ಜಿಲ್ಲಾ ಯೋಜನಾ ಸಮಿತಿ ನಿಷ್ಕ್ರಿಯಕ್ಕೆ ಕಾರಣ ಯಾರು?
ಮೈಸೂರು

ಜಿಲ್ಲಾ ಯೋಜನಾ ಸಮಿತಿ ನಿಷ್ಕ್ರಿಯಕ್ಕೆ ಕಾರಣ ಯಾರು?

January 6, 2019

ಮೈಸೂರು: ಜಿಲ್ಲಾ ಯೋಜನಾ ಸಮಿತಿ ನಿಷ್ಕ್ರಿಯಗೊಳ್ಳಲು ಯಾರು ಕಾರಣ ಎಂಬ ವಿಚಾರದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಆಡಳಿತ ಪಕ್ಷವಾದ ಜೆಡಿಎಸ್ ಹಾಗೂ ವಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪದೊಂದಿಗೆ ಮಾತಿನ ಚಕಮಕಿಗೂ ಶನಿವಾರ ನಡೆದ ಜಿಪಂ ಸಾಮಾನ್ಯ ಸಭೆ ವೇದಿಕೆಯಾಯಿತು.

ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮೈತ್ರಿ ಯಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಹಾಗೂ ವಿರೋಧ ಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರ ನಡುವೆ ಯೋಜನಾ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ಸಂಬಂಧಿಸಿದಂತೆ ವಾಕ್ಸಮರವೇ ಜೋರಾಗಿತ್ತು. ಕಳೆದ ಡಿ.21ರಂದು ಮುಂದೂ ಡಲ್ಪಟ್ಟ ಸಭೆ ಇಂದು ಬೆಳಿಗ್ಗೆ 11ಕ್ಕೆ ನಿಗದಿ ಯಾಗಿತ್ತು. 11.30ಕ್ಕೆ ಸಭೆ ಆರಂಭವಾಯಿ ತಾದರೂ ಕೋರಂ ಅಭಾವದ ಹಿನ್ನೆಲೆಯಲ್ಲಿ ಮಧ್ಯಾಹ್ನ 12ಕ್ಕೆ ಮುಂದೂಡಲ್ಪಟ್ಟಿತು. 12 ಗಂಟೆಗೆ ಸಭೆ ಆರಂಭಗೊಂಡಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರ ಜಟಾಪಟಿಗೆ ಸಾಕ್ಷಿಯಾಯಿತು.

ಮೊದಲಿಗೆ ನಿಲುವಳಿ ಮಂಡನೆಗೆ ಅಧ್ಯ ಕ್ಷರು ಅವಕಾಶ ನೀಡಿದ ಹಿನ್ನೆಲೆಯಲ್ಲಿ 7 ಸದಸ್ಯರು ತಲಾ 1ರಂತೆ 7 ವಿಷಯಗಳನ್ನು ನಿಲುವಳಿ ಮಂಡನೆಗಾಗಿ ಸಲ್ಲಿಸಿದರು. ಈ ಪೈಕಿ ಎರಡು ಪ್ರಮುಖ ವಿಷಯಗಳನ್ನು ಮಾತ್ರ ನಿಲುವಳಿ ಮಂಡನೆಗಾಗಿ ಆಯ್ಕೆ ಮಾಡ ಲಾಗಿದೆ. ಸಮಯದ ಅಭಾವದಿಂದ ಎಲ್ಲ ವನ್ನೂ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯ ವಿಲ್ಲ ಎಂದು ಅಧ್ಯಕ್ಷರು ಪ್ರಕಟಿಸಿದರು.

