಮನೆಗೆ ಎಲ್‍ಪಿಜಿ ಸಂಪರ್ಕ

ಮೈಸೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ ಯಡಿ ಪ್ರತೀ ಕುಟುಂಬಕ್ಕೆ ಎಲ್‍ಪಿಜಿ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ.

ಠೇವಣಿ ರಹಿತವಾಗಿ 5 ಕೋಟಿ ಅಡುಗೆ ಅನಿಲ ಸಂಪರ್ಕವನ್ನು ಬಿಪಿಎಲ್ ಕುಟುಂಬದ ಮಹಿಳೆಯರಿಗೆ ನೀಡಲಾಗುತ್ತಿದ್ದು, ತಮ್ಮ ಹತ್ತಿರದ ಗ್ಯಾಸ್ ಏಜೆಂಟರ ಬಳಿ ಹೋಗಿ ಬಿಪಿಎಲ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‍ಬುಕ್ ಪ್ರತಿಗಳನ್ನು ಕೊಟ್ಟರೆ ಸ್ಟೌವ್, ರೆಗ್ಯುಲೇಟರ್ ಸಮೇತ ಮೊದಲ ಸಿಲಿಂಡರ್ ಅನ್ನು ಉಚಿತವಾಗಿ ನೀಡುವರು ಎಂದರು.
ನಂತರದ ಸಿಲಿಂಡರ್‍ಗಳನ್ನು ಸಬ್ಸಿಡಿ ದರದಲ್ಲಿ ಪಡೆಯ ಬಹುದಾಗಿದೆ. 2016ರ ಏಪ್ರಿಲ್‍ನಲ್ಲಿದ್ದ ಶೇ.89.64ರಷ್ಟು ಎಲ್‍ಪಿಜಿ ಯನ್ನು 2018ರ ಜನವರಿವರೆಗೆ ಶೇ.111.85ರಷ್ಟು ಮೈಸೂರು ಜಿಲ್ಲೆಯಲ್ಲಿ ವಿಸ್ತರಿಸಲಾಗಿದೆ ಎಂದ ಅವರು, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಎಲ್‍ಪಿಜಿ ಸಂಪರ್ಕಕ್ಕೆ ಹಂಚಿಕೆ ಮಾಡಲಾಗಿದ್ದ 12,800 ಕೋಟಿ ರೂ. ಬಜೆಟ್‍ನಲ್ಲಿ 8 ಕೋಟಿ ರೂ. ಹೆಚ್ಚಿಸಲಾಗಿದೆ.

2019ರ ಮಾರ್ಚ್ 31ಕ್ಕೆ 5 ಕೋಟಿ ಎಲ್‍ಪಿಜಿ ಸಂಪರ್ಕ ಹೊಂದಿದ್ದ ಗುರಿಯನ್ನು ಅವಧಿಗೂ ಮುನ್ನವೇ 2018ರ ಡಿಸೆಂಬರ್ 5ಕ್ಕೆ 5.83 ಕೋಟಿಗೆ ತಲುಪಿಸಲಾಗಿದೆ. 30,01,127 ಜನಸಂಖ್ಯೆ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ 8,63,093 ರಷ್ಟು ಮನೆಗಳು ಅಡುಗೆ ಇಂಧನ ಎಲ್‍ಪಿಜಿ ಹೊಂದಿದ್ದು, 2016ರ ಏಪ್ರಿಲ್ 1ಕ್ಕೆ ಶೇ.89.64 ಇದ್ದ ವ್ಯಾಪ್ತಿಯು ಈಗ ಶೇ.111.85 ರಷ್ಟಾಗಿದೆ ಎಂದೂ ತಿಳಿಸಿದರು.

ಯೋಜನೆಯಿಂದಾಗಿ ಇಂಧನ ಬಳಕೆ ಕುಟುಂಬಗಳು ಗಣನೀಯವಾಗಿ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಇರುವ 75 ಎಲ್‍ಪಿಜಿ ವಿತರಕರ ಜೊತೆಗೆ 6 ಹೆಚ್ಚುವರಿ ವಿತರಕರನ್ನು ತೈಲ ಕಂಪನಿಗಳು ನೀಡಿವೆ ಎಂದ ಅವರು, ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಯೋಜನೆಯಲ್ಲಿ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ ಹಾಗೂ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »