ಹುಣಸೂರು ಆಸ್ಪತ್ರೆ ಅವ್ಯವಸ್ಥೆಗಳ ಮಹಾಕೂಪ: ಜಿಪಂ ಪ್ರಭಾರ ಅಧ್ಯಕ್ಷ ಕೋಪ
ಮೈಸೂರು

ಹುಣಸೂರು ಆಸ್ಪತ್ರೆ ಅವ್ಯವಸ್ಥೆಗಳ ಮಹಾಕೂಪ: ಜಿಪಂ ಪ್ರಭಾರ ಅಧ್ಯಕ್ಷ ಕೋಪ

January 13, 2019

ಅಧಿಕಾರ ಸ್ವೀಕರಿಸಿದ ಬಳಿಕ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ, ಹಾಸ್ಟೆಲ್ ಪರಿಶೀಲನೆ

ಹುಣಸೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಹಾಸ್ಟೆಲ್‍ಗಳಿಗೆ ದಿಢೀರ್ ಭೇಟಿ ನೀಡಿದ ಜಿಪಂ ಪ್ರಭಾರ ಅಧ್ಯಕ್ಷ ಸಾ.ರಾ.ನಂದೀಶ್ ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ರಾತ್ರಿ ಸಾ.ರಾ.ನಂದೀಶ್, ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ದರ್ಶನ ಮಾಡಿಸಿದರು. ಬಳಿಕ ಗಿರಿಜನ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್‍ನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಿಲಯದ ಸಮಸ್ಯೆಗಳ ಸುರಿಮಳೆಗೈದರು.

ವಾರ್ಡ್‍ಗಳು ಮತ್ತು ಹೆಂಗಸರ ಶೌಚಗೃಹಗಳಿಗೆ ಬಾಗಿಲುಗಳೇ ಇರಲಿಲ್ಲ. ಎಲ್ಲಾ ವಾರ್ಡ್‍ಗಳ ಕಿಟಕಿಗಳಲ್ಲಿ ಹರಿದು ಚಿಂದಿಯಾದ ಸೊಳ್ಳೆಪರದೆಗಳು ನೇತಾಡುತ್ತಿದ್ದವು. ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಗೃಹಿಣಿ ರೇವತಿ ಎಂಬುವರು, ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಇಡೀ ಆಸ್ಪತ್ರೆಯಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ. ರಾತ್ರಿಯಾದರೆ ಸೊಳ್ಳೆಗಳ ಕಾಟದಿಂದ ರೋಗಿಗಳು ನರಳುವಂತಾಗಿದೆ. ವಾರ್ಡ್‍ಗಳಲ್ಲಿನ ಫ್ಯಾನ್‍ಗಳು ತಿರುಗುವುದೇ ಇಲ್ಲ ಎಂದು ದೂರಿದರು.

ಆಡಳಿತಾಧಿಕಾರಿ ಡಾ. ಕೃಷ್ಣ ಅವರಿಗೆ ಕರೆ ಮಾಡಿದ ಸಾ.ರಾ.ನಂದೀಶ್, ನಿಮ್ಮ ಆಸ್ಪತ್ರೆಯಲ್ಲಿ ಕಿಟಕಿಗಳಿಗೆ ಸೊಳ್ಳೆ ಪರದೆ ಹಾಕಿಸುವಷ್ಟು ಕೂಡ ಶಕ್ತಿಯಿಲ್ಲವೇ? ಹಾಸಿಗೆಗಳು ಹೇಗಿವೆ ಎಂದು ನೋಡಿದ್ದೀರಾ? ವಾರ್ಡ್‍ಗಳಿಗೆ ದಿನ ಭೇಟಿ ನೀಡುತ್ತೀರಾ? ಎಂದು ಪ್ರಶ್ನಿಸಿದರು.

