ರಾಜಕಾರಣಿಗಳು ತಮ್ಮ ಉತ್ತಮ ಅನುಭವಗಳನ್ನು ಬರವಣಿಗೆ ಮಾಡಿದಲ್ಲಿ ರಾಜಕಾರಣ ಸಕಾರಾತ್ಮಕವಾಗಿ ಸಾಗಲಿದೆ
ಮೈಸೂರು

ರಾಜಕಾರಣಿಗಳು ತಮ್ಮ ಉತ್ತಮ ಅನುಭವಗಳನ್ನು ಬರವಣಿಗೆ ಮಾಡಿದಲ್ಲಿ ರಾಜಕಾರಣ ಸಕಾರಾತ್ಮಕವಾಗಿ ಸಾಗಲಿದೆ

June 17, 2019

ಮೈಸೂರು: ಅನು ಭವ ಎಂಬುದು ಸ್ವಯಾರ್ಜಿತ ಆಸ್ತಿ ಇದ್ದಂತೆ. ರಾಜಕಾರಣಿಗಳು ತಮ್ಮ ಅನುಭವ ಕುರಿತು ಬರವಣಿಗೆ ಮಾಡಿದಲ್ಲಿ ನಮ್ಮ ರಾಜಕಾರಣ ವ್ಯವಸ್ಥೆ ಸಕಾರಾತ್ಮಕವಾಗಿ ಸಾಗಲಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಹಿಮಾ ಪ್ರಕಾಶನದ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರೂ ಆದ ಡಾ.ಎಂ. ಆರ್.ರವಿ ಅವರ `ಜೀವನ ಸಂಭ್ರಮ-ನಿತ್ಯಾನುಭವದ ಮೆಲುಕುಗಳು’ (`ಮೈಸೂರು ಮಿತ್ರ’ನಲ್ಲಿ ಪ್ರಕಟವಾಗಿದ್ದ 30 ಲೇಖನಗಳ ಸಂಗ್ರಹ) ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸಕ್ಕಿಂತ ನೋಡುವ ಹವ್ಯಾಸ ಹೆಚ್ಚಾಗುತ್ತಿದೆ. ಓದುವುದಕ್ಕೆ ಏಕಾಗ್ರತೆ ಅಗತ್ಯವಾದರೆ ನೋಡುವುದಕ್ಕೆ ಅದು ಅಷ್ಟು ಅನ್ವಯಿಸುವುದಿಲ್ಲ. ಡಾ.ಎಂ.ಆರ್. ರವಿಯವರ `ಜೀವನ ಸಂಭ್ರಮ’ದಲ್ಲಿ ಅವರ ಜೀವನಾನುಭವ ಅನಾವರಣ ಗೊಂಡಿದ್ದು, ಈ ಕೃತಿ ನಾಡಿನ ಓದುಗರನ್ನು ತಲುಪಲಿ. ಮನುಷ್ಯನಿಗೆ ಅವನ ಅನು ಭವವೇ ಆಸ್ತಿ. ಅಧಿಕಾರಿಗಳು, ರಾಜಕಾರಣಿ ಗಳು ತಮ್ಮ ಅನುಭವವನ್ನು ಪುಸ್ತಕದ ಮೂಲಕ ಹೊರತಂದರೆ ಅದು ಸಮಾಜಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಅನುಭವದ ಮಹತ್ವ ಕುರಿತು ಬಹಳಷ್ಟು ಮಂದಿ ಬರೆದಿದ್ದು, ನಾನೂ ನನ್ನ `ಹಳ್ಳಿ ಹಕ್ಕಿ ಹಾಡು’ ಕೃತಿಯಲ್ಲಿ ಅನುಭವದ ಬಗ್ಗೆ ನೈಜ ನಿರ್ದೇಶನದೊಂದಿಗೆ ಪ್ರಸ್ತಾಪಿ ಸಿದ್ದೇನೆ. ರಾಜೀವ್‍ಗಾಂಧಿ ಮೊಟ್ಟ ಮೊದಲು ಪ್ರಧಾನಿಯಾದ ವೇಳೆ ಕ್ಷುಲ್ಲಕ ಕಾರಣಕ್ಕೆ ಭಾರತ ಸರ್ಕಾರದ ಅಧಿಕಾರಿ ಡಾ.ಎ.ಪಿ. ವೆಂಕಟೇಶನ್ ಅವರ ವಿಚಾರದಲ್ಲಿ ನಡೆದು ಕೊಂಡ ರೀತಿಯನ್ನು ಪುಸ್ತಕದಲ್ಲಿ ಉಲ್ಲೇಖಿ ಸಿದ್ದೇನೆ. `ವ್ಯಕ್ತಿಯೊಬ್ಬ ಬೆಡಗು-ಭಿನ್ನಾಣ ಹಾಗೂ ಆಸ್ತಿಯನ್ನು ಅವರ ಪೋಷಕರಿಂದ ಪಡೆದುಕೊಳ್ಳುತ್ತಾನೆ. ಆದರೆ ಅನುಭವ ಪಡೆಯಲಾರ’ ಎಂದಷ್ಟೇ ಡಾ.ಎ.ಪಿ. ವೆಂಕಟೇಶನ್ ಅಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಮೂಲಕ ರಾಜೀವ್ ಗಾಂಧಿಯ ಅನುಭವದ ಕೊರತೆಯನ್ನು ಎತ್ತಿ ಹಿಡಿದಿದ್ದರು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಪಾದರಕ್ಷೆ ಹೊಲಿ ಯುವ ವ್ಯಕ್ತಿಯೊಬ್ಬ ತನ್ನ ಕಾಯಕದ ಬಗ್ಗೆ ಪುಸ್ತಕ ಬರೆದ ಬಳಿಕ ಪಾದರಕ್ಷೆ ಮೆಟ್ಟುವ ಮೇಲ್ವರ್ಗದವರಿಗೆ ಆತನ ಶ್ರಮದ ಅರಿವಾಯಿತು. ಅದೇ ರೀತಿ ಬಾಂಬೆಯ ರೆಡ್ ಲೈಟ್ ಏರಿಯಾದಲ್ಲಿದ್ದ ಜರೀನಾ ಎಂಬಾಕೆ ತಾನೇಕೆ ವೇಶ್ಯಾವೃತ್ತಿಗೆ ಬಂದೆ ಎಂದು ಬರೆದುಕೊಂಡ ಬಳಿಕ ಸಮಾಜಕ್ಕೆ ಆಕೆಯ ಸಂಕಷ್ಟ ಅರಿವಾಯಿತು. ಹೀಗೆ ಬರವಣಿಗೆ ಸಮಾಜದ ಕಣ್ಣು ತೆರೆಸಲು ಸಹಕಾರಿ ಆಗಲಿದೆ ಎಂದರು.