ಈ ವೇಳೆ ಬಿಜೆಪಿ ಸದಸ್ಯರಾದ ಮಂಗಳಾ ಸೋಮಶೇಖರ್, ಬಿ.ಎನ್. ಸದಾನಂದ ಉಳಿದ ವಿಷಯಗಳನ್ನು ಚರ್ಚಿ ಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿ ಸಿದರಾದರೂ ಇದಕ್ಕೆ ಅಧ್ಯಕ್ಷರು ಒಪ್ಪಲಿಲ್ಲ. ಇದೇ ವೇಳೆ ಜೆಡಿಎಸ್‍ನ ಎಂ.ಪಿ.ನಾಗ ರಾಜು ಮಾತು ಆರಂಭಿಸಲು ಮುಂದಾಗುತ್ತಿ ದ್ದಂತೆ ವಿಪಕ್ಷ ನಾಯಕ ಡಿ.ರವಿಶಂಕರ್, ಏಕಾಏಕಿ ಎದ್ದು ನಿಂತು ಸಭೆಯ ದಿಕ್ಕು ತಪ್ಪಿಸ ಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶಿಸಿ ಮಾತನಾಡಿದ ಜೆಡಿಎಸ್‍ನ ಬೀರಿಹುಂಡಿ ಬಸವಣ್ಣ, ರವಿ ಶಂಕರ್ ಅವರ ಈ ಆಕ್ಷೇಪಕ್ಕೆ ಏನು ಕಾರಣ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಿ ದ್ದಂತೆ ಮಾತಿಗಿಳಿದ ರವಿಶಂಕರ್, ನಾನು ಅನಗತ್ಯ ವಿಚಾರಗಳಿಗೆ ಅವಕಾಶ ನೀಡ ಬೇಡಿ ಎಂದು ಅಧ್ಯಕ್ಷರಲ್ಲಿ ಮನವಿ ಮಾಡು ತ್ತಿದ್ದೇನೆಯೇ ಹೊರತು ನಿಮ್ಮ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಕಾಂಗ್ರೆಸ್ ಸದಸ್ಯ ಎಸ್.ಶ್ರೀಕೃಷ್ಣ ಅವರ `ಜಿಲ್ಲಾ ಯೋಜನಾ ಸಮಿತಿ’ ಕುರಿತ ನಿಲುವಳಿ ಮಂಡನೆಗೆ ಅವಕಾಶ ನೀಡಲಾ ಯಿತು. ಈ ವೇಳೆ ಮಾತನಾಡಿದ ಎಸ್.ಶ್ರೀ ಕೃಷ್ಣ, 2017ರ ಜೂ.30ರಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ 37 ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ 27 ಸದಸ್ಯರು ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆಯಾಗಿದ್ದಾರೆ. 3 ತಿಂಗಳಿಗೊಮ್ಮೆ ಸಮಿತಿಯ ಸಭೆ ನಡೆಯ ಬೇಕು. ಆದರೆ ಅಧಿಕಾರಿ ವರ್ಗ ಸಮಿತಿ ಸದ ಸ್ಯರ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ. ಇದು ವರೆಗೂ ಒಂದಾದರೂ ಸಭೆ ನಡೆಸಿಲ್ಲ. ಇದು ಆಡಳಿತ ಲೋಪಕ್ಕೆ ಹಿಡಿದ ಕೈಗನ್ನಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಲೆಳೆದ ವೆಂಕಟಸ್ವಾಮಿ: ಇದಕ್ಕೆ ಪ್ರತಿ ಕ್ರಿಯಿಸಿದ ಬಿಜೆಪಿ ಸದಸ್ಯ ವೆಂಕಟಸ್ವಾಮಿ, ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಬಳಿಕ ಸಮಿತಿ ಅಧ್ಯಕ್ಷರು ಯಾರಾಗ ಬೇಕೆಂಬ ಪ್ರಶ್ನೆ ಎದುರಾಯಿತು. ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಜಿಪಂ ಅಧ್ಯಕ್ಷರು ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವ ರಿಗೆ ಅವಕಾಶವಿತ್ತು. ಸಚಿವರೇ ಅಧ್ಯಕ್ಷ ರಾಗಿದ್ದರೆ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಾಂಗ್ರೆಸ್ ಸದಸ್ಯರು ಎಲ್ಲರ ಮನವೊಲಿಸಿ ಅವರ ಪಕ್ಷ ದವರೇ ಆದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿಸಿದರು. ಹೀಗಾಗಿ ಸಮಿತಿ ನಿಷ್ಕ್ರಿಯಗೊಳ್ಳಲು ಏನು ಕಾರಣವೆಂದು ಕಾಂಗ್ರೆಸ್‍ನವರು ಅವಲೋಕನ ಮಾಡಿ ಕೊಳ್ಳಲಿ ಎಂದು ಕಾಲೆಳೆದರು.

