ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ
ಮೈಸೂರು

ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ

December 18, 2019

ಮೈಸೂರು,ಡಿ.17(ಆರ್‍ಕೆ)-ಬಾಕ್ಸ್ ಡ್ರೈನ್ ನಿರ್ಮಿಸಲು ಜೆಸಿಬಿಯಿಂದ ಕಾಮಗಾರಿ ನಡೆಸುತ್ತಿದ್ದಾಗ ಹಳೇ ಹೆಂಚಿನ ಮನೆಯ ಗೋಡೆಯೊಂದು ಕುಸಿದ ಘಟನೆ ಮೈಸೂರಿನ ತಿಲಕ್‍ನಗರದಲ್ಲಿ ಕಳೆದ ಮಂಗಳವಾರ ಸಂಭವಿಸಿದೆ.

ತಿಲಕ್‍ನಗರದ 7ನೇ ಮೇನ್‍ನಲ್ಲಿರುವ ಜಿ. ಸಾವಿತ್ರಿ ಎಂಬುವರಿಗೆ ಸೇರಿದ 3360ನೇ ಸಂಖ್ಯೆಯ ಮನೆ ಹೊರಭಾಗದ ಗೋಡೆ ಡಿಸೆಂಬರ್ 10 ರಂದು ಮುಂಜಾನೆ 2.30 ಗಂಟೆ ವೇಳೆಗೆ ಕುಸಿದಿದೆ. ಮನೆಯಲ್ಲಿ ಸಾವಿತ್ರಿ, ಅವರ ತಂದೆ ಗೋವಿಂದ ಹಾಗೂ ತಾಯಿ ರೇಣುಕಾ ಅವರು ವಾಸವಾಗಿದ್ದರಾದರೂ, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮೈಸೂರು ಮಹಾನಗರ ಪಾಲಿಕೆಯಿಂದ ತಿಲಕ್‍ನಗರದ 7ನೇ ಮೇನ್ ರಸ್ತೆಯಲ್ಲಿ ಕಾಂಕ್ರೀಟ್ ಬಾಕ್ಸ್ ಡ್ರೈನ್ ನಿರ್ಮಿಸುವ ಕಾಮಗಾರಿ ನಡೆಯು ತ್ತಿತ್ತು. ಸಾವಿತ್ರಿ ಅವರ ಮನೆಗೆ ಹೊಂದಿಕೊಂಡಂತೆ ಡ್ರೈನ್‍ಗಾಗಿ ಹಾಲಿ ಇರುವ ಮಳೆ ನೀರಿನ ಚರಂಡಿ ಕಲ್ಲುಗಳನ್ನು ತೆಗೆಯುವ ಕಾರ್ಯವನ್ನು ಜೆಸಿಬಿ ಮೂಲಕ ಆರಂಭಿಸಲಾಗಿತ್ತು.

ಅಂದು ರಾತ್ರಿ ಚರಂಡಿ ನೀರಿನಿಂದ ನೆಂದಿದ್ದ ಮನೆಯ ಮಣ್ಣಿನ ಗೋಡೆ ಮರು ದಿನ ಮುಂಜಾನೆ ಕುಸಿಯಿತು ಎಂದು ಸಾವಿತ್ರಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿ ದ್ದಂತೆಯೇ ಪಾಲಿಕೆ ವಲಯ ಕಚೇರಿ 6ರ ಅಭಿವೃದ್ಧಿ ಅಧಿಕಾರಿ ಹೆಚ್. ನಾಗರಾಜು, ಕಾಮಗಾರಿಯ ಗುತ್ತಿಗೆದಾರ ಜಗದೀಶ್, ಸ್ಥಳಕ್ಕೆ ಧಾವಿಸಿ ಕುಸಿದಿರುವ ಮನೆಯ ಗೋಡೆಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಾವಿತ್ರಿ ತಿಳಿಸಿದ್ದಾರೆ.

ಹಳೆಯ ಮಣ್ಣಿನ ಮನೆಯಾದ್ದರಿಂದ ಮೊದಲೇ ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಿದ್ದರೆ ಗೋಡೆ ಕುಸಿಯುವುದನ್ನು ತಪ್ಪಿಸಬಹುದಿತ್ತು. ಈಗ ನಾವು ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೆಲಸ ಮಾಡುವಾಗ ಕುಸಿದಿರುವ ಮನೆಯ ಗೋಡೆ ನಿರ್ಮಿಸಿಕೊಡುತ್ತೇವೆ ಎಂದು ತಿಳಿಸಿದರು.

Translate »