ಸಿಎಂಗಳಿಗೆ ಅರ್ಥವೇ ಆಗಲಿಲ್ಲ: ಡಾ.ಎಂ.ಆರ್.ರವಿಯವರ ಬಗ್ಗೆ ಸುಮಾರು ಮಂದಿ ಸಿಎಂಗಳ ಬಳಿ ಮಾತನಾಡಿದ್ದೇನೆ. ಅವರೊಬ್ಬ ಅಕ್ಷರವಂತ ಮಾತ್ರವಲ್ಲ ಹೃದಯವಂತ. ಅವರಿಗೆ ಆಡಳಿತದಲ್ಲಿ ಒಳ್ಳೆಯ ಸ್ಥಾನಮಾನ ಕಲ್ಪಿಸಿದರೆ ಉನ್ನತ ಬದಲಾವಣೆ ತರಬಹುದು ಎಂದು ಹಲವು ಬಾರಿ ಅನೇಕರು ಸಿಎಂಗಳಾಗಿದ್ದಾಗೆಲ್ಲಾ ಪ್ರಸ್ತಾಪ ಮಾಡಿದರೂ ಅವರಿಗೆ ಅರ್ಥವೇ ಆಗಲಿಲ್ಲ. ಈಗಲೂ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿವಾದಾತ್ಮಕ ವ್ಯಕ್ತಿ: ಕೃತಿಯಲ್ಲಿ ರವಿಯವರು `ವಾದ, ಸಂವಾದ ಮತ್ತು ವಿವಾದ’ ಲೇಖನದಲ್ಲಿ ಈ ಮೂರರ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ವಾಸ್ತವಿಕ ನೆಲಗಟ್ಟಿನಲ್ಲಿ ಚರ್ಚೆ ಮಾಡುವುದರಿಂದ ವಿವಾದ ಎನ್ನಿಸುತ್ತದೆ. ಹೀಗಾಗಿಯೇ ವಿಶ್ವನಾಥ್ ಎಂದರೆ `ವಿವಾದಾತ್ಮಕ ವ್ಯಕ್ತಿ’ ಎನ್ನುವಂತಾಗಿದೆ. ಯಾರನ್ನೂ ಯಾರಿಗೂ ಹೋಲಿಕೆ ಮಾಡಬಾರದು. ದಲಿತರನ್ನು ಕಂಡರೆ ದೂರ ಹೋಗುವವರನ್ನು ಅಭಿನವ ಬಸವಣ್ಣ ಎಂದು ಹೋಲಿಕೆ ಮಾಡುತ್ತಾರೆ. ಇನ್ಯಾರನ್ನೊ ಎರಡನೇ ದೇವರಾಜ ಅರಸು ಎನ್ನುತ್ತಾರೆ. ಗಾಂಧಿ, ಅಂಬೇಡ್ಕರ್ ಹಾಗೂ ಬಸವಣ್ಣ ಸೇರಿದಂತೆ ಮಹನೀಯರು ಅವರಿಗೆ ಅವರೇ ಸಾಟಿ ಹೊರತು, ಅವರಿಗೆ ಯಾರನ್ನೂ ಹೊಲಿಕೆ ಮಾಡಲಾಗದು. ಈ ವಿಷಯ ಕುರಿತಂತೆಯೂ ರವಿಯವರು `ಯಾರನ್ನೂ ಯಾರೊಂದಿಗೂ ಹೋಲಿಕೆ ಮಾಡಬೇಡಿ’ ಲೇಖನದಲ್ಲಿ ವಿವರಿಸಿದ್ದಾರೆ ಎಂದರು.

ಅಂಕಣಕಾರ ಹಾಗೂ ಬೆಂಗಳೂರು ರಮಣಶ್ರೀ ಸಮೂಹ ಸಂಸ್ಥೆ ಎಸ್.ಷಡಕ್ಷರಿ ಕೃತಿ ಕುರಿತು ಮಾತನಾಡಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕರ್ತೃ ಡಾ.ಎಂ.ಆರ್.ರವಿ ಮತ್ತು ಇವರ ಪತ್ನಿ ಶೀಲಾ ರವಿ, ಮಹಿಮಾ ಪ್ರಕಾಶನದ ಪ್ರಕಾಶಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Translate »