ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ: ಇಂದು ಮುಖ್ಯಮಂತ್ರಿಯಿಂದ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆ ಹಸ್ತಾಂತರ
ಕೊಡಗು

ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ: ಇಂದು ಮುಖ್ಯಮಂತ್ರಿಯಿಂದ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆ ಹಸ್ತಾಂತರ

February 28, 2019

ಗಿರಿಜನ ಹೋರಾಟಗಾರ್ತಿ ಮುತ್ತಮ್ಮ ಹೋರಾಟಕ್ಕೆ ಸಿಕ್ಕಿತು ಫಲ
ಕುಶಾಲನಗರ: ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ತಾಲೂಕಿನ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ 300 ಹೊಸ ಮನೆಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಫೆ.28 ರಂದು ಹಸ್ತಾಂತರಿಸಲಿದ್ದಾರೆ.

ಸಮೀಪದ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಹಾಗೂ ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವ ಸತಿ ಕೇಂದ್ರದಲ್ಲಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, 528 ಮನೆಗಳ ಪೈಕಿ ಪೂರ್ಣಗೊಂಡಿ ರುವ 300 ಹೊಸ ಮನೆಗಳನ್ನು ಹಸ್ತಾಂ ತರ ಮಾಡಲು ಸಿದ್ಧತೆ ಜರುಗಿವೆ.

ಬಸವನಹಳ್ಳಿಯಲ್ಲಿ 6.45 ಎಕರೆ ಪ್ರದೇಶ ದಲ್ಲಿ ಹಾಗೂ ಬ್ಯಾಡಗೊಟ್ಟ ಗ್ರಾಮದಲ್ಲಿ 8 ಎಕರೆ ಪ್ರದೇಶದಲ್ಲಿ 1 ಕೋಟಿ ವೆಚ್ಚದಲ್ಲಿ ಹೊಸದಾಗಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬ್ಯಾಡಗೊಟ್ಟದಲ್ಲಿ 30×40 ಅಳತೆಯ 354 ನಿವೇಶನಗಳನ್ನು ಹಾಗೂ ಬಸವನಹಳ್ಳಿಯಲ್ಲಿ 174 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮನೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಇದೀಗ 300 ಮನೆಗಳಿಗೆ ಕಿಟಕಿ, ಬಾಗಿಲು ಅಳವಡಿಸಿದ್ದು, ವಿದ್ಯುತ್ ಸಂಪರ್ಕ ಒದ ಗಿಸಿ, ಟೈಲ್ಸ್ ಅಳವಡಿಸಲಾಗಿದೆ. ಕಾಮಗಾರಿ ಮುಗಿದು ಹಸ್ತಾಂತರಕ್ಕೆ ಸಿದ್ಧಗೊಂಡಿವೆ. 164 ಮನೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್ ಕೆಲಸ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನು 64 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಅಡಿಪಾಯ ಮಾತ್ರ ಆಗಿದ್ದು, ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೆ ಮನೆ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ. ಹಾಲಿ ಪುನ ರ್ವಸತಿ ಕೇಂದ್ರದಲ್ಲಿ ವಸತಿ ಯೋಜನೆ, ರಸ್ತೆ, ಚರಂಡಿ, ಕುಡಿಯುವ ನೀರಿನ ಕಾಮ ಗಾರಿಗಳು ನಡೆದಿವೆ ಎಂದು ನಿರ್ಮಿತಿ ಕೇಂದ್ರದ ಕಾರ್ಯಪಾಲಕ ಇಂಜಿನಿಯರ್ ಆರ್.ಜೆ.ಸಚಿನ್ ತಿಳಿಸಿದ್ದಾರೆ.

