ಇಸ್ಕಾನ್ ಶ್ರೀ ಕೃಷ್ಣ ಬಲರಾಮ ರಥಯಾತ್ರೆಗೆ ಚಾಲನೆ
ಮೈಸೂರು

ಇಸ್ಕಾನ್ ಶ್ರೀ ಕೃಷ್ಣ ಬಲರಾಮ ರಥಯಾತ್ರೆಗೆ ಚಾಲನೆ

January 6, 2019

ಮೈಸೂರು: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 21ನೇ ವಾರ್ಷಿಕ ಇಸ್ಕಾನ್ ಶ್ರೀ ಕೃಷ್ಣ ಬಲರಾಮ ರಥಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು. ಈ ವೇಳೆ ಚೆನ್ನೈ ಇಸ್ಕಾನ್ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ಅವರು ಮಾತನಾಡಿ, 500 ವರ್ಷಗಳ ಹಿಂದೆ ಚೈತನ್ಯ ಮಹಾಪ್ರಭುಗಳು ಕೃಷ್ಣನ ನಾಮ ಸಂದೇಶ, ಕೀರ್ತನೆಯ ಉದ್ದೇಶವನ್ನು ಸಾರುವುದಕ್ಕೆ ಈ ರಥಯಾತ್ರೆಯು ಪ್ರಾರಂಭಗೊಂಡಿತು ಎಂದು ರಥಯಾತ್ರೆಯ ಇತಿಹಾಸ ಮಹತ್ವವನ್ನು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಮಾತ ನಾಡಿ, ಕೃಷ್ಣನ ಲೆಕ್ಕ ಎಂಬ ಮಾತನ್ನು ಸುಲಭವಾಗಿ ಉಪಯೋಗಿಸುವ ನಾವು ಕೃಷ್ಣನ ಜೀವನವನ್ನು ನೋಡಬೇಕು. ಪ್ರಜೆಗಳನ್ನು ಭರಿಸುವುದೇ ನಿಜವಾದ ಧರ್ಮ, ಮನಸ್ಸು, ಬಾಯಿ, ಕೆಲಸ ಮೂರರಲ್ಲೂ ಏಕತೆಯನ್ನು ನೋಡುವುದೇ ನಿಜವಾದ ಜೀವನದ ಹಾದಿ ಎಂದರು.

ಈ ವೇಳೆ ಶಾಸಕ ಎಲ್.ನಾಗೇಂದ್ರ, ಸ್ತೋಕ ಕೃಷ್ಣಸ್ವಾಮಿ ಮಧುಪಂಡಿತ ದಾಸರು, ಜೈ ಜೈತನ್ಯ ದಾಸರು ಉಪಸ್ಥಿತರಿದ್ದರು.

ರಥಯಾತ್ರೆ ಉತ್ಸವವು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಗಾಂಧಿ ಚೌಕ, ಸಯ್ಯಾಜಿ ರಾವ್ ರಸ್ತೆ, ಚಿಕ್ಕ ಗಡಿಯಾರ, ದೇವರಾಜ ಅರಸ್ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ರಸ್ತೆ, ಆರ್‍ಟಿಓ ವೃತ್ತ, ಬಲ್ಲಾಳ್ ವೃತ್ತ, ನ್ಯೂ ಕಾಂತರಾಜ ಅರಸ್ ರಸ್ತೆ, ಜಯನಗರ 2ನೇ ಮುಖ್ಯ ರಸ್ತೆಯ ಮೂಲಕ ಸಾಗಿ ಇಸ್ಕಾನ್ ದೇವಸ್ಥಾನ ತಲುಪಿತು.

ರಥಯಾತ್ರೆಯಲ್ಲಿ ಅನೇಕ ಸಾಂಸ್ಕøತಿಕ ಕಲಾತಂಡಗಳು, ಮಂಗಳವಾದ್ಯ, ಇಸ್ಕಾನ್ ಭಕ್ತರಿಂದ ಸಂಕೀರ್ತನೆ ಹಾಗೂ ಶ್ರೀ ಕೃಷ್ಣ ಬಲರಾಮರ ವಿಗ್ರಹವನ್ನು ಕೂರಿಸಿರುವ 35 ಅಡಿ ಎತ್ತರದ ರಥದ ಹಿಂದೆ ನೂರಾರು ಮಂದಿ ಭಕ್ತರು ಸಾಗಿದರು. ನಂತರ ಪ್ರಸಾದ ವಿನಿಯೋಗಿಸಲಾಯಿತು.

Translate »