ಮೈಸೂರು ಹೃದಯ ಭಾಗದಲ್ಲಿ ಹೋಟೆಲ್ ಸಹ ಬಂದ್: ಬಹುತೇಕ ಬಡಾವಣೆಗಳಲ್ಲಿ ತೆರೆದಿದ್ದ ಹೋಟೆಲ್‍ಗಳು
ಮೈಸೂರು

ಮೈಸೂರು ಹೃದಯ ಭಾಗದಲ್ಲಿ ಹೋಟೆಲ್ ಸಹ ಬಂದ್: ಬಹುತೇಕ ಬಡಾವಣೆಗಳಲ್ಲಿ ತೆರೆದಿದ್ದ ಹೋಟೆಲ್‍ಗಳು

September 11, 2018

ಮೈಸೂರು: ಭಾರತ್ ಬಂದ್‍ಗೆ ಕೇವಲ ನೈತಿಕ ಬೆಂಬಲ ಮಾತ್ರ ನೀಡುವುದಾಗಿ ಹೊಟೇಲ್ ಮಾಲೀಕರ ಸಂಘ ಹೇಳಿಕೆ ನೀಡಿತ್ತಾದರೂ ಇಂದು ಮೈಸೂರಿನ ಹೃದಯ ಭಾಗದಲ್ಲಿ ಬಹುತೇಕ ಹೊಟೇಲ್‍ಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದರೆ, ತೆರೆಯಲಾಗಿದ್ದ ಹೊಟೇಲ್‍ಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು. ಬಂದ್ ಹಿನ್ನೆಲೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಿದ್ದ ಹೊಟೇಲ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾರತ್ ಬಂದ್‍ಗೆ ಕೇವಲ ನೈತಿಕ ಬೆಂಬಲ ನೀಡಿ, ಹೊಟೇಲ್‍ಗಳನ್ನು ತೆರೆಯಲು ನಿರ್ಧರಿಸಿದ್ದರು. ಈ ಸಂಬಂಧ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆ ನೀಡಿ, ಹೊಟೇಲ್‍ಗಳು ತೆರೆದಿರುತ್ತವೆ ಎಂದು ತಿಳಿಸಿದ್ದರು. ಆದರೆ ಇಂದು ಬೆಳಿಗ್ಗೆ ಕೆಲವು ಹೊಟೇಲ್ ಮಾಲೀಕರು ಬೆಳಗಿನಿಂದಲೇ ಹೊಟೇಲ್ ಗಳನ್ನು ತೆರೆಯಲು ಹಿಂದೇಟು ಹಾಕಿದರು. ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಸೇರಿದಂತೆ ಕೆಲ ರಾಜಕೀಯ ಪಕ್ಷಗಳೊಂದಿಗೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದರಿಂದ ಹೊಟೇಲ್ ಮಾಲೀಕರು ಯಾರ ಕೆಂಗಣ್ಣಿಗೂ ಒಳಗಾಗಬಾರದೆಂದು ಹೊಟೇಲ್ ಮುಚ್ಚಿದ್ದರು. ಹಾಗಾಗಿ ಮೈಸೂರಿನ ಹೃದಯ ಭಾಗದಲ್ಲಿ ಯಾವೊಂದು ಹೊಟೇಲ್‍ಗಳು ತೆರೆಯದೆ ಇರುವುದರಿಂದ ಜನರು ಪರದಾಡುವಂತಾಯಿತು. ಆದರೆ ಕೆಲವೆಡೆ ಹೊಟೇಲ್‍ಗಳು ಬೆಳಿಗ್ಗೆ 11 ಗಂಟೆಯವರೆಗೂ ತೆರೆದಿದ್ದವು.

ಆದರೆ ಪ್ರತಿಭಟನಾಕಾರರು ಬಂದು ತೆರೆದಿದ್ದ ಹೊಟೇಲ್‍ಗಳನ್ನು ಮುಚ್ಚಿಸಿದರು. ಕೆಲವೆಡೆ ಬಲವಂತದಿಂದ ಮುಚ್ಚಿಸಲ್ಪಟ್ಟ ಹೊಟೇಲ್‍ಗಳು ಅರ್ಧದಷ್ಟು ಷಟರ್ ಎಳೆದು ವಹಿವಾಟು ನಡೆಸಿದವು. ಇದರಿಂದ ಹಸಿವಿನಿಂದ ಕಂಗೆಟ್ಟಿದ್ದ ಜನರು ತೆರೆದಿದ್ದ ಹೊಟೇಲ್‍ಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡು ಬಂತು. ಈ ನಡುವೆ ಕೆಲವೆಡೆ ರಸ್ತೆ ಬದಿ ಫಾಸ್ಟ್‍ಫುಡ್‍ಗಳು ಹಸಿದವರ ಹೊಟ್ಟೆ ತಣಿಸಿದವು. ಬಹುತೇಕ ಬಡಾವಣೆಗಳಲ್ಲಿ ಹೋಟೆಲ್‍ಗಳು ತೆರೆದಿದ್ದವು.

Translate »