ಮೈಸೂರು, ಜೂ. 24(ಆರ್‍ಕೆ)- ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸ ಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಇಂದು ಮೈಸೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು ನೇತೃತ್ವ ದಲ್ಲಿ ಗನ್‍ಹೌಸ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ಸರ್ಕಲ್, ಜೆಎಲ್‍ಬಿ ರಸ್ತೆ, ಮೆಟ್ರೋಪೋಲ್ ಸರ್ಕಲ್ ಮೂಲಕ ಮೆರವಣಿಗೆ ನಡೆಸಿದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಭಾರೀ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಘೋಷಣಾ ಪತ್ರ ಪ್ರದರ್ಶಿಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ಸಾಲ ಮನ್ನಾ ಗೊಂದಲ ಪರಿಹಾರಕ್ಕೆ ಶ್ವೇತಪತ್ರ ಹೊರಡಿ ಸಬೇಕು, ಕೆಆರ್‍ಎಸ್, ಕಬಿನಿ ಜಲಾಶಯ ಗಳಿಂದ ಮಂಡ್ಯ ಜಿಲ್ಲೆಯ ಕಬ್ಬಿನ ಬೆಳೆಗೆ ನೀರು ಹರಿಸಬೇಕು, ಬರ ಪರಿಹಾರ, ಸ್ಥಗಿತ ಗೊಂಡಿರುವ ಸಕ್ಕರೆ ಕಾರ್ಖಾನೆಗಳ ಕಾರ್ಯಾ ರಂಭಗೊಳಿಸಬೇಕೆಂದೂ ಒತ್ತಾಯಿಸಿ ದರು. ಕೆಂಚಲಗೂಡು ಸರ್ವೆ ನಂಬರ್ 14ರ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸ ಬೇಕು, ಬಾಕಿ ಇರುವ ದರಖಾಸ್ತು ಭೂಮಿ ಯನ್ನು ದುರಸ್ತಿ ಮಾಡಬೇಕು, ಕೃಷಿ ಪಂಪ್‍ಸೆಟ್‍ಗಳಿಗೆ ಕನಿಷ್ಠ 10 ತಾಸು ವಿದ್ಯುತ್ ಪೂರೈಸಬೇಕು ಎಂಬುದೂ ಸೇರಿ ದಂತೆ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾ ನಿರತ ರೈತರು ಇದೇ ವೇಳೆ ಆಗ್ರಹಿಸಿದರು.