`ಜನತಾ ಕಫ್ರ್ಯೂ’ಗೆ ಹೋಟೆಲ್ ಉದ್ಯಮ ಪೂರ್ಣ ಬೆಂಬಲ
ಮೈಸೂರು

`ಜನತಾ ಕಫ್ರ್ಯೂ’ಗೆ ಹೋಟೆಲ್ ಉದ್ಯಮ ಪೂರ್ಣ ಬೆಂಬಲ

March 21, 2020

ಭಾನುವಾರ ಮೈಸೂರಿನ ಎಲ್ಲಾ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಬಂದ್
ಗ್ರಾಹಕರ ಆರೋಗ್ಯ ರಕ್ಷಣೆಯೇ ನಮಗೆ ಮುಖ್ಯ ಎಂದ ಆತಿಥ್ಯ ಕ್ಷೇತ್ರ
ಮೈಸೂರು, ಮಾ.20(ಎಂಟಿವೈ)- ಕೊರೊನಾ ಹರಡದಂತೆ ಎಚ್ಚರ ವಹಿ ಸುವ ನಿಟ್ಟಿನಲ್ಲಿ ಮಾ.22ರ ಭಾನುವಾರ ದೇಶಾದ್ಯಂತ `ಜನತಾ ಕಫ್ರ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ನೀಡಿದ ಕರೆಗೆ `ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ’ ಪೂರ್ಣ ಬೆಂಬಲ ನೀಡಿದೆ. ಭಾನುವಾರ ಎಲ್ಲಾ ಬಗೆಯ ಹೋಟೆಲ್, ವಸತಿ ಗೃಹಗಳನ್ನು ಬಂದ್ ಮಾಡಲು ನಿರ್ಧರಿಸಿದೆ.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದಲ್ಲಿ ಶುಕ್ರವಾರ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಜನತಾ ಕಫ್ರ್ಯೂ ಬೆಂಬಲಿಸಲು ನಗರದಲ್ಲಿ ಮಾ.22ರ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೂ ಹೋಟೆಲ್, ಫಾಸ್ಟ್‍ಫುಡ್, ಬೇಕರಿ, ಸ್ವೀಟ್ಸ್, ಚಾಟ್ಸ್, ಜ್ಯೂಸ್, ಕಾಂಡಿಮೆಂಟ್ಸ್, ಕಾಫಿ ಡೇ, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಬಗೆಯ ತಿನಿಸು ದೊರೆಯುವ ಮಳಿಗೆಗಳು ಬಂದ್ ಮಾಡಲು ಸರ್ವ ಸಮ್ಮತಿ ನೀಡಲಾಯಿತು.

ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೊರೊನಾ ವೈರಸ್ ದಿನದಿಂದ ದಿನಕ್ಕೆ ವಿಶ್ವದ ಅನೇಕ ರಾಷ್ಟ್ರಗಳನ್ನು ನಲುಗಿಸುತ್ತಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾ.22ರಂದು ಜನತಾ ಕಫ್ರ್ಯೂ ನಡೆಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದು ಶ್ಲಾಘನೀಯ. ಇದಕ್ಕೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಪೂರ್ಣ ಬೆಂಬಲ ನೀಡಲಿದೆ ಎಂದರು. ಹೋಟೆಲ್ ಉದ್ಯಮಕ್ಕೆ ನಷ್ಟವಾಗುತ್ತಿದ್ದರೂ ಗ್ರಾಹಕರ ಹಿತವೇ ನಮಗೆ ಮುಖ್ಯ. ಹಾಗಾಗಿ ಸ್ವಪ್ರೇರಣೆಯಿಂದಲೇ ಬಂದ್ ಮಾಡಿ ಜನತಾ ಕಫ್ರ್ಯೂಗೆ ಬೆಂಬಲ ನೀಡ ಲಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

Translate »