ಬೊಟ್ಯತ್ನಾಡ್ ಹಾಕಿ ಟೂರ್ನಿ: ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿಯನ್
ಕೊಡಗು

ಬೊಟ್ಯತ್ನಾಡ್ ಹಾಕಿ ಟೂರ್ನಿ: ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿಯನ್

December 30, 2019

ಗೋಣಿಕೊಪ್ಪ, ಡಿ.29- ಬೊಟ್ಯತ್ನಾಡ್ ಸ್ಫೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಬೊಟ್ಯತ್ನಾಡ್ ಹಾಕಿ ಟೂರ್ನಿ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬೇಗೂರ್ ಈಶ್ವರ ಯೂತ್ ಕ್ಲಬ್ ಚಾಂಪಿ ಯನ್ ತಂಡವಾಗಿ ಹೊರಹೊಮ್ಮಿತು. ನೀರಸ ಪ್ರದರ್ಶನ ನೀಡಿದ ಆತಿಥೇಯ ಬೊಟ್ಯತ್ನಾಡ್ ಸೋತು ರನ್ನರ್ ಅಪ್‍ಗೆ ತೃಪ್ತಿಪಟ್ಟು ಕೊಂಡಿತು. ಆ ಮೂಲಕ 4 ದಿನ ನಡೆದ ಟೂರ್ನಿ ತೆರೆ ಕಂಡಿದೆ.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಬೊಟ್ಯತ್ನಾಡ್ ಫೈನಲ್‍ನಲ್ಲಿ ಮುಗ್ಗರಿಸಿತ್ತು. ಬೇಗೂರ್ ತಂಡದ ಉತ್ತಮ ನಿರ್ವಹಣೆಯಿಂದ 4-2 ಗೋಲುಗಳ ಗೆಲುವು ಸಾಧಿಸುವಂತಾಯಿತು. ಬೇಗೂರ್ ಪರ 13ನೇ ನಿಮಿಷದಲ್ಲಿ ರಂಜನ್ ಅಚ್ಚಯ್ಯ, 23ರಲ್ಲಿ ಮುಕ್ಕಾಟೀರ ಪೂಣಚ್ಚ, 26ರಲ್ಲಿ ಶೇಷಗೌಡ, 44ರಲ್ಲಿ ಕಾರ್ಯಪ್ಪ ಗೋಲು ಬಾರಿಸಿದರು. ಬೊಟ್ಯತ್ನಾಡ್ ಪರ 5 ಹಾಗೂ 50ನೇ ನಿಮಿಷಗಳಲ್ಲಿ ಮೇಕೇರಿರ ನಿತಿನ್ ತಿಮ್ಮಯ್ಯ ಜೋಡಿ ಗೋಲು ಹೊಡೆದರು.

ಹೆಚ್ಚು ಗೋಲು: ಟೂರ್ನಿಯಲ್ಲಿ ಬೊಟ್ಯತ್ನಾಡ್ ಆಟಗಾರ ನಿತಿನ್ ತಿಮ್ಮಯ್ಯ 6, ಬೇಗೂರ್ ಆಟಗಾರ ಪೂಣಚ್ಚ 5 ಗೋಲು ಹೊಡೆದ ಸಾಧನೆ ಮಾಡಿದರು. ಪೊನ್ನಂಪೇಟೆ ಸ್ಫೋಟ್ರ್ಸ್ ಹಾಸ್ಟೆಲ್ ಆಟಗಾರ ಫಾಹದ್ ಹ್ಯಾಟ್ರಿಕ್ ಸೇರಿ 3 ಗೋಲು ಹೊಡೆದು ದ್ವಿತೀಯ ಸ್ಥಾನ ಪಡೆದುಕೊಂಡರು.

ಬೆಸ್ಟ್: ಸರಣಿಯಲ್ಲಿ 5 ಗೋಲು ಭಾರಿಸಿದ ಬೇಗೂರ್ ತಂಡದ ಆಟಗಾರ ಮುಕ್ಕಾಟೀರ ಪೂಣಚ್ಚ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಬೊಟ್ಯತ್ನಾಡ್ ತಂಡದ ಕರಿನೆರವಂಡ ದರ್ಶನ್ ದೇವಯ್ಯ ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಡ್ರಿಬ್ಲ್ ಹೆಂಪ್ ತಂಡದ ಪೃಥ್ವಿ, ಬೆಸ್ಟ್ ಮಿಡ್‍ಫೀಲ್ಡರ್ ಆಟಗಾರನಾಗಿ ಪೊನ್ನಂಪೇಟೆ ಸ್ಫೋಟ್ಸ್ ಹಾಸ್ಟೆಲ್ ತಂಡದ ಬಿಪಿನ್, ಫಾರ್ವರ್ಡ್ ಪ್ರಶಸ್ತಿಯನ್ನು ವಿರಾಜಪೇಟೆ ಕೊಡವ ಸಮಾಜ ತಂಡದ ಲಿಖಿತ್ ಪಡೆದುಕೊಂಡರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಒಲಿಂಪಿಯನ್ ಬಾಳೆಯಡ ಕೆ.ಸುಬ್ರಮಣಿ, ಅಂತಾರಾಷ್ಟ್ರೀಯ ಹಾಕಿ ಆಟಗಾರ (ನಿ) ಬುಟ್ಟಿಯಂಡ ಚೆಂಗಪ್ಪ, ಮಹಿಳಾ ಕೋಚ್ ಹೊನ್ನಂಪಾಡಿ ಅಂಕಿತ್ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ತಾಂತ್ರಿಕ ವರ್ಗದಲ್ಲಿ ಕೊಕ್ಕಂಡ ರೋಶನ್, ಚಂದಪಂಡ ಆಕಾಶ್, ಕರವಂಡ ಅಪ್ಪಣ್ಣ, ಕುಪ್ಪಂಡ ದಿಲನ್, ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡೀರ ಕಾರ್ಯಪ್ಪ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ನಿರೂಪಿಸಿದರು. ಹಿರಿಯರಾದ ತೀತಮಾಡ ಎಂ.ಕುಶಾಲಪ್ಪ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ, ದಾನಿಯಾದ ಗುಮ್ಮಟ್ಟೀರ ದರ್ಶನ್, ಗುಮ್ಮಟ್ಟೀರ ಕಿಲನ್ ಗಣಪತಿ, ಬೆಳೆಗಾರರಾದ ತಾತೀರ ಬೋಪಯ್ಯ, ಕಡೇಮಾಡ ಕನಸು ದೇವಯ್ಯ, ತೀತಮಾಡ ಸುಗುಣ, ಮದ್ರೀರ ಸೋಮಯ್ಯ, ಬೊಟ್ಯತ್ನಾಡ್ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಪಟ್ರಂಗಡ ಶ್ರೀಮಂತ್ ಬಹುಮಾನ ವಿತರಿಸಿದರು.

ಮುಂದಿನ ಟೂರ್ನಿ: ಜ. 10ರಿಂದ 19ರವರೆಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಮಹಿಳಾ ಹಾಕಿ ಟೂರ್ನಿ ಆರಂಭವಾಗಲಿದ್ದು, 8 ತಂಡಗಳು ಪಾಲ್ಗೊಳ್ಳಲಿವೆ.

Translate »