ಹೈದರಾಬಾದ್ ಎನ್‍ಕೌಂಟರ್: ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುಪ್ರೀಂ ನಕಾರ
ಮೈಸೂರು

ಹೈದರಾಬಾದ್ ಎನ್‍ಕೌಂಟರ್: ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುಪ್ರೀಂ ನಕಾರ

February 29, 2020

ನವದೆಹಲಿ, ಫೆ.28- ತೆಲಂಗಾಣದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‍ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಮತ್ತು ಮೃತಪಟ್ಟವರಿಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಎನ್‍ಕೌಂಟರ್‍ನಲ್ಲಿ ಮೃತಪಟ್ಟವರ ಕುಟುಂಬಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಅರ್ಜಿ ಸಲ್ಲಿಸಿದ ಕುಟುಂಬಗಳು ಮೂವರು ಸದಸ್ಯರಿರುವ ವಿಚಾರಣಾ ಆಯೋಗವನ್ನು ಸಂಪರ್ಕಿಸಲು ತಿಳಿಸಿತು. ಆಯೋಗ ಎನ್‍ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿದ್ದು. ನಿಮ್ಮ ಬಳಿ ಇರುವ ದಾಖಲೆಯನ್ನು ಆಯೋಗಕ್ಕೆ ನೀಡಿ ಎಂದು ತಿಳಿಸಿತು. ಆಯೋಗ ವರದಿ ಸಲ್ಲಿಸಿದ ನಂತರ ಪರಿಹಾರದ ಬಗ್ಗೆ ಅರ್ಜಿ ಸಲ್ಲಿಸಿ. ಈ ಸ್ಥಿತಿಯಲ್ಲಿ ನಿಮ್ಮ ಅರ್ಜಿಯನ್ನು ಪರಿಗಣಿಸಲು ಬರುವಂತಿಲ್ಲ ಎಂದ ಪೀಠ, ಅರ್ಜಿ ಹಿಂಪಡೆಯಲು ಸೂಚಿಸಿತು. ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ನಾಲ್ಕು ಕುಟುಂಬಗಳ ಸದಸ್ಯರು 50 ಲಕ್ಷ ರೂಪಾಯಿ ಪರಿಹಾರ ನೀಡಲು ಮನವಿ ಮಾಡಿದ್ದರು. ನಮ್ಮ ಮಕ್ಕಳನ್ನು ಕಾನೂನು ಉಲ್ಲಂಘಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 44ರ ಬಳಿಯ ಚತನ್‍ಪಲ್ಲಿ ಸೇತುವೆ ಬಳಿ ನಾಲ್ವರು ಆರೋಪಿಗಳು ಪಶು ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ದೇಹವನ್ನು ಸುಟ್ಟಿದ್ದರು. ಮೃತದೇಹ ನವೆಂಬರ್ 28ರಂದು ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿ ಗಳನ್ನು ಡಿಸೆಂಬರ್ 6ರಂದು ಪೊಲೀಸರು ಎನ್‍ಕೌಂಟರ್ ಮಾಡಿದ್ದರು.

Translate »