ವಿಶಿಷ್ಟ ಮಾದರಿ ನಿರ್ಮಾಣವಾಗುತ್ತಿದೆ ವಿಶ್ವಮಾನವ ಜೋಡಿ ರಸ್ತೆಯ ವೃತ್ತ
ಮೈಸೂರು

ವಿಶಿಷ್ಟ ಮಾದರಿ ನಿರ್ಮಾಣವಾಗುತ್ತಿದೆ ವಿಶ್ವಮಾನವ ಜೋಡಿ ರಸ್ತೆಯ ವೃತ್ತ

January 6, 2019

ಮೈಸೂರು: ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ವೃತ್ತವೊಂದು ವಿಶಿಷ್ಟ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ.

ಕುವೆಂಪುನಗರ ವಿಶ್ವಮಾನವ ಜೋಡಿರಸ್ತೆ, ಬೇಕ್‍ಪಾಯಿಂಟ್ ಜಂಕ್ಷನ್ ಮಧ್ಯದಲ್ಲಿ ಆರೇಳು ತಿಂಗಳ ಹಿಂದೆಯೇ ಪಾರಂಪರಿಕ ಮಾದರಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇದೀಗ ಕಂಬದಿಂದ ಆರೇಳು ಮೀಟರ್ ಸುತ್ತಳತೆ ಪ್ರದೇಶಕ್ಕೆ ಬೆಣಚುಕಲ್ಲು(ಪೆಬ್ಬೆಲ್)ಗಳನ್ನು ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಸುಮಾರು 15 ಲಕ್ಷ ಅಂದಾಜು ಮೊತ್ತದ ಈ ಕಾಮಗಾರಿ ಇನ್ನು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಕಂಬದ ಸುತ್ತ ಆರೇಳು ಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಬೆಣಚುಕಲ್ಲುಗಳನ್ನು ಜೋಡಿಸುವ ಕಾಮಗಾರಿಯನ್ನು ಕಂಡ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಫೆನ್ಸಿಂಗ್ ಅಳವಡಿಸಿ, ವೃತ್ತ ಮಾದರಿಯಲ್ಲಿ ಅಭಿವೃದ್ದಿಪಡಿಸಿದರೆ ರಸ್ತೆ ಕಿರಿದಾಗಿ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಸಾರಿಗೆ ಬಸ್, ಶಾಲಾ ವಾಹನಗಳು ಸೇರಿ ದಂತೆ ಯಾವುದೇ ದೊಡ್ಡ ವಾಹನಗಳು ಇಲ್ಲಿ ತಿರುವು ಪಡೆಯಲು ಸಾಧ್ಯವಾಗು ವುದಿಲ್ಲ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ, ತೊಂದರೆಯಾಗುತ್ತದೆ ಎಂಬ ಆತಂಕದಿಂದಲೇ ಅನೇಕ ಮಂದಿ, ಕಾಮಗಾರಿಯನ್ನು ವಿರೋಧಿಸಿದ್ದರು. ನಂತರ ಕಾಮಗಾರಿ ಯೋಜನೆ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರೆಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿದ್ಯುತ್ ಕಂಬದ ಸುತ್ತ ಅಳವಡಿಸಿರುವ ಬೆಣಚುಕಲ್ಲುಗಳನ್ನು ಒಳಗೊಂಡಂತೆ ವೃತ್ತ ನಿರ್ಮಾಣ ಮಾಡುವುದಿಲ್ಲ. ಫೆನ್ಸಿಂಗ್ ಅಳವಡಿಸದ ಕಾರಣ ರಸ್ತೆ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ಬೆಣಚುಕಲ್ಲುಗಳ ಮೇಲೆಯೇ ವಾಹನಗಳು ಸಂಚರಿಸುತ್ತವೆ. ಸುಗಮ ಸಂಚಾರಕ್ಕಾಗಿ ಬೆಣಚುಕಲ್ಲುಗಳ ಸಮಕ್ಕೆ ರಸ್ತೆಗೂ ಡಾಂಬರೀಕರಣ ಮಾಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ವೃತ್ತ ಅಂದಗಟ್ಟುತ್ತದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಲವು ವರ್ಷಗಳ ಹಿಂದೆಯೇ ಮಾಜಿ ಮೇಯರ್ ಅಯೂಬ್‍ಖಾನ್ ಅವರು ಉದಯಗಿರಿಯ ರಸ್ತೆಯೊಂದನ್ನು ಬೆಣಚುಕಲ್ಲು ಗಳಿಂದ ಅಭಿವೃದ್ಧಿಪಡಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Translate »