ಮೈಸೂರು: ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಎರಡು ವರ್ಷದ ಮಗು ಗಾಯಗೊಂಡಿರುವ ಘಟನೆ ಮೈಸೂರು ತಾಲೂಕು ವರುಣಾ ಗ್ರಾಮದ ಬಳಿ ಗುರುವಾರ ಸಂಜೆ ಸಂಭವಿಸಿದೆ.
ಮೈಸೂರು ತಾಲೂಕು ದಂಡಿಕೆರೆ ಗ್ರಾಮದ ನಿವಾಸಿ ಚಿಕ್ಕಮಾದಯ್ಯ ಅವರ ಮಗ ಚಿಕ್ಕಣ್ಣ(30) ಸಾವನ್ನಪ್ಪಿದವರು ಘಟನೆಯಿಂದ ಅವರ ಪುತ್ರ, ಎರಡು ವರ್ಷದ ಮಹದೇವ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಹಬ್ಬಕ್ಕೆಂದು ಅತ್ತೆಮನೆ ಭುಗತಗಳ್ಳಿಗೆ ಹೋಗಿದ್ದ ಚಿಕ್ಕಣ್ಣ ಗುರುವಾರ ಪುತ್ರ ಮಹದೇವನೊಂದಿಗೆ ಖಾಸಗಿ ಬಸ್ಸಿನಲ್ಲಿ ಭುಗತಗಳ್ಳಿಗೆ ಹೊರಟ್ಟಿದ್ದರು. ಸೀಟು ಸಿಗದ ಕಾರಣ ಮಗು ಎತ್ತಿಕೊಂಡು ನಿಂತಿದ್ದ ಅವರು, ವರುಣಾ ಗ್ರಾಮದ ಸಮೀಪದ ತಿರುವೊಂದರಲ್ಲಿ ಆಯತಪ್ಪಿ ಬಾಗಿಲು ಇಲ್ಲದ ಕಾರಣ ಮಗು ಸಮೇತ ಸಂಜೆ ಸುಮಾರು 4.30 ಗಂಟೆ ವೇಳೆಗೆ ಕೆಳಕ್ಕೆ ಬಿದ್ದರು.
ನೆಲಕ್ಕುರುಳಿದ ರಭಸಕ್ಕೆ ತಲೆಗೆ ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾದ ಚಿಕ್ಕಣ್ಣ ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ವರುಣಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ರೊಚ್ಚಿಗೆದ್ದ ವರುಣಾ ಗ್ರಾಮಸ್ಥರು ಖಾಸಗಿ ಬಸ್ಸುಗಳ ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆ ವಿರುದ್ಧ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಬಸ್ಸುಗಳಲ್ಲಿನ ಡೋರ್‍ಗಳನ್ನು ತೆಗೆದು ಓಡಿಸುತ್ತಿದ್ದರೂ ಪೊಲೀಸರಾಗಲೀ, ಆರ್‍ಟಿಓ ಅಧಿಕಾರಿಗಳಾಗಲೀ ಕ್ರಮ ವಹಿಸಿದ ಕಾರಣ ಪ್ರಯಾಣ ಕರಿಗೆ ರಕ್ಷಣೆಯೇ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ವಿಷಯ ತಿಳಿದ ವರುಣಾ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ, ಬಸ್ಸನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು.
ಚಿಕ್ಕಣ್ಣನ ಸಾವಿಗೆ ಬಸ್ಸಿನಲ್ಲಿ ಡೋರ್ ಇಲ್ಲದಿರುವುದೇ ಪ್ರಮುಖ ಕಾರಣವಾಗಿರುವುದರಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು. ಪ್ರಯಾಣಿಕರಿಗೆ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.