ತಾಲೂಕಿಗೆ ನೂತನವಾಗಿ ಆಸ್ಪತ್ರೆ ಕಟ್ಟಡ ಮಂಜೂರಾಗಿದ್ದು, 10 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಹಾಗಾಗಿ ಸದ್ಯಕ್ಕೆ ಏನೂ ಮಾಡಿಸಬೇಡಿ ಎಂದು ಶಾಸಕರ ಸೂಚನೆ ಇದೆ ಎಂದು ಆಡಳಿತಾಧಿಕಾರಿ ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಪ್ರಭಾರ ಅಧ್ಯಕ್ಷರು, ಸೊಳ್ಳೆಪರದೆಯನ್ನು ಹಾಕಿಸಬೇಡಿ ಎಂದು ಶಾಸಕರು ಹೇಳಿದ್ದಾರೇನ್ರಿ? ವಿನಾಕಾರಣ ಶಾಸಕರನ್ನು ಎಳೆದು ತಂದು ಅವರ ಮೇಲೆ ಆರೋಪ ಹೊರಿಸುತ್ತೀರಾ? ಇನ್ನೊಂದು ವಾರದೊಳಗೆ ಎಲ್ಲಾ ಕಿಟಕಿಗಳಿಗೂ ಸೊಳ್ಳೆ ಪರದೆ ಹಾಕಿಸಿ. ನಾನು ಪುನಃ ಬಂದು ನೋಡುತ್ತೇನೆ ಎಂದು ಎಚ್ಚರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷರು, ಉಪ ವಿಭಾಗ ಕೇಂದ್ರವಾಗಿರುವ ಈ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸ್ಟಾಫ್ ನರ್ಸ್‍ಗಳ ಕೊರತೆ ಇದೆ. ಅಲ್ಲದೆ ಆಡಳಿತಾಧಿಕಾರಿಯ ಬೇಜವಾಬ್ದಾರಿ ವರ್ತನೆ ಕಾಣುತ್ತಿದೆ. ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಆರೋಗ್ಯ ರಕ್ಷಾ ಸಮಿತಿಯವರು ಮೂಲ ಸೌಕರ್ಯಗಳ ಬೇಡಿಕೆ ಕುರಿತು ಜಿಪಂಗೆ ಮನವಿ ಸಲ್ಲಿಸಿದಲ್ಲಿ ಅವಶ್ಯವಿರುವ ಸೌಲಭ್ಯ ಒದಗಿಸಲು ಸಿದ್ಧ ಎಂದರು.

ಕರ್ತವ್ಯದಲ್ಲಿದ್ದ ವೈದ್ಯ ಡಾ. ಸಚ್ಚಿದಾನಂದಮೂರ್ತಿ, ದಲಿತ ಮುಖಂಡರಾದ ಶಿವಣ್ಣ, ಡಿ.ಕುಮಾರ್ ಸೇರಿದಂತೆ ಅನೇಕರು ಆಸ್ಪತ್ರೆಯಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಹಾಸ್ಟೆಲ್‍ನಲ್ಲಿ ಸಮಸ್ಯೆಗಳ ಸರಮಾಲೆ
ಜಿಪಂ ಪ್ರಭಾರಿ ಅಧ್ಯಕ್ಷರು ಗಿರಿಜನ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್‍ಗೆ ಭೇಟಿ ನೀಡಿದಾಗಲೂ ಅವ್ಯವಸ್ಥೆಯ ಸರಮಾಲೆಯೇ ಕಂಡುಬಂದಿತು. ವಿದ್ಯಾರ್ಥಿಗಳು ದೂರಿನ ಸರಮಳೆಗೈದರು.

ಈ ನಿಲಯದಲ್ಲಿ ಮೆನು ಪ್ರಕಾರ ಊಟ-ತಿಂಡಿ ನೀಡ್ತಿಲ್ಲ, ಗುಣಮಟ್ಟ ಇಲ್ಲ, 82 ಮಕ್ಕಳಿಗೆ ಒಂದೇ ಲೀ. ಹಾಲು ತರುತ್ತಾರೆ, ಮಜ್ಜಿಗೆಗಿಂತ ನೀರೇ ವಾಸಿ, ಫ್ಯಾನ್ ಹಾಕಲು ಬಿಡಲ್ಲ, ಈ ಚಳೀಲಿ ಸ್ನಾನ ಮಾಡೋಕೂ ಸಾಕಷ್ಟು ಬಿಸಿ ನೀರು ಸಿಕ್ಕಲ್ಲ, ಸೋಲಾರ್-ಗೀಸರ್‍ಗೆ ಬೀಗ ಹಾಕ್ತಾರೆ, ವಾರಕ್ಕೊಂದಿನಾನೂ ಸ್ನಾನ ಮಾಡದಂತಾಗಿದೆ. ಚಪ್ಪಲಿ ಧರಿಸಿ ಓಡಾಡುವಂತಿಲ್ಲ. ಪ್ರಶ್ನಿಸಿದರೆ. ವಾರ್ಡನ್ ಗೀತಾ ಮನಬಂದಂತೆ ಬೈತಾರೆ, ಚಪ್ಪಲೀಲಿ ಹೊಡಿತೀನಿ ಅಂತಾರೆ ಎಂದು ಅಳಲು ತೋಡಿಕೊಂಡರು.

