ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ
ಮೈಸೂರು

ಮೈಸೂರಲ್ಲಿ ಭಾರೀ ಗುಡುಗು ಸಹಿತ ಮಳೆ

May 9, 2019

ಮೈಸೂರು: ಮೈಸೂರಿನಲ್ಲಿ ಬುಧವಾರ ಸಂಜೆ ಗಾಳಿ, ಗುಡುಗು ಸಹಿತ ಸುರಿದ ಜೋರು ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತಾದರೂ ಸಂಜೆ 6.30ರವೇಳೆಗೆ ಗಾಳಿ, ಮಿಂಚು-ಗುಡುಗಿನೊಂದಿಗೆ ಜೋರು ಮಳೆ ಸುರಿಯಿತು. ಇದರಿಂದ ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿಬದಿ ವ್ಯಾಪಾರಿಗಳು ಪರದಾಡುವಂತಾಗಿತ್ತು.

ಧರೆಗುರುಳಿದ ಮರ: ರಾಮಕೃಷ್ಣನಗರದ ವಾಸು ಲೇಔಟ್‍ನಲ್ಲಿನ ಮನೆಯೊಂದರ ಮುಂಭಾಗದಲ್ಲಿದ್ದ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಲೈನ್‍ಗಳು ಮನೆಯ ಮೇಲೆ ಬಿದ್ದಿವೆ. ಕೂಡಲೇ ವಿದ್ಯುತ್ ಕಡಿತಗೊಂಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾಗೆಯೇ ರಾಮಕೃಷ್ಣನಗರದ ಅಮೃತಬೇಕರಿ, ವಿಜಯನಗರ 3 ಮತ್ತು 4ನೇ ಹಂತ, ನಜರ್‍ಬಾದ್‍ನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮುಂಭಾಗಲ್ಲಿನ ಮರಗಳು ಧರೆಗುರುಳಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಿಷಯ ತಿಳಿದು ಎಂಸಿಸಿ ಅಭಯ ತಂಡ ಸ್ಥಳಕ್ಕಾಗಮಿಸಿ, ಮರಗಳನ್ನು ತೆರವುಗೊಳಿಸಿದರು.

ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ: ನ್ಯೂಕಾಂತರಾಜ ರಸ್ತೆಯ ಬಸವೇಶ್ವರನಗರದ ಶರತ್ ಮೆಡಿಕಲ್ ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಬೈಕ್ ಸವಾರ ನಾಗಭೂಷಣ್, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರ ಪ್ರದೇಶಕ್ಕಿಂತ ಹೊರವಲಯದಲ್ಲಿ ಹೆಚ್ಚು ಮಳೆಯಾಗಿದ್ದು, ರಿಂಗ್ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ವಿಜಯನಗರ, ಮೇಟಗಳ್ಳಿ, ವಿಜಯನಗರ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿರುವ ಬಗ್ಗೆ ವರದಿಯಾಗಿದೆ. ಆದರೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರ ಬಗ್ಗೆ ವರದಿಯಾಗಿಲ್ಲ.

Translate »