ಕುಶಾಲನಗರದಲ್ಲಿ ಐತಿಹಾಸಿಕ ಶ್ರೀಗಣಪತಿ ರಥೋತ್ಸವ
ಕೊಡಗು

ಕುಶಾಲನಗರದಲ್ಲಿ ಐತಿಹಾಸಿಕ ಶ್ರೀಗಣಪತಿ ರಥೋತ್ಸವ

November 27, 2018

ಕುಶಾಲನಗರ:  ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ವಾರ್ಷಿಕ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತ ವಾಗಿ ಬಸವಾಪಟ್ಟಣದ ಸುಬ್ಬುಕೃಷ್ಣ ದೀಕ್ಷಿತ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ನಾಗೇಂದ್ರಬಾಬು ಹಾಗೂ ವಿವಿಧ ದೇವಸ್ಥಾನ ಗಳ ಅರ್ಚಕರ ನೇತೃತ್ವದಲ್ಲಿ ನೆರವೇರಿದವು.

ಈ ಐತಿಹಾಸಿಕ ಗಣಪತಿ ರಥೋತ್ಸವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಜಿಲ್ಲೆಯ ಇತರೆಡೆ ಗಳಿಂದ ಸಹಸ್ರಾರು ಜನರು ಪಾಲ್ಗೊಂಡು ರಥವನ್ನು ಎಳೆದು ಪುನೀತರಾದರು.

ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ದರು. ನೂತನ ರಥಕ್ಕೆ ಭಗವಾಧ್ವಜ, ವಿವಿಧ ಪುಷ್ಪಗಳಿಂದ ಹಾಗೂ ವಸ್ತ್ರಗಳಿಂದ ಅಲಂ ಕೃತಗೊಳಿಸಿ ಮಧ್ಯಾಹ್ನ 12.50ಗಂಟೆಗೆ ಸರಿಯಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಮಂಗಳವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ರಥವನ್ನು ಗಣಪತಿ ದೇವಸ್ಥಾನದಿಂದ ರಥ ಬೀದಿಯ ಮೂಲಕ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಉದ್ಘೋಷ ಹಾಗೂ ಜಯಕಾರಗಳೊಂದಿಗೆ ಎಳೆದು ಭಕ್ತಿ ಪರವಶ ರಾದರು. ಈ ಸಂದರ್ಭ ನೆರೆದಿದ್ದ ಭಕ್ತಾದಿಗಳು ಅಲಂಕೃತ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಮೆರೆದರು. ಮೆರವಣಿಗೆ ಆರಂಭ ಗೊಂಡ ಬಳಿಕ ಹರಕೆ ಹೊತ್ತ ಭಕ್ತಾದಿಗಳು ಇಡು ಗಾಯಿ ಒಡೆಯುವ ದೃಶ್ಯ ಕಂಡುಬಂದಿತು.

ಅಯ್ಯಪ್ಪ ಸ್ವಾಮಿ ವ್ರತಾಚರಣೆಯ ಭಕ್ತರು ರಥದ ಮುಂದೆ ಕರ್ಪೂರದ ಆರತಿ ಬೆಳಗಿ ಜಯಘೋಷ ಮೊಳಗಿಸಿದರು. ರಥವನ್ನು ಎಳೆಯುವ ಸಂದರ್ಭ ವ್ಯಾಪಾರ ಸ್ಥರು ಮಜ್ಜಿಗೆ ಹಾಗೂ ಪಾನಕ ಹಾಗೂ ಸಿಹಿಯನ್ನು ವಿತರಿಸಿದರು. ರಥೋತ್ಸವ ಮತ್ತು ಜಾತ್ರೋತ್ಸವವು ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ್ ರಾವ್ ಮತ್ತು ಖಜಾಂಜಿ ಎಂ.ಕೆ.ದಿನೇಶ್ ನೇತೃತ್ವ ದಲ್ಲಿ ನೆರವೇರಿದವು. ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನ ವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾ ಗಿತ್ತಲ್ಲದೆ, ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿ ಚಿತ್ತಾರ ಬಿಡಿಸಿದ್ದರು.
ಅನ್ನದಾನ ವ್ಯವಸ್ಥೆ: ಶ್ರೀ ಗಣಪತಿ ಅನ್ನ ಸಂತರ್ಪಣಾ ಸಮಿತಿ ವತಿಯಿಂದ ಗಾಯಿತ್ರಿ ಕಲ್ಯಾಣಮಂಟಪದ ಆವರಣದಲ್ಲಿ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಲ್ಪಿಸಲಾಗಿತ್ತು.

ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಸಹಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕ ರಾದ ಎಸ್.ಎನ್. ನರಸಿಂಹಮೂರ್ತಿ, ವಿ.ಪಿ. ಶಶಿಧರ್, ಜಿ.ಎಲ್.ನಾಗರಾಜು, ಎಂ.ವಿ. ನಾರಾಯಣ, ಟಿ.ಆರ್.ಶರವಣಕುಮಾರ್, ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಡಿ.ಸಿ. ಜಗದೀಶ್, ಕೆ.ಎಸ್.ಸುರೇಶ್, ಕೆ.ಸಿ. ನಂಜುಂಡಸ್ವಾಮಿ, ಪ.ಪಂ.ಅಧ್ಯಕ್ಷೆ ರೇಣುಕಾ ಮತ್ತಿತರರು ಹಾಜರಿದ್ದರು.

ಶಾಸಕರ ಭೇಟಿ : ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ವಿಧಾನಪರಿಷತ್ ಮಾಜಿ ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಅನೇಕ ಗಣ್ಯರು ಗಣಪತಿ ದೇವ ಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ರಥೋತ್ಸವದ ಸಂದರ್ಭ ಡಿವೈಎಸ್ಪಿ ಮುರುಳೀಧರ್, ಸಿಐ ಕ್ಯಾತೇಗೌಡ, ಎಸ್‍ಐ ಜಗದೀಶ್, ನವೀನ್‍ಗೌಡ ಹಾಗೂ ಸಿಬ್ಬಂದಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದರು.

Translate »