ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ
ಮೈಸೂರು

ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ

August 25, 2018

ಹೊಳೆನರಸೀಪುರ: ಜನರ ಆಶೀರ್ವಾದವಿದೆ, ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಹಾಡ್ಯ ಗ್ರಾಮದಲ್ಲಿ ಜರುಗಿದ ಈಶ್ವರ ಹಾಗೂ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾವು ರಾಜಕೀಯ ದಲ್ಲಿ ಎಂದು ಹೆದರಿ ಓಡಿ ಹೋಗುವುದಿಲ್ಲ. ರಾಜಕೀಯ ನಿಂತ ನೀರಲ್ಲ. ಕಾಲಚಕ್ರ ಸದಾ ಚಲಿಸುತ್ತಿರುತ್ತದೆ. ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿ ಬದಲಾವಣೆಯಾಗುತ್ತದೆ. ಜನರ ಆಶೀರ್ವಾದವಿದೆ, ಮತ್ತೊಮ್ಮೆ ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಭವಿಷ್ಯ ನುಡಿದರು. ನನ್ನ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ನೂರಾರು ಜನಪರ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ತಲುಪಿದ್ದರೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರದಿಂದ ನಮ್ಮ ಪಕ್ಷ ಅಧಿಕಾರದಿಂದ ವಂಚಿತ ವಾಗಿದೆ. ಜನಪರ ನಾಯಕರ ಪರ ಜನರ ಆಶೀರ್ವಾದ ಇರಬೇಕು. ಇಂದಿನ ರಾಜಕೀಯ ಹಣ, ಜಾತಿ ಆಧಾರದಲ್ಲಿ ನಡೆಯುತ್ತಿರುವುದು ಸಮಾಜಕ್ಕೆ ಆಘಾತ ತಂದಿದೆ.

ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು. ಜಾತಿ, ಹಣದ ಹಿಂದೆ ಓಡದೆ ದೀನ-ದಲಿತರು, ಹಿಂದುಳಿದ, ಅಲ್ಪಸಂಖ್ಯಾತ, ಎಲ್ಲಾವರ್ಗದ ಜನರ ಪರ ಕೆಲಸ ಮಾಡಿದವರಿಗೆ ನಾಯಕನಾಗಿ ಬೆಳೆಯಲು ಆಶೀರ್ವಾದ ಮಾಡಬೇಕು. ದೇವರನ್ನು ನಂಬಿಕೆಯಿಂದ ಆರಾಧಿಸುವ ನಾವು ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದೇ ನಾವು ದೇವರಿಗೆ ಸಲ್ಲಿಸುವ ಭಕ್ತಿಯ ನಮನ. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದು ಪ್ರಸ್ತುತ ಕ್ಷೀಣಿಸುತ್ತಿದೆ. ಕಾಯಾ ವಾಚಾ ಮನಸ್ಸಾನಿಂದ ಜನಾರ್ಧನ ಸೇವೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದರು.

ಮಾಜಿ ಸಚಿವ ಎ.ಮಂಜು ಮಾತನಾಡಿ, ದೇವರಾಜ ಅರಸು ನಂತರ ಉತ್ತಮ ಆಡಳಿತ ನೀಡಿದ ಹೆಮ್ಮೆಯ ನಾಯಕ ಎಂದರೆ ಸಿದ್ದರಾಮಯ್ಯ. ಇವರು ಅಭಿವೃದ್ಧಿಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಮುಖ್ಯಮಂತ್ರಿ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಗಳು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ಉಳಿದಿವೆ. ಒಳ್ಳೆಯ ಆಡಳಿತ ನೀಡಿದ್ದರೂ ವಿರೋಧಿಗಳಿಂದ ಅಧಿಕಾರ ಕೈತಪ್ಪಿದೆ.

ಮುಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಗೊಳಿಸಲಿ ಎಂದು ಆಶಿಸಿದರು. ಕಾಗಿನೆಲೆ ಕನಕಗುರು ಪೀಠದ ಕೆ.ಆರ್ ನಗರ ಶಾಖಾ ಮಠದ ಶಿವಾನಂದಪುರಿ ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಅಣತಿ ಮಠದ ಶ್ರೀ ರೇಣುಕಾ ಒಡೆಯರ್, ಟಿ.ಮಾಯಗೌಡನಹಳ್ಳಿ ಮಠದ ಸೋಮಶೇಖರ ಶ್ರೀಗಳು, ತೇಜೂರು ಸಿದ್ದರಾಮೇಶ್ವರ ಮಠದ ಕಲ್ಯಾಣ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು, ಕೆಪಿಸಿಸಿ ಕಾರ್ಯದರ್ಶಿ, ಜಿಪಂ ಸದಸ್ಯ ಪಟೇಲ್ ಶಿವಪ್ಪ, ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ, ಚಿತ್ರ ನಟ ಪ್ರಥಮ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಿಕೊಪ್ಪಲು ಮಂಜೇಗೌಡ, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬ ಶಿವಪ್ಪ, ಅರಕಲಗೂಡು ಎಪಿಎಂಸಿ ಸದಸ್ಯ ಕಂಬೇಗೌಡ, ನಿಡುವಣಿ ಜಿಪಂ ಸದಸ್ಯರಾದ ಪ್ರಸನ್ನ, ಸದಸ್ಯ ರೇವಣ್ಣ, ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಕಾಂಗ್ರೆಸ್ ಮುಖಂಡ ಬಾಗಿವಾಳು ಮಂಜೇಗೌಡ, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »