ಕನ್ನಡದ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ…!
ಮೈಸೂರು

ಕನ್ನಡದ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ…!

December 26, 2018

ಪಿರಿಯಾಪಟ್ಟಣ: ಕನ್ನಡದಲ್ಲಿ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಬಸ್ ಕಂಡಕ್ಟರ್ ಆಗುವ ಕನಸು ಕಂಡಿದ್ದೆ ಎಂದು ಕವಿ, ಅಂಕಣಕಾರ ಅಬ್ದುಲ್ ರಷೀದ್ ತಮ್ಮ ಅನುಭವ ಹಂಚಿಕೊಂಡರು. ಪಟ್ಟಣ ಡಿ.ದೇವರಾಜ ಅರಸು ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಕವಿಗಳಿಗಿಂತ ಸಾಹಿತ್ಯ ಪರಿಷತ್ ಪದಾಧಿಕಾರಿಗಳೇ ಹೆಚ್ಚಾಗಿರುತ್ತಾರೆ. ಇದು ಬೇಸರದ ಸಂಗತಿ. ಇದರಿಂದ ಒಳ್ಳೆಯ ಕವಿಗಳೆಲ್ಲಾ ಹೊರಗೇ ಉಳಿದು ಬಿಡುತ್ತಾರೆ ಎಂದು ವಿಷಾದಿಸಿದರು.

ಒಬ್ಬ ಕವಿಗೆ ಪ್ರಾಮಾಣಿಕ ವಿಮರ್ಶಕ ಬೇಕು. ಆಗ ಮಾತ್ರ ಉತ್ತಮ ಕವಿತೆಗಳನ್ನು ರಚಿಸಲು ಸಾಧ್ಯ. ಒಂಟಿಯಾಗಿ, ವೇದಿಕೆ ಬಯಸದೆ ತಮ್ಮ ತಳಮಳ ಸಿಟ್ಟು ಸೆಡವು ಉಳಿಸಿಕೊಂಡು ಪ್ರಸಿದ್ಧ ಕವಿಗಳಾಗಿದ್ದರೂ ಅದು ಆತನ ಮರಣದ ನಂತರ ತಿಳಿಯಲಿದೆ ಎಂದರು.

ಕ್ರಾಂತಿಕಾರಿ ಮನೋಭಾವ ಹೊಂದಿದವರು, ತುಂಬಾ ಚೆನ್ನಾಗಿ ಬರೆಯುತ್ತಿದ್ದವರು ಅಧಿಕಾರದ ಆಸೆಗೆ ತಮ್ಮ ಕಾವ್ಯ ಮಾರ್ಗವನ್ನು ಬಿಟ್ಟಿದ್ದಾರೆ. ಮಾರ್ಕ್ ಹೆಮ್ಮಿಂಗ್ವೆ ಹೇಳುವಂತೆ ಬರಹಗಾರ ಪ್ರತಿನಿತ್ಯ ಬರಹದ ವ್ಯಾಯಾಮ ಮಾಡಬೇಕಾಗುತ್ತದೆ ಎಂದಿದ್ದಾರೆ. ದಿನಕ್ಕೊಬ್ಬ ಮನುಷ್ಯ ಪರಿಚಯವಾಗದಿದ್ದರೆ ಬರೆಯಲು ಏನೂ ಉಳಿದಿರುವುದಿಲ್ಲ ಎಂದು ನಂಬಿದ್ದರು ಎಂದು ತಿಳಿಸಿದರು. ಸಮ್ಮೇಳನದ ಅಧ್ಯಕ್ಷರಾಗಿರುವ ಇಂದೂಧರ ಹೊನ್ನಾಪುರ ಅವರು ಮೊದಲಿನಿಂದ ಕುತೂಹಲ ಆಸಕ್ತಿ ಮೂಡಿಸುವ ವ್ಯಕ್ತಿತ್ವ ಹೊಂದಿದ್ದರು. ಅವರು ಮುಂಗಾರು ಪತ್ರಿಕೆ ಬಿಟ್ಟ ವಿಷಯ ಕೇಳಿ ಕಣ್ಣೀರಿಟ್ಟಿದ್ದೆ ಎಂದು ಸ್ಮರಿಸಿದರು.

ಕವಿಗೋಷ್ಠಿಯಲ್ಲಿ ಡಾ.ದ.ಸತೀಶ್ ಚಂದ್ರ, ಡಾ.ಕುಶಾಲ್ ಬರಗೂರು, ದಯಾನಂದ ಕೊರ್ಲಕುಂಟೆ, ಡಾ.ಚಿಲ್ಲೂರು ಚಂದ್ರಶೇಖರ್, ಶ್ರೀಲತಾ ಮನೋಹರ್, ಟಿ.ಲೋಕೇಶ್ ಹುಣಸೂರು, ಎಂ.ಸಿ.ಚಂದ್ರಶೇಖರ್, ಡಾ.ಚಂದ್ರಕಲಾ, ಕೆ.ಜಿ.ಸುರೇಶ್, ಭಾರತಿ ಪ್ರಸಾದ್, ಡಾ.ಜೆ.ಸೋಮಣ್ಣ, ಡಾ.ಶೋಭಾರಾಣಿ, ನಿ.ಗೂ.ರಮೇಶ್, ಡಾ.ಸುಕನ್ಯಾಸುನಗನಹಳ್ಳಿ, ಡಾ.ಚಿಕ್ಕಮಗಳೂರು ಗಣೇಶ್, ವೈ.ಎಸ್.ಅಭಿಷೇಕ್, ವೆಂಕಟಾಚಲ್, ಎನ್.ಕೆ.ದಿಲೀಪ್, ನಿರ್ಮಲ, ನಜ್ಮಾನಜೀರ್ ಕವನ ವಾಚಿಸಿದರು. ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ.ವೈ.ಡಿ.ರಾಜಣ್ಣ, ಸಾಹಿತಿ ಅಂಬ್ಲಾರೆ ಬಸವೇಗೌಡ ಹಾಜರಿದ್ದರು.

Translate »