`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕಮೇಳ’ ಒಂದು ಮಹತ್ವಪೂರ್ಣ ಪ್ರಯತ್ನ
ಮೈಸೂರು

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕಮೇಳ’ ಒಂದು ಮಹತ್ವಪೂರ್ಣ ಪ್ರಯತ್ನ

February 10, 2019

ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋ ಜಿಸಿರುವ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳಕ್ಕೆ ಶನಿವಾರ ಭೇಟಿ ನೀಡಿ, ವೀಕ್ಷಿಸಿದ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮ ದಾಸ್, ಇದೊಂದು ಮಹತ್ವಪೂರ್ಣ ಪ್ರಯತ್ನ ಎಂದು ಶ್ಲಾಘಿಸಿದರು.

ಹತ್ತನೇ ತರಗತಿ ಹಾಗೂ ಪಿಯುಸಿ ನಂತರ ಮುಂದಿನ ಶೈಕ್ಷಣಿಕ ದಾರಿಯ ಬಗ್ಗೆ ಮಕ್ಕಳಲ್ಲಿ ಮೂಡುವ ಚಿಂತನೆಗೆ ಈ ಶೈಕ್ಷಣಿಕ ಮೇಳದಲ್ಲಿ ಉತ್ತರವಿದೆ. ಮಕ್ಕಳು ತಮ್ಮ ಪೋಷಕರೊಂದಿಗೆ ಇಲ್ಲಿಗೆ ಭೇಟಿ ನೀಡಿ, ನಾನು ಕಲಿಯುತ್ತಿರುವ ಶಾಲೆ ಹೇಗಿದೆ?, ಬೇರೆ ಶಾಲೆಗಳಲ್ಲಿ ಯಾವ ರೀತಿಯ ಸೌಲಭ್ಯಗಳಿವೆ? ಎಂದು ತುಲನೆ ಮಾಡುತ್ತಿದ್ದಾರೆ. ನಾನು ಕೆಲ ಮಕ್ಕಳನ್ನು ಮಾತನಾಡಿಸಿದೆ. ತನಗೆ ಹೊಂದಬಹುದಾದ ಶಾಲೆ ಯಾವುದು? ಅಲ್ಲಿ ಯಾವ ರೀತಿಯಲ್ಲಿ ಶಿಕ್ಷಣ ಸಿಗಬಹುದೆಂದು ತಿಳಿದುಕೊಳ್ಳುತ್ತಿದ್ದೇನೆ ಎಂದು 6ನೇ ತರಗತಿ ವಿದ್ಯಾರ್ಥಿ ಆದಿತ್ಯ ಹೇಳಿದ. ನಿಮ್ಮ ಶಾಲೆ ಚೆನ್ನಾಗಿಲ್ಲವೇ? ಎಂದು ಸಿಎಫ್‍ಟಿಆರ್‍ಐ ಶಾಲೆಯ ಪುಟ್ಟ ಹುಡುಗನನ್ನು ಕೇಳಿದಾಗ, ನಮ್ಮ ಶಾಲೆಯೂ ತುಂಬಾ ಚೆನ್ನಾಗಿದೆ. ಇನ್ನೂ ಏನೇನು ಬದಲಾವಣೆ ಮಾಡ ಬಹುದು ಎಂದು ತಿಳಿದು, ಶಾಲೆಯಲ್ಲಿ ಹೇಳುತ್ತೇನೆ ಎಂದು ಉತ್ತರಿಸಿದ. ಇಲ್ಲಿಗೆ ಬಂದು ನೋಡಿದ ಮೇಲೆ ನನ್ನ ಮುಂದೆ ಬಹು ಆಯ್ಕೆಗಳು ಕಾಣಿಸುತ್ತಿವೆ ಎಂದು ರೋಟರಿ ಶಾಲೆಯ ವಿದ್ಯಾರ್ಥಿಯೊಬ್ಬ ಹೇಳಿದ.

ಹೀಗೆ ಶೈಕ್ಷಣಿಕ ಪ್ರಯಾಣದ ಬಗ್ಗೆ ಮಕ್ಕಳನ್ನು ಚಿಂತನೆಗೆ ಹಚ್ಚುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು. ಈ ಶೈಕ್ಷಣಿಕ ಮೇಳ ವಿದ್ಯಾರ್ಥಿ ಗಳು, ಪೋಷಕರು ಹಾಗೂ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸೇತುವೆಯಂತಿದೆ. ಹತ್ತನೆ ತರಗತಿ ಹಾಗೂ ಪಿಯುಸಿ ನಂತರ ಯಾವ ಕೋರ್ಸ್ ತೆಗೆದುಕೊಂಡರೆ ಉತ್ತಮ?, ಯಾವ ಶಿಕ್ಷಣ ಸಂಸ್ಥೆಯಲ್ಲಿ ಯಾವ್ಯಾವ ಕೋರ್ಸ್‍ಗಳಿವೆ?, ಎಷ್ಟು ಶುಲ್ಕ ಪಾವತಿಸಬೇಕು? ಎಂಬಿತ್ಯಾದಿ ಯೋಚನೆಗಳಿಗೆ ಇಲ್ಲಿ ಪರಿಹಾರವಿದೆ. ತಮ್ಮ ಆಸಕ್ತಿಗೆ ಅನುಗುಣವಾಗಿ ಯಾವ ಕೋರ್ಸ್‍ಗಳನ್ನು ಕಲಿಯಬೇಕೆಂದು ಮಕ್ಕಳಿಗೆ ಇಲ್ಲಿ ಸ್ಪಷ್ಟತೆ ಸಿಗಲಿದೆ. ಇನ್ನು ಶೈಕ್ಷಣಿಕ ಸಂಸ್ಥೆಗಳು, ಅಲ್ಲಿರುವ ಕೋರ್ಸ್‍ಗಳು, ಸೌಲಭ್ಯಗಳ ಬಗ್ಗೆ ಪ್ರದರ್ಶಿ ಸಲು ಉತ್ತಮ ವೇದಿಕೆ ಇದಾಗಿದೆ. ನಿಜಕ್ಕೂ ಇದೊಂದು ಅತ್ಯುತ್ತಮ, ಅತ್ಯಗತ್ಯವಾದ ಪ್ರಯತ್ನವಾಗಿದ್ದು, ಹೀಗೆಯೇ ಮುಂದುವರೆಯಬೇಕೆಂದು ಆಶಿಸಿದರು.

