ಮೈಸೂರು, ಮಾ.8(ಎಂಕೆ)- ಮೈಸೂ ರಿನ ಕಲಾಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದಿಂದ ಭಾನು ವಾರ ಏರ್ಪಡಿಸಿದ್ದ ‘ಮಹಾಸಾಧ್ವಿ ಹೇಮ ರೆಡ್ಡಿ ಮಲ್ಲಮ್ಮ ನೃತ್ಯರೂಪಕ’ ಅತ್ಯಾಕರ್ಷಕ ಸಂಗೀತ ಸಂಯೋಜನೆ, ಭರತನಾಟ್ಯ ಮತ್ತು ಭಾವಾಭಿನಯದೊಂದಿಗೆ ಕಲಾ ಭಿಮಾನಿಗಳ ಮನಗೆದ್ದಿತು. ವಿದುಷಿ ಜ್ಯೋತಿ ಶಂಕರ್ ಪರಿಕಲ್ಪನೆ ಮತ್ತು ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇ ಶಕಿ ವಿದುಷಿ ಕೃಪಾ ಪಡ್ಕೆ ನೃತ್ಯ ನಿರ್ದೇಶನ ದಲ್ಲಿ ನೃತ್ಯ ರೂಪಕ ಮೂಡಿಬಂದಿತು.
ನಾಗರೆಡ್ಡಿ-ಗೌರಮ್ಮ ದಂಪತಿಯ ಮಗ ಳಾಗಿ ಮಲ್ಲಮ್ಮ ಜನನ, ಶಿವನ ಆರಾಧನೆ, ಮದುವೆ ನಂತರ ಎದುರಿಸುವ ಕಷ್ಟಗಳು, ಅದರ ನಡುವೆಯೂ ತಮ್ಮವರ ಒಳಿತಿ ಗಾಗಿ ಶಿವನಲ್ಲಿ ಪಾರ್ಥಿಸುವ ದೃಶ್ಯಾವಳಿ ಗಳನ್ನು ಮನೋಜ್ಞವಾಗಿ ಅಭಿನಯಿಸುವ ಮೂಲಕ ಭಕ್ತಿಯ ಮಹತ್ವ ತಿಳಿಸಲಾ ಯಿತು. ಹೇಮರೆಡ್ಡಿ ಮಲ್ಲಮ್ಮ ಪಾತ್ರಧಾರಿ ಯಾಗಿ ವಿದುಷಿ ಕೃಪಾಪಡ್ಕೆ, ತಮ್ಮ ನುರಿತ ಅಭಿನಯದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಹಾಡುಗಾರಿಕೆಯಲ್ಲಿ ವಿದ್ವಾನ್ ಶರತ್‍ರಾವ್, ಸಂಭಾಷಣೆ ವಿದುಷಿ ಜ್ಯೋತಿ ಶಂಕರ್ ಮತ್ತು ಕೆ.ಎಸ್.ಚಂದ್ರಶೇಖರ್, ಮೃದಂಗ ಶಿವಶಂಕರಸ್ವಾಮಿ, ರಿದಂ ಪ್ಯಾಡ್ ನಲ್ಲಿ ಅನಂತಕೃಷ್ಣ, ಕೊಳಲು ವಾದನದಲ್ಲಿ ಸಿ.ಎನ್.ತ್ಯಾಗರಾಜನ್ ಉತ್ತಮ ಸಾಥ್ ನೀಡಿದರು. ನೃತ್ಯರೂಪಕ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟ ದಾರ್ಯ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಶಿವನ ಆರಾಧನೆಯಿಂದ ಪ್ರಾಮುಖ್ಯತೆ ಪಡೆದ ವಿಶೇಷ ವನಿತೆ. ಇಂದಿನ ಮಹಿಳೆ ಯರು ಧಾರವಾಹಿಗೆ ಸೀಮಿತವಾಗಿ ಬಿಡುತ್ತಿ ದ್ದಾರೆ. ನಾಟಕ, ಸಂಗೀತದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸ್ವಲ್ಪಮಟ್ಟಿಗೆ ಇತ್ತೀ ಚಿನ ದಿನಗಳಲ್ಲಿ ಮಕ್ಕಳನ್ನು ನೃತ್ಯ, ಸಂಗೀತ ದಲ್ಲಿ ಒಲವು ಮೂಡಿಸುವುದು ಅಲ್ಲಲ್ಲಿ ಕಂಡುಬರುತ್ತದೆ. ಇಂದಿನ ದಿನಮಾನಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರನ್ನು ಸ್ಮರಣೆ ಮಾಡಿಕೊಳ್ಳುವುದು ಅಗತ್ಯ. ಅವರ ಜೀವನ ವನ್ನು ನೃತ್ಯರೂಪಕದ ಮೂಲಕ ಪ್ರಸ್ತುತ ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಕನ್ನಡ-ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಜಿ.ಎಂ. ಮಹದೇವ, ಗೌರವಾಧ್ಯಕ್ಷ ಗೊ.ರು.ಪರಮೇ ಶ್ವರಪ್ಪ, ಉಪಾಧ್ಯಕ್ಷ ಜಿ.ಶಿವಲಿಂಗಸ್ವಾಮಿ, ತಿಪ್ಪೇಸ್ವಾಮಿ, ಲಲಿತಾ ಪಾಟೀಲ್ ಇದ್ದರು.