ಹೆಡ್ ಕುಕ್ ರಾಧಾ ಅವರಂತೂ ಬಾಯಿಗ್ ಬಂದಂತೆ ಬೈಯುತ್ತಾರೆ. ನಾವು ಜೈಲಿನಲ್ಲಿ ಇದ್ದಂಗಾಗಿದೆ. ಅವರೊಬ್ಬ ಮಹಿಳೆಯಾಗಿ ಹೀಗೆಲ್ಲಾ ಬೈಯ್ಯಬಹುದೇ? ಸರ್, ನೀವಾದ್ರು ಇದನ್ನು ಸರಿ ಮಾಡಿ, ನಮಗಾಗ್ತಿರೋ ಕಾಟ ತಪ್ಸಿ ಪುಣ್ಯ ಕಟ್ಕೊಳಿ ಸರ್ ಎಂದು ವಿದ್ಯಾರ್ಥಿಗಳು ಪ್ರಭಾರ ಅಧ್ಯಕ್ಷ ನಂದೀಶ್ ಅವರ ಬಳಿ ಹಾಸ್ಟೆಲ್‍ನಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ನಂತರ ವಾರ್ಡನ್ ತರಾಟೆ ತೆಗೆದುಕೊಂಡ ಅಧ್ಯಕ್ಷರು, ಒಳ್ಳೆ ಊಟ-ತಿಂಡಿ ಏಕೆ ಕೊಡುತ್ತಿಲ್ಲ? ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕೋದೇಕೆ ಎಂದು ಕಿಡಿಕಾರಿದರು.
ಕೊಠಡಿಯಲ್ಲಿ 40 ಮೂಟೆ ಅಕ್ಕಿ ಕಂಡು ಅವಾಕ್ಕಾದ ಅಧ್ಯಕ್ಷರು, ತಾಲೂಕು ಬಿ.ಸಿ.ಎಂ. ಅಧಿಕಾರಿ ಪುಟ್ಟಲಿಂಗೇಗೌಡ ಅವರನ್ನು ಸಂಪರ್ಕಿಸಿ, ಅಕ್ಕಿಯೆಲ್ಲಿ ಹುಳು ಆಗ್ತಿದಿಯಲ್ಲ, ಇದಕ್ಕೆಲ್ಲ ಯಾರು ಹೊಣೆ? ಎಲ್ಲವನ್ನು ಸರಿಪಡಿಸಿ ವರದಿ ನೀಡಿ ಎಂದು ತಾಕೀತು ಮಾಡಿದರು.

ಅಧ್ಯಕ್ಷರು ಮೆಟ್ರಿಕ್ ನಂತರದ ಗಿರಿಜನ ವಿದ್ಯಾರ್ಥಿ ನಿಲಯ ಪ್ರವೇಶಿಸುತ್ತಿದ್ದಂತೆ ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಕಬ್ಬಿಣದ ರಾಡ್‍ಗಳು ಹೊರ ಚಾಚಿರುವ ಕೊಠಡಿಗಳು, ಕತ್ತಲೆಯ ಹಾದಿ ಕಂಡು ದಿಗ್ಭ್ರಮೆಗೊಳಗಾದರು. ಬಯೋಮೆಟ್ರಿಕ್‍ನಲ್ಲಿ 20 ಮಕ್ಕಳು ಹಾಜರಾತಿ ದಾಖಲಾಗಿದ್ದರೆ, ಕೇವಲ 12 ವಿದ್ಯಾರ್ಥಿಗಳು ಇದ್ದರು.

ಫೆÇ್ಲೀರೈಡ್ ಯುಕ್ತ ನೀರನ್ನೇ ಕುಡಿಯುತ್ತಿದ್ದೇವೆ, ಮೆನು ರೀತ್ಯ ಆಹಾರ ನೀಡ್ತಿಲ್ಲ, ಪ್ರಶ್ನಿಸಿದರೆ ಬೆದರಿಕೆ ಹಾಕ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು. ದೂರವಾಣಿ ಮೂಲಕ ವಾರ್ಡನ್ ಮಂಜುನಾಥ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡ ಪ್ರಭಾರ ಅಧ್ಯಕ್ಷರು, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

Translate »