ಈ ವೇಳೆ ಕಾಂಗ್ರೆಸ್ ಸದಸ್ಯೆ ಪುಷ್ಪಾ ಅಮರನಾಥ್, ಜಿಪಂ ಯೋಜನಾಬದ್ಧ ವಾಗಿ ಕಾರ್ಯನಿರ್ವಹಿಸಲು ಜಿಲ್ಲಾ ಯೋಜನಾ ಸಮಿತಿ ಸಹಕಾರಿ. ಹೀಗಾಗಿ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿ ವರು ಕಾರ್ಯನಿರ್ವಹಿಸಿದರೆ ಮೇಯರ್ ರಿಂದ ಹಿಡಿದು ಎಲ್ಲರೂ ಪರಿಣಾಮಕಾರಿ ಯಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಆಯ್ಕೆ ಮಾಡಲಾಯಿತು ಎನ್ನುತ್ತಿದ್ದಂತೆ, ಜೆಡಿಎಸ್‍ನ ಎಂ.ಪಿ.ನಾಗ ರಾಜು ಹಾಗೂ ಬೀರಿಹುಂಡಿ ಬಸವಣ್ಣ ಮಧ್ಯೆ ಪ್ರವೇಶಿಸಿ, ಒಟ್ಟಾರೆ ಕಾಂಗ್ರೆಸ್‍ನವರು ಜಿಲ್ಲಾ ಯೋಜನಾ ಸಮಿತಿ ಮುನ್ನಡೆಸು ವಲ್ಲಿ ವಿಫಲವಾಗಿದ್ದಾರೆ ಎಂದು ಕುಟುಕಿದರು.

ಪರಸ್ಪರ ವಾಗ್ದಾಳಿ: ಯೋಜನಾ ಸಮಿತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಜೆಡಿಎಸ್‍ನ ಬೀರಿಹುಂಡಿ ಬಸವಣ್ಣ ಹಾಗೂ ವಿಪಕ್ಷ ನಾಯಕ ಡಿ.ರವಿಶಂಕರ್ ಪರಸ್ಪರ ವಾಗ್ದಾಳಿ ನಡೆಸಿದರು. ಹಿಂದಿನ ಮಂತ್ರಿಗಳು ಸಮಿತಿ ಸಭೆಗಳನ್ನು ನಡೆಸಿಲ್ಲ ಎಂದು ಈಗಿನ ಮಂತ್ರಿಗಳನ್ನು ಅಧ್ಯಕ್ಷರಾಗಿ ಮಾಡಬಾ ರದು ಎಂಬುದು ಸರಿಯಲ್ಲ ಎಂದು ಬಸವಣ್ಣ ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ರವಿ ಶಂಕರ್ ನಾವು ಆ ರೀತಿ ಹೇಳಲೇ ಇಲ್ಲ ಎಂದು ಪ್ರತಿಪಾದಿಸಿದರು. ಮತ್ತೆ ಮುಂದು ವರೆದ ಬಸವಣ್ಣ, ಕಾಂಗ್ರೆಸ್‍ನವರು ನಮಗೆ (ಜೆಡಿಎಸ್) ಮಾತನಾಡಲು ಅವಕಾಶ ನೀಡದೇ ಪದೇ ಪದೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ದಿನಾಂಕ ನಿಗದಿಗೊಳಿಸಲಿಲ್ಲ: ಅಧ್ಯಕ್ಷರ ಸೂಚನೆಯಂತೆ ಎಲ್ಲರನ್ನೂ ಸಮಾ ಧಾನಪಡಿಸಿದ ಜಿಪಂ ಸಿಇಓ ಕೆ.ಜ್ಯೋತಿ, ಯೋಜನಾ ಸಮಿತಿ ಸಂಬಂಧ ಸಭೆಗೆ ಮಾಹಿತಿ ನೀಡುವಂತೆ ಜಿಪಂ ಮುಖ್ಯ ಯೋಜನಾ ಧಿಕಾರಿ ಪ್ರಭುಸ್ವಾಮಿ ಅವರಿಗೆ ಸೂಚನೆ ನೀಡಿದರು. 2017ರ ಜೂ.22ರಂದು ಸಮಿತಿ ಸದಸ್ಯರ ಚುನಾವಣೆ ನಡೆದು 60 ಮಂದಿ ಆಯ್ಕೆಯಾಗಿದ್ದು, ಆ ಬಳಿಕ ಅಧ್ಯಕ್ಷರಾಗಿ ಸಮಿತಿಗೆ ಅವಿರೋಧ ಆಯ್ಕೆಯಾಗಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಿತಿ ಸಭೆ ನಡೆಸುವ ಸಂಬಂಧ 2017ರ ನ.4 ರಂದು ಕಡತ ಸಲ್ಲಿಸಲಾಗಿದೆ. ಆದರೆ ಸಚಿ ವರು ದಿನಾಂಕ ನಿಗದಿ ಮಾಡಲಿಲ್ಲ. ಮತ್ತೆ ಕಡತ ಸಲ್ಲಿಸಿದರೂ ದಿನಾಂಕ ನಿಗದಿ ಗೊಳಿಸಲಿಲ್ಲ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಸಿಇಓ ಕೆ.ಜ್ಯೋತಿ, ಈ ಸಂಬಂಧ ಪರಿಶೀಲಿಸಿ ಶೀಘ್ರವೇ ಜಿಲ್ಲಾ ಯೋಜನಾ ಸಮಿತಿ ಚಟುವಟಿಕೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಭೆಗೆ ತಿಳಿಸುವ ಮೂಲಕ ಸದರಿ ವಿಷಯಕ್ಕೆ ತೆರೆ ಎಳೆದರು.