ಯೋಜನೆಯಡಿ ಸರ್ಕಾರ ಪ್ರತಿ ಮನೆಗೆ ರೂ.3.90 ಲಕ್ಷ ನಿಗದಿಪಡಿಸಿದೆ. ಎರಡು ಪುನರ್ವಸತಿ ಕೇಂದ್ರಗಳಲ್ಲಿ 528 ಕುಟುಂಬ ಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೂ.20 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಇದುವರೆಗೆ ರೂ.14 ಕೋಟಿ ಅನುದಾನ ಒದಗಿಸಿದೆ. ರೂ.6 ಕೋಟಿ ಅನುದಾನ ಬಿಡುಗಡೆಯಾಗಬೇಕಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರ ಕಾಮಗಾರಿ ಜಾರಿ ಗೊಳಿಸುತ್ತಿದೆ. ಎರಡು ವರ್ಷಗಳ ಹಿಂದೆ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ನಿರಾಶ್ರಿತ ರಿಗೆ ಅಲ್ಲಿನ ಅರಣ್ಯ ಪ್ರದೇಶದಲ್ಲಿ ನಿವೇಶನ ಹಾಗೂ ಭೂಮಿ ನೀಡಬೇಕು ಎಂದು ಒತ್ತಾ ಯಿಸಿ ಹೋರಾಟಗಾರ್ತಿ ಮುತ್ತಮ್ಮ ನೇತೃತ್ವ ದಲ್ಲಿ ನೂರಾರು ಗಿರಿಜನರು ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು, ಜನಪರ ಹೋರಾಟ ಗಾರರು ಹಾಗೂ ವಿಚಾರವಾದಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ಈ ಹೋರಾಟ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದರೊಂ ದಿಗೆ ಹೋರಾಟಗಾರ್ತಿ ಮುತ್ತಮ್ಮ ಅರೆ ಬೆತ್ತಲೆಯಲ್ಲಿ ಮರವೇರಿ ಪ್ರತಿಭಟನೆ ನಡೆ ಸಿದ್ದು, ರಾಜ್ಯ ಸರ್ಕಾರದಲ್ಲಿ ಮಿಂಚಿನ ಸಂಚಾರವನ್ನೇ ಉಂಟುಮಾಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಸರ್ಕಾರ ಗಿರಿಜನರಿಗೆ ವಸತಿ ಭಾಗ್ಯ ಕಲ್ಪಿಸುವ ಭರವಸೆ ನೀಡಿತ್ತು.

ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಗಿರಿಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರಣ್ಯ ಕಾಯ್ದೆ ಅಡ್ಡಿಯಾದ ಹಿನ್ನೆಲೆಯಲ್ಲಿ ಗಿರಿಜನ ನಿರಾಶ್ರಿತರಿಗೆ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಯಿತು.

ದಿಡ್ಡಳ್ಳಿಯಿಂದ ನಿರಾಶ್ರಿತರನ್ನು ಕರೆ ತಂದು ಬಸವನಹಳ್ಳಿ, ಬ್ಯಾಡಗೊಟ್ಟದಲ್ಲಿ ವಸತಿ ಸೌಲಭ್ಯ ಒದಗಿಸುವವರೆಗೆ ತಾತ್ಕಾಲಿಕವಾಗಿ ರೂ.30 ಲಕ್ಷ ವೆಚ್ಚದಲ್ಲಿ ಶೆಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾ ಗಿತ್ತು. ಗಿರಿಜನ ಹೋರಾಟಗಾರ್ತಿ ಮುತ್ತ ಮ್ಮನ ಹೋರಾಟ ಫಲವಾಗಿ ಇದೀಗ ಎರಡು ಪುನರ್ವಸತಿ ಕೇಂದ್ರಗಳಲ್ಲಿ ಸುಂದರ ಮನೆ ಗಳು ನಿರ್ಮಾಣಗೊಂಡಿದ್ದು, ಈ ಪುನರ್ವ ಸತಿ ಕೇಂದ್ರಗಳು ರಾಜ್ಯಕ್ಕೆ ಮಾದರಿಯಾಗಲಿವೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಅಪೂರ್ಣ ಕಾಮಗಾರಿ: 22 ತಿಂಗಳು ಕಳೆ ದರೂ ಮನೆಗಳ ನಿರ್ಮಾಣ ಪೂರ್ಣ ಗೊಂಡಿಲ್ಲ. ಕೆಲವೆಡೆ ಒಳಚರಂಡಿ, ರಸ್ತೆ, ಚರಂಡಿ ಕಾಮಗಾರಿಗಳು ಕೂಡ ಅಪೂರ್ಣ ಗೊಂಡಿವೆ. ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ ಧೂಳಿನಿಂದ ಕೂಡಿದ್ದು, ಮಣ್ಣಿನ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ಧೂಳು ತಡೆಗೆ ಶೆಡ್‍ಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಕೊಂಡಿದ್ದಾರೆ. ನೈರ್ಮಲ್ಯದ ಕೊರತೆಯಿದೆ.

ಕಾಮಗಾರಿ ಚುರುಕು: ಫೆ.28ರಂದು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿರುವ ಕಾರಣ ಮನೆ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ರಸ್ತೆ, ಚರಂಡಿ ಸೇರಿ ಇನ್ನಿತರ ಕಾಮಗಾರಿಗಳನ್ನು ತ್ವರಿ ತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ.

ಡಿಸಿ ಭೇಟಿ: ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಅಧಿ ಕಾರಿಗಳ ತಂಡ ಬ್ಯಾಡಗೊಟ್ಟ, ಬಸವನ ಹಳ್ಳಿ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ದರು. ಶೀಘ್ರ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಸ್ತೆ ಅಭಿವೃದ್ಧಿಗೆ ಮನವಿ: ಮದಲಾಪುರ ದಿಂದ ಸೀಗೆಹೊಸೂರು ರಸ್ತೆ ಹದಗೆಟ್ಟಿದೆ. ವಾಹನ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »