ಜು. 6, 7 ರಂದು ಮೂಡಬಿದಿರೆ ಆಳ್ವಾಸ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಮೈಸೂರು

ಜು. 6, 7 ರಂದು ಮೂಡಬಿದಿರೆ ಆಳ್ವಾಸ್ ವತಿಯಿಂದ ಬೃಹತ್ ಉದ್ಯೋಗ ಮೇಳ

June 23, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 10ನೇ ಬೃಹತ್ ಉದ್ಯೋಗ ಮೇಳ `ಆಳ್ವಾಸ್ ಪ್ರಗತಿ’ಯನ್ನು ಜು.6 ಮತ್ತು 7ರಂದು ಆಯೋಜಿಸಲಾಗಿದೆ ಎಂದು ಮೇಳದ ಮಾಧ್ಯಮ ಸಂಯೋಜಕಿ ಡಾ.ಮೌಲ್ಯ ಜೀವನ್‍ರಾಂ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಸತತ 9 ವರ್ಷಗಳಿಂದಲೂ `ಆಳ್ವಾಸ್ ಪ್ರಗತಿ’ ಶೀರ್ಷಿಕೆಯಡಿ ಉದ್ಯೋಗ ಮೇಳ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಉದ್ಯೋಗ ಮೇಳ ದಶಕದ ಸಂಭ್ರಮದೊಂದಿಗೆ ಈ ಎರಡು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಹೇಳಿದರು.

ದೇಶದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳನ್ನು ಗಮದಲ್ಲಿಟ್ಟುಕೊಂಡು ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವನ್ನು ಮೇಳ ಹೊಂದಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ ವ್ಯಾಸಂಗ ಮಾಡಿದವರು ಹಾಗೂ ಸ್ನಾತಕೋತ್ತರ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದರು.

ಈಗಾಗಲೇ ಮೇಳದಲ್ಲಿ ಭಾಗವಹಿಸಲು 100ಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಜೂ.30ರವರೆಗೂ ಕಂಪನಿಗಳು ನೋಂದಣಿ ಮಾಡಿಕೊಳ್ಳಲು ಕಾಲಾವಕಾಶವಿದೆ. ವಿವಿಧ ವಲಯಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ 250ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಐಟಿ, ಐಟಿಎಸ್, ಉತ್ಪಾದನೆ, ಆರೋಗ್ಯ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಬ್ಯಾಂಕಿಂಗ್, ಹಣಕಾಸು, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಪ್ರತಿಷ್ಠ ಕಂಪನಿಗಳು ಆಗಮಿಸಲಿವೆ ಎಂದು ವಿವರಿಸಿದರು.

ಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಜು.6ರವರೆಗೆ ಆನ್‍ಲೈನ್‍ನಲ್ಲಿ ಉಚಿತವಾಗಿ (www.alvaspragati.com) ನೋಂದಣಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ವಸತಿ ಮತ್ತು ಆಹಾರವನ್ನು ಉಚಿತವಾಗಿ ಕಲ್ಪಿಸಲಾಗುವುದು. ಆನ್‍ಲೈನ್ ನೋಂದಣಿ ಯಿಂದ ನಮ್ಮ ಬಳಿ ಅಭ್ಯರ್ಥಿಗಳ ವಿವರಗಳು ಶೇಖರಣೆಯಾಗಲಿದ್ದು, ಇದರಿಂದ ಮೇಳ ಹೊರತಾಗಿಯೂ ಇನ್ನಿತರ ಸಂದರ್ಭದಲ್ಲೂ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನದಲ್ಲಿ ಪ್ರತಿಷ್ಠಾನ ಇರುತ್ತದೆ. ಆನ್‍ಲೈನ್‍ನಲ್ಲಿ ಅಪ್‍ಲೋಡ್ ಆಗಿರುವ ಅಭ್ಯರ್ಥಿಗಳ ಮಾಹಿತಿಯನ್ನು ಅಗತ್ಯವಿರುವ ಕಂಪನಿಗಳಿಗೆ ಪೂರೈಸುವ ಪ್ರಕ್ರಿಯೆ ವರ್ಷಪೂರ್ತಿ ಚಾಲನೆಯಲ್ಲಿ ಇರುತ್ತದೆ ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿಚ್ಛಿಸುವ ಆಕಾಂಕ್ಷಿಗಳು ಸೂಕ್ತ ದಾಖಲೆಗಳನ್ನು ಜೊತೆಯಲ್ಲಿ ತಪ್ಪದೇ ತರಬೇಕು. 1ರಿಂದ 10 ಪಾಸ್‍ಪೋರ್ಟ್ ಭಾವಚಿತ್ರದ ಫೋಟೋ, ಇತ್ತೀಚಿನ ಸ್ವವಿವರ, ದೃಢೀಕರಿಸಲ್ಪಟ್ಟ ಅಂಕ ಪಟ್ಟಿಗಳನ್ನು ನಕಲು ಪ್ರತಿಗಳೊಂದಿಗೆ ತರಬೇಕು. ಹೆಚ್ಚಿನ ವಿವರಗಳಿಗೆ ಮೊ.ಸಂ. 9611686148, 9663190590 ಅನ್ನು ಸಂಪರ್ಕಿಸಬಹುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದೇವಿಶ್ರೀ ಶೆಟ್ಟಿ ಗೋಷ್ಠಿಯಲ್ಲಿದ್ದರು.

Translate »