ದಸರಾ ಆಹಾರ ಮೇಳದಲ್ಲಿ ಆರೋಗ್ಯ ವರ್ಧಕ ಕಾಡುಬಾಳೆ ಕಾಯಿಯ ತಿನಿಸು ಲಭ್ಯ
ಮೈಸೂರು, ಮೈಸೂರು ದಸರಾ

ದಸರಾ ಆಹಾರ ಮೇಳದಲ್ಲಿ ಆರೋಗ್ಯ ವರ್ಧಕ ಕಾಡುಬಾಳೆ ಕಾಯಿಯ ತಿನಿಸು ಲಭ್ಯ

October 11, 2018

50 ರೂ. ಕೊಟ್ಟರೆ ಕಾಡುಬಾಳೆ ಸಾಂಬಾರ್, ಮುದ್ದೆ ಸವಿಯಲು ಸಿದ್ಧ
ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆವರಣ ದಲ್ಲಿ ಇಂದಿನಿಂದ ಆರಂಭವಾದ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ದರ್ಶಿನಿ ಯಲ್ಲಿ ನಾಟಿ ಔಷಧೀಯ ಗುಣವುಳ್ಳ ಕಾಡುಬಾಳೆಕಾಯಿ ಸಾಂಬಾರ್, ಮಾಗಳಿ ಬೇರು ಟೀ, ಬಿದಿರಕ್ಕಿ ಪಾಯಸ ದೊರೆಯಲಿದೆ.

ಹೆಚ್.ಡಿ.ಕೋಟೆಯ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ತೆರೆಯ ಲಾಗಿರುವ ಬುಡಕಟ್ಟು ದರ್ಶಿನಿಯಲ್ಲಿ ಇದೇ ಮೊದಲ ಬಾರಿಗೆ ಕಾಡುಬಾಳೆಕಾಯಿ ಸಾಂಬಾರ್, ಮುದ್ದೆ ನೀಡಲಾಗುತ್ತಿದೆ. ಕಾಕನಕೋಟೆ ಹಾಗೂ ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ಮಾತ್ರ ಕಾಡುಬಾಳೆ ಬೆಳೆಯಲಿದ್ದು, ಮೈಸೂರಿನ ಜನತೆಗೆ ಕಾಡು ಬಾಳೆಯ ರುಚಿಯುಣಿಸಲು ಬುಡಕಟ್ಟು ಕೃಷಿಕರ ಸಂಘ 100 ಕೆಜಿ ಕಾಡುಬಾಳೆ ಕಾಯಿ ಹಾಗೂ ಹಣ್ಣನ್ನು ತಂದಿದೆ. ಮೇಳದಲ್ಲಿ ಇದೇ ಮೊದಲ ಬಾರಿಗೆ ಕಾಡುಬಾಳೆ ಕಾಯಿಯ ರುಚಿ ದೊರೆಯಲಿದ್ದು, ಅದರ ಮಹತ್ವ ಅರಿತವರು ಮೊದಲ ದಿನವೇ ಸವಿಯಲು ಮುಗಿಬಿದ್ದರು.

ಕಾಡುಬಾಳೆ ಕಾಯಿಯೊಂದಿಗೆ ತೊಗರಿ ಬೇಳೆ, ಕಡಲೆಕಾಳು ಅಥವಾ ಅವರೆ ಕಾಳು ಬಳಸಿ ಸಾಂಬಾರ್ ತಯಾರಿಸಲಾಗುತ್ತದೆ. ಯಾವುದೇ ರಾಸಾಯನಿಕ ವಸ್ತು ಮಿಶ್ರಣವುಳ್ಳ ಸಾಂಬಾರ್ ಪದಾರ್ಥ ಬಳಸದೆ ತಾವೇ ತಯಾರಿಸಿದ ಪದಾರ್ಥಗಳನ್ನು ಬಳಸುತ್ತಿರು ವುದರಿಂದ ರಾಗಿ ಮುದ್ದೆಗೆ ಬಾಳೆಕಾಯಿ ಸಾಂಬಾರ್ ರುಚಿಯಾಗಿದೆ. ಸಕ್ಕರೆ ಖಾಯಿಲೆ, ದೇಹದ ಉಷ್ಣವನ್ನು ಕಡಿಮೆ ಮಾಡುವುದು ಹಾಗೂ ಅಜೀರ್ಣ ಸಮಸ್ಯೆ ಹೋಗಲಾಡಿಸುವುದಕ್ಕೆ ಕಾಡುಬಾಳೆಕಾಯಿ ಉತ್ತಮ ಮನೆ ಮದ್ದಾಗಿದೆ. ಈ ಹಿನ್ನೆಲೆ ಯಲ್ಲಿ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ. 50 ರೂ. ನೀಡಿ ಸವಿಯಬಹುದಾಗಿದೆ.

