ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ  ಯಾರನ್ನೂ ಕರೆತರಲ್ಲ
ಮಂಡ್ಯ

ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರಲ್ಲ

ಮಂಡ್ಯ: ನನ್ನ ಪರ ಚುನಾವಣಾ ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರುವುದಿಲ್ಲ, ನನ್ನ ಸ್ವಾರ್ಥಕ್ಕೆ ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗ ಪಡಿಸಿಕೊಳ್ಳೋದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ನನ್ನ ಸೈನಿಕರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮದ್ದೂರು ತಾಲೂಕಿನ ಗೊಲ್ಲರ ದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂ ಭಿಸಿದ ಬಳಿಕ ಅವರು ಮಾತನಾಡಿದರು.

ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ನಟ, ನಟಿಯರು, ನಿರ್ಮಾಪಕರು ನಿಂತಿ ದ್ದಾರೆ. ಸುಮಲತಾ ಅವರ ಪರ ಪ್ರಚಾರ ಮಾಡುವುದಾಗಿ ನಟ ದರ್ಶನ್ ಬಹಿರಂಗ ಪಡಿಸಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಸುಮಲತಾ ಪರ ಪ್ರಚಾರ ಮಾಡಲು ಸಿದ್ಧವಾಗಿದೆ,ಆದರೆ ನನಗೆ ನನ್ನ ಕಾರ್ಯಕರ್ತರೇ ಸೈನಿಕರು, ಸ್ಟಾರ್ ಪ್ರಚಾರಕರು ಎಂದು ಅವರು ತಿಳಿಸಿದರು.

ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ. ರಾಜಕಾರಣದಿಂದ ನಮ್ಮಿಬ್ಬರ ಸಂಬಂಧ ಹಾಳಾಗಲು ನಾನು ಅವಕಾಶ ಮಾಡಿಕೊಡುವುದಿಲ್ಲ. ಅಭಿಷೇಕ್ ಹಾಗೂ ನಾನು ಇಬ್ಬರೂ ಬ್ಯುಸಿ ಇದ್ದೇವೆ. ಇತ್ತೀಚೆಗೆ ಇಬ್ಬರು ಸೇರಿ ಮಾತನಾಡಿಲ್ಲ. ಲೋಕಸಭಾ ಚುನಾವಣೆಯ ನಂತರ ಫ್ರೀ ಮಾಡಿಕೊಂಡು ಮಾತನಾಡುತ್ತೇವೆ ಎಂದು ಅವರು ತಿಳಿಸಿದರು.

ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆ. ದೇವರ ಮೇಲೆ ನಮ್ಮ ಕುಟುಂಬಕ್ಕೆ ಹಿಂದಿ ನಿಂದಲೂ ನಂಬಿಕೆ. ದೇವರ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ. ಹೀಗಾಗಿ ದೇವರಿಗೆ ಪೂಜೆ ಮಾಡಿ ಇಂದಿನಿಂದ ಪ್ರಚಾರ ಆರಂಭಿಸಿದ್ದೇನೆ ಎಂದು ಅವರು ಹೇಳಿದರು.

ಇಂದು ದೇವೇಗೌಡರಿಂದ ಅಧಿಕೃತ ಘೋಷಣೆ: ನಾಳೆ(ಮಾ.14) ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ನಾಳೆ ಮಂಡ್ಯಕ್ಕೆ ದೇವೇಗೌಡರು ಆಗಮಿಸುತ್ತಿದ್ದಾರೆ. ಈಗಾ ಗಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂತಿಮ ವಾಗಿದೆ. ನಾಳೆ ಗೌಡ ರಿಂದಲೇ ಅಭ್ಯರ್ಥಿ ಘೋಷಣೆಯಾಗಲಿದೆ, ವಿವಿಧೆಡೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.

ನಿಖಿಲ್ ಪ್ರಚಾರದ ವೇಳೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಇದ್ದರು.

ವಿವಿಧೆಡೆ ದೇವರ ದರ್ಶನ: ತನ್ನ ತಂದೆ ತಾಯಿಯಂತೆಯೇ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ಹಾಗೂ ಚಿಕ್ಕಂಕನಹಳ್ಳಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಯಿದೆ. ಹೀಗಾಗಿ ಮದ್ದೂರು ಭಾಗದ ಜನ ಯಾವುದೇ ಕಾರ್ಯ ನೆರವೇರಿಸು ವಾಗ ಮೊದಲು ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮರಸ್ವಾಮಿ ಅವರು ಕೂಡ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿದರು.

March 14, 2019

Leave a Reply

Your email address will not be published. Required fields are marked *