ಮಡಿಕೇರಿ, ಸೆ.14-ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆ ಬೆಟ್ಟದಿಂದ ಭಾರೀ ಬಂಡೆ ಉರುಳಿ ಬಿದ್ದಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ಬೆಟ್ಟದ ತಪ್ಪಲಿ ನಲ್ಲಿ ಹಲವಾರು ಕುಟುಂಬಗಳು ನೆಲೆ ನಿಂತಿದ್ದು, ನೂರಾರು ಗ್ರಾಮಸ್ಥರು ಜೀವ ಭಯ ಎದುರಿಸುತ್ತಿದ್ದಾರೆ.
ಭಾಗಮಂಡಲ ಅರಣ್ಯ ವ್ಯಾಪ್ತಿಯ ಈ ಪ್ರದೇಶ ಹಚ್ಚ ಹಸುರಿನ ಶೋಲಾ ಕಾಡು ಗಳಿಂದ ಆವೃತ್ತವಾಗಿದ್ದು, ಬೆಟ್ಟದ ಮೇಲಿಂದ ಉರುಳಿದ ಬೃಹತ್ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳ ನೆಲಸಮಗೊಳಿಸಿ, ಭಾರೀ ಮರ ತಡೆದು ನಿಂತಿವೆ. ಪ್ರಸ್ತುತ ಜಿಲ್ಲೆಯ ಭಾಗಮಂಡಲ, ಸಂಪಾಜೆ, ಕರಿಕೆ, ಸುಬ್ರಮಣ್ಯ ಬೆಟ್ಟ ಸಾಲು ವ್ಯಾಪ್ತಿಯಲ್ಲಿ ಇಂದಿಗೂ ಮಳೆ ಸುರಿಯುತ್ತಿದ್ದು, ಯಾವ ಕ್ಷಣದಲ್ಲಾದರೂ ಬಂಡೆಗಳು ಗ್ರಾಮದ ಮೇಲೆ ಉರುಳುವ ಸಾಧ್ಯತೆಯನ್ನು ಅಲ್ಲಗಳೆಯು ವಂತಿಲ್ಲ. ಈ ಗ್ರಾಮದ ಜನರು ಇದೇ ಮೊದಲ ಬಾರಿಗೆ ಇಂತಹ ಪ್ರಾಣಾಂತಿಕ ಘಟನೆಗಳನ್ನು ನೋಡುತ್ತಿದ್ದು, ಗ್ರಾಮಸ್ಥರ ನೆಮ್ಮದಿ ಮಾಯವಾಗಿದೆ. ಕಳೆದ ವರ್ಷ ಸುಬ್ರಹ್ಮಣ್ಯ ಅರಣ್ಯ ಪ್ರದೇಶದ ಸುತ್ತಮುತ್ತ ಭೂಕಂಪನ ಸಂಭವಿಸುವುದರೊಂದಿಗೆ ಜೋಡುಪಾಲದಲ್ಲಿ ಭಾರೀ ಪ್ರಮಾಣದ ಭೂಕುಸಿತ ಘಟಿಸಿ, ಅನೇಕ ಜೀವಗಳನ್ನು ಬಲಿ ಪಡೆದಿತ್ತು. ಇದೇ ಸಂದರ್ಭ ಈ ಕೋಳಿ ಕಲ್ಲು ಬೆಟ್ಟದ ಬಂಗಾರಕೋಡಿ ಪ್ರದೇಶ ದಲ್ಲಿಯೂ ಭಾರೀ ಜಲಸ್ಫೋಟದೊಂದಿಗೆ ಭೂ ಕುಸಿತದ ದುರಂತ ಘಟಿಸಿತ್ತು. ಈ ವರ್ಷ ದಕ್ಷಿಣ ಕೊಡಗಿನ ತೋರಾ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿ ಯಾಗಿದೆ. ಈ ನಡುವೆ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಅಪಾ ಯದ ಮುನ್ಸೂಚನೆ ನೀಡಿದ್ದು, ಜೊತೆಗೆ ಕೋಳಿಕಲ್ಲು ಬೆಟ್ಟದಲ್ಲೂ ಬೃಹತ್ ಗಾತ್ರದ ಬಂಡೆಗಳು ಉರುಳಿವೆ. ಕೋಳಿಕಲ್ಲು ಬೆಟ್ಟದ ಇನ್ನೊಂದು ಭಾಗದಲ್ಲಿ ಅರೆಕಲ್ಲ್ಲು ಪ್ರದೇಶವಿದ್ದು, ಅಲ್ಲಿನ ಕೊಪ್ಪರಿಗೆ ಗುಡ್ಡೆ ಎಂಬಲ್ಲಿ ಮೊದಲಿಗೆ ಬಂಡೆಗಳು ಉರುಳಿದ್ದು, ನಂತರ ಕುಂಡಾಡು ಚಾಮಕಜೆಯಲ್ಲಿಯೂ ಉರುಳಿ ಬಿದ್ದಿವೆ ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ. ಈ ಪ್ರದೇಶದ ತಪ್ಪಲಲ್ಲಿ ನೈಸರ್ಗಿಕ ತೊರೆಯೊಂದು ತುಂಬಿ ಹರಿಯುತ್ತಿದ್ದು, ನೀರಿನ ಹರಿವಿನ ಶಬ್ದಕ್ಕೆ ಕೆಳಭಾಗದಲ್ಲಿರುವ ಮನೆಗಳ ನಿವಾಸಿಗಳಿಗೆ ಬಂಡೆ ಉರುಳಿದ ವಿಚಾರವೇ ಗೊತ್ತಾಗಲಿಲ್ಲ. ಆದರೆ ಬೆಟ್ಟದ ಎದುರು ಭಾಗದಲ್ಲಿರುವ ನಿವಾಸಿಗಳಿಗೆ ಗುಡುಗುವ ರೀತಿಯ ಭಾರೀ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಮರುದಿನ ಗ್ರಾಮದ ಯುವಕರು ಅಲ್ಲಿಗೆ ಹೋಗಿ ನೋಡಿದಾಗ ಬಂಡೆಗಳು ಗ್ರಾಮದತ್ತ ಉರುಳಿ ಬಿದ್ದಿರುವುದು ಗೋಚರಿಸಿದೆ. ಈ ಬಂಡೆಗಳು ಚಪ್ಪಟೆಯಾಗಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ಭಾರೀ ಅನಾಹುತವೂ ತಪ್ಪಿದಂತಾಗಿದೆ. ಒಂದು ವೇಳೆ ಈ ಬಂಡೆಗಳು ಮರದಿಂದ ಬೇರ್ಪಟ್ಟು ಮತ್ತೆ ಉರುಳಿದರೆ ಕೆಳಗಿರುವ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಬೆಟ್ಟದ ಮೇಲಿಂದ ಬಂಡೆಗಳು ಜಾರಿ ಬಂದಿರುವ ಸ್ಥಳದ ಉದ್ದಕ್ಕೂ ಚಿಕ್ಕಪುಟ್ಟ ಮರ ಗಿಡಗಳನ್ನು ಬಂಡೆ ಧ್ವಂಸ ಮಾಡಿದ್ದು, ಆ ಸಂದರ್ಭದ ಘೋರತೆಯನ್ನು ಸಾಕ್ಷೀಕರಿಸುತ್ತಿವೆ.
ಸದ್ಯದ ಮಟ್ಟಿಗೆ ಬಂಡೆಗಳೇನೋ ಮರದ ಬುಡದಲ್ಲಿ ಬಂದು ನಿಂತಿವೆ. ಆದರೆ ಭವಿಷ್ಯದ ದಿನಗಳಲ್ಲಿ ಏನಾಗಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಭೂಕುಸಿತದಿಂದ ಸಾಕಷ್ಟು ಸಾವು-ನೋವು ಸಂಭವಿಸಿದ್ದು, ಇದೀಗ ಕೋಳಿಕಲ್ಲು ಮಲೆ ಯಲ್ಲೂ ಭಾರೀ ಅಪಾಯವಿದೆ ಎಂಬ ಸುಳಿವು ಲಭಿಸಿದೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಂಡೆ ಜಾರುವಿಕೆಗೆ ಕಾರಣ ಕಂಡು ಹಿಡಿಯಬೇಕಿದೆ. ಉರುಳಿದ ಬಂಡೆಗಳನ್ನು ತೆರವು ಮಾಡಿ ಮುಂದೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬೇಕಾಗಿದೆ. ಬ್ರಹ್ಮಗಿರಿ ಬೆಟ್ಟಕ್ಕೂ, ಕೋಳಿಕಲ್ಲು ಬೆಟ್ಟಕ್ಕೂ ಇದುವರೆಗೆ ಹಾನಿಯಾಗಿರಲಿಲ್ಲ. ಆದರೆ ಈ ಬಾರಿ ಈ ಎರಡೂ ಬೆಟ್ಟಗಳಲ್ಲೂ ಹಾನಿ ಸಂಭವಿಸಿರುವುದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