ಅಧಿಕಾರವೆಲ್ಲಾ ಡಾ.ಮನಮೋಹನ್‍ಸಿಂಗ್ ಕೈಲಿ, ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಯಲ್ಲಿ…
ಮೈಸೂರು

ಅಧಿಕಾರವೆಲ್ಲಾ ಡಾ.ಮನಮೋಹನ್‍ಸಿಂಗ್ ಕೈಲಿ, ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಯಲ್ಲಿ…

February 10, 2019

ಮಂಡ್ಯ: ಕೇಂದ್ರದ ಯುಪಿಎ ಸರ್ಕಾರದಲ್ಲಿ ಡಾ.ಮನ ಮೋಹನ್‍ಸಿಂಗ್ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು. ಆಡಳಿತವೆಲ್ಲಾ ರಾಹುಲ್ ಗಾಂಧಿ ಕೈಲಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಯುಪಿಎ ಸರ್ಕಾರದ ಆಡಳಿತ ವೈಖರಿಯನ್ನು ತೆರೆದಿಟ್ಟರು. ನಗರದ ಬಿಜಿಎಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಯಾವುದೇ ಅಧಿಕಾರವಿಲ್ಲದ ರಾಹುಲ್ ಗಾಂಧಿ ಫರ್ಮಾನುಗಳನ್ನು ಹೊರಡಿಸುತ್ತಿದ್ದರು. ಇದರಿಂದ ಕ್ಯಾಬಿನೆಟ್‍ನಲ್ಲಿ ತೆಗೆದುಕೊಂಡ ತೀರ್ಮಾನಗಳಿಗೆ ಬೆಲೆಯೇ ಇಲ್ಲವಾಗಿತ್ತು ಎಂದರು.

2004ರಿಂದ 14ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2009 ರಿಂದ 14ರವರೆಗೆ ರಾಜ್ಯಭಾರ ಮಾಡಿದ ಸರ್ಕಾರದಲ್ಲಿ ನಾನು ಅಧಿಕಾರದಲ್ಲಿದ್ದೆ. ಮನ ಮೋಹನ್‍ಸಿಂಗ್ ಪ್ರಧಾನಿಯಾಗಿದ್ದರೂ ಏನೂ ಪ್ರಯೋಜನವಿರಲಿಲ್ಲ. ಆಡಳಿತ ವೆಲ್ಲಾ ರಾಹುಲ್ ಗಾಂಧಿ ಕೈಯ್ಯಲ್ಲಿತ್ತು. ಆಗಲೇ ಹಗರಣಗಳು ಹೆಚ್ಚಾದವು. ಕಾಮನ್ವೆಲ್ತ್, 2ಜಿ, ಕಲ್ಲಿದ್ದಲು ಹಗರಣಗಳು ನಡೆದವು ಎಂದು ಆರೋಪಿಸಿದರು. ಮನಮೋಹನ್‍ಸಿಂಗ್ ಅವರಿಗೆ ಆಡಳಿತದ ಮೇಲೆ ಹಿಡಿತವೇ ಇರಲಿಲ್ಲ. ಯಾವುದೇ ಅಧಿಕಾರವಿಲ್ಲದ ರಾಹುಲ್ ಗಾಂಧಿ, ಕ್ಯಾಬಿನೆಟ್‍ನಲ್ಲಿ 80ವರ್ಷ ತುಂಬಿದವರು ಇರಬಾರದು ಎಂದು ಫರ್ಮಾನು ಹೊರಡಿಸಿದ್ದರು. ಆ ವಿಷಯ ತಿಳಿಯುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೊರಬಂದೆ ಎಂದು ತಮ್ಮ ರಾಜೀನಾಮೆಯ ರಹಸ್ಯವನ್ನು ಕೃಷ್ಣ ಬಿಚ್ಚಿಟ್ಟರು. ಮನ ಮೋಹನ್ ಸಿಂಗ್‍ಗೆ ಗೊತ್ತಿಲ್ಲದಂತೆ ಹಲವು ವಿಚಾರಗಳು ನಡೆಯುತ್ತಿದ್ದವು. ಪ್ರಧಾನಿ ಜಾರಿಗೆ ತರಲು ನಿರ್ಧರಿಸಿದ್ದ ವಿಧೇಯಕವನ್ನು ರಾಹುಲ್ ಹರಿದು ಹಾಕಿದ್ದರು ಎಂದರು. ಮೋದಿ ಬಂದ ಬಳಿಕ ಕೇಂದ್ರದ ಆಡಳಿತ ಬದಲಾಗಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್ ಭಯೋತ್ಪಾದನೆಗೆ ತಿರುಗೇಟು ನೀಡಿದ್ದಾರೆ. ಮೋದಿ ಆಡಳಿತ ಮತ್ತೊಮ್ಮೆ ದೇಶಕ್ಕೆ ಬೇಕು. ಮಂಡ್ಯದಲ್ಲೂ ಈ ಸಲ ಬಿಜೆಪಿ ಖಾತೆ ತೆರೆಯಬೇಕು.

ಅದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಚಾರ ಮಾಡುತ್ತೇನೆ. ಮುದುಡಿ ಹೋಗುವ ಪಕ್ಷ ಬಿಜೆಪಿಯಲ್ಲ. ಯುವ ಜನಾಂಗಕ್ಕೆ ಸ್ಫೂರ್ತಿ ತರುವುದು ಬಿಜೆಪಿಯ ಧ್ಯೇಯ ಎಂದರು. ಮೋದಿ ತಮ್ಮ ಆಡಳಿತದ 5 ವರ್ಷಗಳ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ. ಕಾರ್ಯಕರ್ತರು ಕೇವಲ ಸ್ಲೋಗನ್ ಕೂಗಿದರೆ ಸಾಲದು. ಮೋದಿ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕು. ಇದರಿಂದ ಜನರಿಗೆ ತಿಳುವಳಿಕೆ ಬರಲಿದೆ ಎಂದು ಅವರು ಕಿವಿಮಾತು ಹೇಳಿದರು. ಮೋದಿ ಸೋಲಿಸಲು 20ಕ್ಕೂ ಹೆಚ್ಚು ಪಕ್ಷಗಳು ಒಂದಾಗಿವೆ. ಅಲ್ಲಿ ನಾಯಕತ್ವ ಯಾರದ್ದು ಅನ್ನೋದೇ ಗೊತ್ತಿಲ್ಲ. ಅದಕ್ಕಾಗಿಯೇ ಚುನಾವಣೆ ಬಳಿಕ ಹೇಳ್ತೀವಿ ಅಂತಾರೆ ಎಂದು ಮಹಾ ಘಟ್‍ಬಂಧನ್ ಬಗ್ಗೆಯೂ ಎಸ್‍ಎಂಕೆ ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಮಾತನಾಡಿ, ಎಸ್.ಎಂ.ಕೃಷ್ಣರ ಆಗಮನದಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ. ಇದರ ಫಲ ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ. ಪಕ್ಷ ಬಲವರ್ಧನೆಗಾಗಿ ಜಿಲ್ಲಾದ್ಯಂತ ಅವರು ಸಂಚರಿಸಲಿದ್ದಾರೆ ಎಂದರು. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಸಿಎಂ ಸ್ಥಾನಕ್ಕೆ ಗೌರವ ತಂದು ಕೊಟ್ಟವರು ಎಸ್.ಎಂ.ಕೃಷ್ಣ ಎಂದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿ ಜೀವಂತವಾಗಿದ್ದಾರಾ? ಎಂದು ಪ್ರಶ್ನಿಸಿದರು. ಬೆಳೆಗಳಿಗೆ ನೀರು ಕೊಡದೆ, ರೈತರ ಸಮಸ್ಯೆ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಹಾಲಿನ ದರ ಕಡಿತ ಮಾಡಿದ್ರು, ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಕೊಟ್ಟಿಲ್ಲ. ಭತ್ತ ಖರೀದಿ ಕೇಂದ್ರಗಳಲ್ಲಿ ಸಚಿವ, ಶಾಸಕರ ಕಿರುಕುಳ ಹೆಚ್ಚಾಗಿದೆ ಎಂದು ಮೈತ್ರಿ ಸರ್ಕಾರ, ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

`ಜಿಲ್ಲೆಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ’: ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ ಮಾತನಾಡಿ, ಜಿಲ್ಲೆಗೆ ಇಲ್ಲಿವರೆಗೆ ಗ್ರಹಣ ಹಿಡಿದಿತ್ತು. ಆ ಗ್ರಹಣ ಇಂದು ಬಿಟ್ಟಿದೆ.

ಎಸ್.ಎಂ.ಕೃಷ್ಣರ ಅಧಿಕಾರಾವಧಿಯಲ್ಲಿ ತೀವ್ರ ಬರ ಇತ್ತು. ಅದಕ್ಕೆ ಹೆದರದೆ ಧೈರ್ಯವಾಗಿ ಅದನ್ನು ಎದುರಿಸಿದರು. ಅವರ ಆಡಳಿತದಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾ ಗಿದೆ. ಜಿಲ್ಲೆ, ರಾಜ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಇಡೀ ರಾಷ್ಟ್ರಕ್ಕೆ ಎಸ್.ಎಂ. ಕೃಷ್ಣರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Translate »