ಶೈಕ್ಷಣಿಕ ಮೇಳದಲ್ಲಿದ್ದ ತಮ್ಮ `ಆಸರೆ ಫೌಂಡೇಷನ್’ ಮಳಿಗೆ ಬಗ್ಗೆ ಮಾತನಾಡಿ, ಕಳೆದ 15 ವರ್ಷಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಯಾವುದೋ ಕಾರಣದಿಂದ ಶಾಲೆಯಿಂದ ದೂರ ಉಳಿದ ಮಕ್ಕಳಿಗೂ ಶಿಕ್ಷಣ ನೀಡುತ್ತಿದ್ದೇವೆ. ರಾಜಕೀಯೇತರವಾಗಿ ಉತ್ತಮ ಕಾರ್ಯ ಮಾಡುತ್ತಿರುವ ಸಾರ್ಥಕತೆಯಿದೆ. ಇಲ್ಲಿರುವ ಮಳಿಗೆಯಲ್ಲೂ ನೂರಾರು ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಿಗೆ ಯಾವ ರೀತಿಯ ಸೌಲಭ್ಯ ಅಗತ್ಯವಿದೆ ಎಂಬುದನ್ನು ಈ ಶೈಕ್ಷಣಿಕ ಮೇಳ ತಿಳಿಸುತ್ತದೆ. ಸರಸ್ವತಿ ನಗರ ಎನ್ನಲಾಗುವ ಮೈಸೂರಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶ ಇಳಿಮುಖವಾಗುತ್ತಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ 25ನೇ ಸ್ಥಾನದಲ್ಲಿದ್ದ ಮೈಸೂರು 5ನೇ ಸ್ಥಾನಕ್ಕೇರಿತ್ತು. ಈಗ 21ನೇ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಯಾವ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಜ್ಞಾನಮಟ್ಟ ವೃದ್ಧಿಸಬೇಕೆಂಬುದರ ಬಗ್ಗೆ ಪರಾಮರ್ಶೆ ಮಾಡಬೇಕು. ಪಠ್ಯದ ಜೊತೆಗೆ ಮಕ್ಕಳ ದೃಷ್ಟಿಕೋನ, ಅವರ ಮನೋ ವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಬೇಕಿದೆ. ರಾಜ್ಯದಲ್ಲಿರುವ 242 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 16 ಕಾಲೇಜುಗಳನ್ನು ಮುಚ್ಚಬೇಕೆಂಬ ಚಿಂತನೆ ನಡೆದಿದೆ. ಇಂಜಿನಿಯ ರಿಂಗ್ ಪೂರೈಸಿದವರಲ್ಲಿ ಶೇ.60ರಷ್ಟು ಮಂದಿಗೆ ಉದ್ಯೋಗಕ್ಕೆ ಅರ್ಹರಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವೂ ಆಗಬೇಕಿದೆ ಎಂದು ಇದೇ ವೇಳೆ ತಿಳಿಸಿದರು. ಇದಕ್ಕೂ ಮುನ್ನ ರಾಮದಾಸ್ ಅವರು, ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ, ಮಾಹಿತಿ ಪಡೆದರು. ಈ ನಡುವೆ ಎದುರಾದ ಮಕ್ಕಳನ್ನು ಮಾತನಾಡಿಸಿ, ಮೇಳದ ಬಗ್ಗೆ ಪ್ರತಿಕ್ರಿಯೆ ಕೇಳಿ, ತಿಳಿದರು. ಮುಗ್ಧ ಮಕ್ಕಳಿಂದ ವ್ಯಕ್ತವಾದ ಗಂಭೀರ ಚಿಂತನೆಗಳನ್ನು ಇತರರೊಂದಿಗೆ ಹಂಚಿಕೊಂಡರು.

ಶೈಕ್ಷಣಿಕ ಮೇಳಕ್ಕೆ ಇಂದು ತೆರೆ

ಕೆಜಿಯಿಂದ ಪಿಜಿವರೆಗಿನ ಸಮಗ್ರ ಶೈಕ್ಷಣಿಕ ಮಾಹಿತಿ ಕಲ್ಪಿಸಿರುವ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಭಾನುವಾರ ತೆರೆ ಬೀಳಲಿದೆ.ಹತ್ತಾರು ಶಿಕ್ಷಣ ಸಂಸ್ಥೆಗಳ ಮಳಿಗೆಗಳು, ವಿಭಿನ್ನ ಖಾದ್ಯಗಳ ಮಳಿಗೆಗಳು, ಇಳಿಸಂಜೆಯಲ್ಲಿ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗಳು, ಲಕ್ಕಿಡಿಪ್ ಮೂಲಕ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ ಹೀಗೆ ವಿಶಿಷ್ಟತೆ ಯನ್ನೊಳಗೊಂಡ ಶೈಕ್ಷಣಿಕ ಮೇಳಕ್ಕೆ ಕಳೆದೆರೆಡು ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡಿ, ಪ್ರಯೋಜನ ಪಡೆದಿದ್ದಾರೆ.

Translate »