ನಾನಿಲ್ಲದಿದ್ದರೆ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಬರುತ್ತಿರಲಿಲ್ಲ: ಹೆಚ್‍ಡಿಕೆ
ಮಂಡ್ಯ

ನಾನಿಲ್ಲದಿದ್ದರೆ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಬರುತ್ತಿರಲಿಲ್ಲ: ಹೆಚ್‍ಡಿಕೆ

February 28, 2019

ಮಂಡ್ಯ: ನಾನಿಲ್ಲದಿದ್ದರೆ ರಾಜಕಾರಣಿ, ನಟ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ಬರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿಂದು ಆಯೋಜಿಸಿದ್ದ 5 ಸಾವಿರ ಕೋಟಿ ರೂ.ಗಳ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು. ನಮ್ಮೊಂದಿಗೆ ಆತ್ಮೀಯವಾಗಿದ್ದ ಅಂಬ ರೀಶ್ ನಿಧನರಾದಾಗ ಅವರಿಗಿಂತ ಹೆಚ್ಚಾಗಿ ಜಿಲ್ಲೆಯ ಮೇಲಿನ ಅಭಿಮಾನಕ್ಕಾಗಿ ಅವರ ಶವವನ್ನು ನಾನು ಮಂಡ್ಯಕ್ಕೆ ತಂದಿದ್ದೆ ಎಂದರು.

ನಾನು ಎಲ್ಲರಂತೆ ಅಂಬರೀಶ್ ಶವಕ್ಕೆ ಕೈಮುಗಿದು ಸುಮ್ಮನಿರಬಹುದಿತ್ತು. ಆಗ ನೀವು ಅಂಬರೀಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಅಂಬರೀಶ್ ಅಂತಿಮ ದರ್ಶನ ಕಾರ್ಯಕ್ರಮ ಯಾವ ರೀತಿ ಮಾಡಿದೆ ಎಂಬುದು ನಿಮಗೆ ಗೊತ್ತಿದೆ. ಅಂದು ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ಯಬಾರದು ಎಂದವರೇ ಇವತ್ತು ಮಂಡ್ಯದ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ದೂರಿದ ಕುಮಾರಸ್ವಾಮಿ, ನಾನು ನನ್ನ ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಗೆಸ್ಪರ್ಧಿಸುವ ಕುರಿತು ಯಾರೊಂದಿಗೂ ಚರ್ಚಿಸಿಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದರು.

ಅಂಬಿ ಕೊಡುಗೆ ಶೂನ್ಯ: ಸಚಿವರಾಗಿ ಅಂಬಿ ಅವರು ಮಾಡದ್ದನ್ನು ನಾವು ಮಾಡುತ್ತಿದ್ದೀವಿ ಎಂದ ಕುಮಾರಸ್ವಾಮಿ, ಈ ಹಿಂದೆ ನಡೆದ ಮಂಡ್ಯ ಜಿಲ್ಲೆ ಘೋಷಣೆಯ ಅಮೃತ ಮಹೋತ್ಸವ ಕೇವಲ ಮನರಂಜನೆಗೆ ಸೀಮಿತವಾಗಿತ್ತು. ಜಿಲ್ಲೆಯ ಜನತೆಯೂ ಸಹ ರಸಮಂಜರಿ ಸವಿದರು.

ನಾನೂ ಸಹ ಆ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೆ. ಅದರೆ ಆ ವೇಳೆ ಯಾವ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಚಾಲನೆ ನೀಡಲಿಲ್ಲ ಎಂದು ಗಮನ ಸೆಳೆದರು. ಅಂಬಿ ನಾವು ಬೇರೆ ಪಕ್ಷವಾದರೂ ಒಟ್ಟಾಗಿದ್ದೆವು. ಪ್ರಸ್ತುತ ನಮ್ಮಲ್ಲಿ ಬಿರುಕು ಮೂಡಿಸಲು ಕೆಲವರು ಹೊರಟಿದ್ದಾರೆ ಎಂದರು.

Translate »