ಮೈಸೂರು: ಗುಡಿ-ಗೋಪುರ ಕಟ್ಟಿಸುವುದಕ್ಕಿಂತ ಬಡತನದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗೌರವಿಸು ವುದೇ ಉತ್ತಮ ಕಾರ್ಯ ಎಂದು ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಕದಂಬ ರಂಗ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಬಡ ಕುಟುಂಬದಲ್ಲಿ ಜನಿಸಿ ಸಾಧನೆಗೈದ ಪ್ರತಿಭೆಗಳನ್ನು ಗೌರವಿಸುವುದು ಸರ್ಕಾರ ಹಾಗೂ ಸಮಾಜದ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಪ್ರತಾಪ್ ಒಬ್ಬ ಯುವ ವಿಜ್ಞಾನಿಯಾಗಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ಬಡಕುಟುಂಬದಿಂದ ಬಂದು ವಿಜ್ಞಾನದಲ್ಲಿ ವಿಶೇಷವಾದ ಸಾಧನೆಗೆ ಮುಂದಾಗಿದ್ದು, ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಇಂತಹ ಪ್ರತಿಭೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.
ರಾಜಕೀಯ ನಾಯಕರು ಗುಡಿ-ಗೋಪುರ ಕಟ್ಟಿಸುವ ಬದಲು ಪ್ರತಿಭೆ ಗಳನ್ನು ಗುರುತಿಸಿ ಅವರ ಸಾಧನೆಗೆ ನೆರ ವಾಗಬೇಕು. ನಾನು ವಿದ್ಯಾರ್ಥಿ ದೆಸೆಯಲ್ಲಿ ದ್ದಾಗಲೇ ರಾಜಕಾರಣಿಗಳಿಗೆ ದೇವಸ್ಥಾನ ಕಟ್ಟಿಸುವುದನ್ನು ಬಿಟ್ಟು ಬಡಜನರ ಜೀವನ ರೂಪಿಸುವ ಕಾರ್ಯಕ್ರಮಗಳನ್ನು ಮಾಡು ವಂತೆ ಪ್ರತಿಭಟನೆಗಳನ್ನು ಮಾಡಿದೆ. ಅತೀ ಹೆಚ್ಚಿನ ಪದವಿ ಹೊಂದಿದ್ದರೂ ಡಾ.ಬಿ. ಆರ್.ಅಂಬೇಡ್ಕರ್ ಅವರಿಗೆ ಅರ್ಹ ಹುದ್ದೆ ಗಳು ಸಿಗಲಿಲ್ಲ. ಆದರೂ ಅಂಬೇಡ್ಕರ್ ಅವರು ಛಲ ಬಿಡಲಿಲ್ಲ. ಎ.ಪಿ.ಜೆ. ಅಬ್ದುಲ್ ಕಲಾಂ, ಕೆ.ಆರ್.ನಾರಾಯಣ್ ಅವರೆಲ್ಲಾ ಬಡಕುಟುಂಬದಿಂದ ಬಂದು ಸಾಧನೆ ಮಾಡಿ ಉನ್ನತ ಸ್ಥಾನ ಅಲಂಕರಿ ಸಿದವರು. ಹಾಗೆಯೇ ಪ್ರತಾಪ್ ಕೂಡ ಉತ್ತುಂಗ ಶಿಖರಕ್ಕೇರಿ ದೇಶಕ್ಕೆ ಕೀರ್ತಿ ತರಲಿ ಎಂದು ಆಶಿಸಿದರು.
ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಗುಣಮಟ್ಟ ಅಳೆಯುವ ಹಾಗೂ ಕ್ರಿಮಿಕೀಟಗಳ ಬಾಧೆಯ ಮುಂಗಡವಾಗಿ ಮಾಹಿತಿ ಒದಗಿಸುವ `ಡ್ರೋನ್’ ಅಭಿವೃದ್ಧಿಪಡಿಸುವ ತಯಾರಿಯಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಮೂಲಕ ದೇಶ ಸೇವೆ ಮಾಡುವ ಆಕಾಂಕ್ಷೆ ಹೊಂದಿ ದ್ದೇನೆ. ನನ್ನ ಸಂಶೋಧನೆಗೆ ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ. ಅಬ್ದುಲ್ ಕಲಾಂ ಪ್ರೇರಕಶಕ್ತಿಯಾದರು ಎಂದು ಹರ್ಷ ವ್ಯಕ್ತಪಡಿಸಿದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಗೆ ಸರಳ ರೀತಿಯ ಬೋಧನಾ ಕ್ರಮ ಇರಬೇಕು. ಅಲ್ಲದೆ, ದೇಶದ ಶಿಕ್ಷಣ ಪದ್ಧತಿ ಉನ್ನತೀ ಕರಣ ಆಗಬೇಕು. ಈ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಸರ್ಕಾರಗಳು ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯಪಟ್ಟರು.
ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜ ಶೇಖರ ಕದಂಬ, ಮೈಸೂರು ಉತ್ತರ ರೋಟರಿ ಅಧ್ಯಕ್ಷ ಎಂ.ಕೆ.ನಂಜಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್, ಮುಖಂಡರಾದ ಅಶೋಕ್ ಕುಮಾರ್, ನಾಗರಾಜು ಮತ್ತಿತ ರರು ಹಾಜರಿದ್ದರು.