ಅಂಗನವಾಡಿಗಳಿಗೆ ಆಹಾರ ಪದಾರ್ಥ ಪೂರೈಕೆಯಲ್ಲಿ ಅಕ್ರಮ ಆರೋಪ
ಮೈಸೂರು: ಮಹಿಳಾ ಪೂರಕ ಪೌಷ್ಟಿಕ ಕೇಂದ್ರಗಳ (ಎಂಎಸ್ ಪಿಟಿಸಿ) ಮೂಲಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥದಲ್ಲಿ ಹಲವು ಅಕ್ರಮವಿದ್ದು, ಹೀಗಾಗಿ ಟೆಂಡರ್ ವ್ಯವಸ್ಥೆ ಮಾಡುವಂತೆ ಸದಸ್ಯ ಬೀರಿಹುಂಡಿ ಬಸವಣ್ಣ ಆಗ್ರಹಿಸಿದರು. ಒಬ್ಬರೇ ಎಂಎಸ್‍ಪಿಟಿಸಿ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಪೂರೈಕೆ ಮಾಡುತ್ತಿದ್ದು, ಇದರಲ್ಲಿ ನಡೆಯುತ್ತಿರುವ ಅಕ್ರಮಗಳು ಸಾಕಷ್ಟಿವೆ ಎಂದು ಆರೋಪಿಸಿದರು. ಇದಕ್ಕೆ ವಿವರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಧಾ, ಎಂಎಸ್‍ಪಿಟಿಸಿ ಮೂಲಕ ಪಡೆಯಬೇಕೆಂದು ಸರ್ಕಾರದ ಆದೇಶವಾಗಿದ್ದು, ಟೆಂಡರ್ ಕರೆಯಲು ಅವಕಾಶವಿಲ್ಲ. ಏನೇ ಮಾರ್ಪಾಡು ಮಾಡಬೇಕಿದ್ದರೂ ಅದು ಸರ್ಕಾರದ ಮಟ್ಟದಲ್ಲೇ ಆಗಬೇಕು ಎಂದು ವಿವರಿಸಿದರು.

ಈ ವೇಳೆ ಮಾತನಾಡಿದ ಸಿಇಓ ಕೆ.ಜ್ಯೋತಿ, ಅಕ್ರಮ ಸಂಬಂಧ ನಿರ್ದಿಷ್ಟ ಕೇಂದ್ರದ ಬಗ್ಗೆ ಮಾಹಿತಿ ನೀಡಿದರೆ ಶೀಘ್ರ ಕ್ರಮ ಕೈಗೊಳ್ಳಬಹುದು. ಎಂಎಸ್‍ಪಿಟಿಸಿ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ ಮಾಡುವುದು ರಾಜ್ಯ ಮಟ್ಟದ ಯೋಜನೆ ಆಗಿದೆ. ಇದನ್ನು ಜಿಲ್ಲೆಯಲ್ಲಿ ಟೆಂಡರ್ ಮೂಲಕ ವ್ಯವಸ್ಥೆ ಮಾಡಬೇಕೆಂದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಜೊತೆಗೆ ಕಾರಣಗಳನ್ನು ವಿವರಿಸಿ ನೀಡಿದರೆ ಪರಿಶೀಲಿಸಿ ಸರ್ಕಾರ ಅಂತಿಮ ತೀರ್ಮಾನ ತಿಳಿಸಲಿದೆ. ಸ್ವಯಂ ಆಗಿ ನಾವೇ ಟೆಂಡರ್ ಮಾಡಲು ಅವಕಾಶ ಇಲ್ಲ ಎಂದು ಮಾಹಿತಿ ನೀಡಿದರು.

Translate »