ಮಾಗಳಿ ಬೇರು ಟೀ: ಅರಣ್ಯ ಪ್ರದೇಶದಲ್ಲಿ ಸಿಗುವ ಮಾಗಳಿಬೇರಿನಿಂದ ತಯಾರಿಸಿರುವ ಟೀ ಈ ಬಾರಿಯೂ ಬುಡಕಟ್ಟು ದರ್ಶಿನಿ ಯಲ್ಲಿ ಲಭ್ಯವಿದೆ. ಮಾಗಳಿಬೇರು, ಸ್ವಲ್ಪ ಬೆಲ್ಲ ಬಳಸಿ ತಯಾರಿಸುವ ಈ ಟೀ ಸೇವಿಸು ವುದರಿಂದ ಸಕ್ಕರೆ ಖಾಯಿಲೆ, ಅಜೀರ್ಣ, ಹೊಟ್ಟೆ ಉಬ್ಬಸ ಸಮಸ್ಯೆ ನಿವಾರಣೆ, ಭರವಸೆ.

ಕಾಡುಬಳ್ಳೆಕಾಯಿ: ತೀವ್ರತರ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿರುವ ವರಿಗೆ ಕಾಡುಬಳ್ಳೆಕಾಯಿ ರಾಮಬಾಣವಾಗಿದೆ. ಕಾಡಿನಲ್ಲಿ ಬೆಳೆಯುವ ಕಾಡುಬಳ್ಳೆಕಾಯಿ ಮೇಲ್ನೋಟಕ್ಕೆ ಸಣ್ಣ ಮಾವಿನಕಾಯಿ ಅಥವಾ ನಿಂಬೆಕಾಯಿಯಂತೆ ಭಾಸವಾ ಗುತ್ತದೆ. ಇದನ್ನು ಕೆಂಡದಲ್ಲಿ ಸುಟ್ಟು ತಿನ್ನಬಹುದು.

ಬಿದಿರಕ್ಕಿ ಪಾಯಸ ಸೇರಿದಂತೆ ಇನ್ನಿತರ ಬುಡಕಟ್ಟು ಆಹಾರ ಲಭ್ಯವಿದೆ. ಬೆಟ್ಟದ ನೆಲ್ಲಿಕಾಯಿ, ಜೇನುತುಪ್ಪ ಹಾಗೂ ಇನ್ನಿತರ ವಸ್ತುಗಳ ಮಾರಾಟವಿದೆ. ಹೆಚ್.ಡಿ.ಕೋಟೆಯ ಬುಡಕಟ್ಟು ಕೃಷಿಕರ ಸಂಘ ಅಧ್ಯಕ್ಷ ಕೆಂಚಯ್ಯ, ಪ್ರಧಾನ ಕಾರ್ಯ ದರ್ಶಿ ಡಿ.ಎಂ.ಬಸವರಾಜು, ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಇನ್ನಿತ ರರು ಈ ದರ್ಶಿನಿಯಲ್ಲಿ ತಮ್ಮ ತಿಂಡಿ, ತಿನಿಸು ಅಣಿಗೊಳಿಸುತ್ತಿದ್ದಾರೆ.

Translate »