ಮೈಸೂರು ಪಾಲಿಕೆಯಲ್ಲಿ `ಪ್ರಮಾಣ ಪತ್ರ’ ಪರದಾಟ
ಮೈಸೂರು

ಮೈಸೂರು ಪಾಲಿಕೆಯಲ್ಲಿ `ಪ್ರಮಾಣ ಪತ್ರ’ ಪರದಾಟ

January 6, 2019

ಮೈಸೂರು: ತ್ವರಿತವಾಗಿ ಜನನ-ಮರಣ ಪ್ರಮಾಣ ಪತ್ರ ಪಡೆಯಲೆಂದೇ ಇ-ಜನ್ಮ ಆ್ಯಪ್ ಪರಿಚಯಿಸಲಾಗಿದ್ದರೂ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಯೋಜನಕ್ಕೆ ಬಾರದೆ, ಪ್ರಮಾಣ ಪತ್ರ ಪಡೆಯುವುದು ಬಹಳ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಾಲಿಕೆಯ `ಜನನ-ಮರಣ’ ಪ್ರಮಾಣ ಪತ್ರ ವಿತರಣಾ ಕೌಂಟರ್ ಮುಂದೆ ಶನಿವಾರ ಸಾಲುಗಟ್ಟಿ ನಿಂತಿದ್ದ ವೃದ್ಧರು, ಮಹಿಳೆಯರು ಸೇರಿದಂತೆ ಹಲವರು, ಪ್ರಮಾಣ ಪತ್ರ ಪಡೆಯಲು ಪಾಡು ಪಡುತ್ತಿರುವ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಬಳಿ ಅಲವತ್ತುಕೊಂಡರು.

ಆಶ್ರಯ ಸಮಿತಿ ಸಭೆಗೆ ಹಾಜರಾಗಲೆಂದು ಪಾಲಿಕೆಗೆ ಬಂದಿದ್ದ ಶಾಸಕರು ವೃದ್ಧರು, ಮಹಿಳೆಯರ ಸಂಕಟ ಪಡುತ್ತಿರುವುದನ್ನು ಕಂಡು ವಿಚಾರಿಸಿದಾಗ ಪ್ರಮಾಣ ಪತ್ರ ವಿತರಣೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳು ಅನಾವರಣಗೊಂಡವು.

ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರೂ ಜನನ-ಮರಣ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಹೊಸ ಸಾಫ್ಟ್‍ವೇರ್‍ನಲ್ಲಿ ಲೋಪವಿದ್ದು, ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಿಬ್ಬಂದಿ ಸಬೂಬು ಹೇಳುತ್ತಾರೆ. ಮರಣ ಪ್ರಮಾಣ ಪತ್ರ 4 ಪ್ರತಿ ಕೇಳಿದರೆ ಒಂದೇ ಪ್ರತಿ ನೀಡುತ್ತಾರೆ. ಕೆಲವೊಮ್ಮೆ ವಲಯ ಕಚೇರಿಗಳಿಗೆ ಅಲೆದಾಡಿಸುತ್ತಾರೆ. ವಲಯ ಕಚೇರಿಗೆ ಹೋದರೆ, ಮುಖ್ಯ ಕಚೇರಿಗೆ ಹೋಗಿ ಎನ್ನುತ್ತಾರೆ ಎಂದು ಸಮಸ್ಯೆ ಸಂಕಷ್ಟಗಳ ಸರಮಾಲೆಯನ್ನೇ ತೆರೆದಿಟ್ಟರು.

ಸಮಸ್ಯೆಯ ತೀವ್ರತೆ ಅರಿತ ಶಾಸಕರು ಪಾಲಿಕೆ ಆಯುಕ್ತರನ್ನು ಈ ಬಗ್ಗೆ ಪ್ರಶ್ನಿಸಿದರು. ತಾಂತ್ರಿಕ ದೋಷವಿದ್ದರೆ ತಕ್ಷಣವೇ ಸರಿಪಡಿಸಿರಿ, ಸಾರ್ವಜನಿಕರನ್ನು ಅಲೆಸದೇ ತ್ವರಿತವಾಗಿ ಪ್ರಮಾಣ ಪತ್ರ ದೊರೆಯುವಂತೆ ಮಾಡಿ ಎಂದು ಸೂಚಿಸಿದರು. ಜನನ-ಮರಣ ಪ್ರಮಾಣ ಪತ್ರವನ್ನು ವಲಯ ಕಚೇರಿಗಳಲ್ಲೂ ದೊರೆಯುವಂತೆ ಮಾಡಿ, ಆನ್‍ಲೈನ್‍ನಲ್ಲಿಯೇ ಶುಲ್ಕ ಪಾವತಿಸಿ ಅರ್ಜಿ ಭರ್ತಿಗೆ ಅವಕಾಶ ಮಾಡಿಕೊಡಿ. ಪ್ರತ್ಯೇಕ ಸಹಾಯವಾಣಿಯ ವ್ಯವಸ್ಥೆ ಮಾಡಿರಿ ಎಂದು ನಿರ್ದೇಶನ ನೀಡಿದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

Translate »