ಕಾಫಿ ಬೆಳೆಗಾರರ ಸಾಲಮನ್ನಾ ಮಾಡದಿದ್ದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ
ಕೊಡಗು

ಕಾಫಿ ಬೆಳೆಗಾರರ ಸಾಲಮನ್ನಾ ಮಾಡದಿದ್ದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

July 4, 2018

ನಾಪೋಕ್ಲು:  ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡ ದಿದ್ದರೆ ಕೊಡಗು ಜಿಲ್ಲೆಯ ಎಲ್ಲಾ ಸಂಘ-ಸಂಸ್ಥೆಗಳ ಬೆಳೆಗಾರರ ಸಹಕಾರದಿಂದ ಪಕ್ಷಬೇಧವಿಲ್ಲದೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎನ್.ಎಸ್. ಉದಯ ಶಂಕರ್, ಕೆ.ಪಿ.ರಮೇಶ್ ಮುದ್ದಯ್ಯ, ಬಿ.ಸಿ. ಜಿನ್ನು ನಾಣಯ್ಯ. ಎಂ.ಎ. ಮನ್ಸೂರ್ ಆಲಿ ಅವರು ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯು ಪ್ರಮುಖ ಬೆಳೆಯಾಗಿದ್ದು ಜಿಲ್ಲೆಯ ರೈತರು ಕಾಫಿ ಯನ್ನೇ ನಂಬಿ ಬದುಕುತ್ತಿದ್ದು, ಈ ಬಾರಿಯ ವರ್ಷಧಾರೆಯಿಂದ ಕಾಫಿ ಫಸಲು ಕೊಳೆ ರೋಗದಿಂದ ನೆಲಕಚ್ಚಿದೆ.

ರೈತ ಅತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯ ಮಂತ್ರಿಗಳು ಮತ್ತು ಹಣಕಾಸು ಸಚಿವರೂ ಆದ ಕುಮಾರಸ್ವಾಮಿಯವರು ಜು.5 ರಂದು ಮಂಡಿಸುವ ಪೂರ್ಣ ಬಜೆಟ್ ನಲ್ಲಿ ಕಾಫಿ ಬೆಳೆಗಾರರಿಗೂ ಅನ್ವಯ ವಾಗುವಂತಹ ಬಜೆಟ್ ಮಂಡಿಸ ಬೇಕೆಂದು ಮನವಿ ಮಾಡಿದರು.

ದೇಶದ ಆರ್ಥಿಕತೆಯಲ್ಲಿ ಮುಖ್ಯವಾಗಿ ಪೆಟ್ರೋಲಿಯಂ ನಂತರದ ಸ್ಥಾನ ಕಾಫಿಗೆ ಇದ್ದು ಕಾಫಿ ರಫ್ತಿನಿಂದ ಸಾವಿರಾರು ಕೋಟಿರೂ ತೆರಿಗೆಯಾಗಿ ಬರುತ್ತಿದ್ದರೂ ಸರಕಾರ ಕಾಫಿ ಬೆಳೆಗಾರರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಅವರು ಈಗಾಗಲೇ ಕೆಲವು ಟಿ.ವಿ. ಮಾಧ್ಯಮಗಳಲ್ಲಿ ಪ್ರಕಟಗೊಂಡಂತೆ ಸರಕಾರ ಬರೀ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಲು ನಿರ್ಧರಿಸಿರುವುದಾಗಿ ಹೇಳಿ ದ್ದಾರೆ. ಮುಖ್ಯಮಂತ್ರಿಗಳು ಕಾಫಿ ಬೆಳೆಗಾರರಿಗೂ ಅನ್ವಯವಾಗುವಂತೆ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಕೊಡಗು 1956ರವರೆಗೆ ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭ ಸಂಪತ್ಬರಿತ ರಾಜ್ಯವಾಗಿತ್ತು. ಇಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಕೊಡಗನ್ನು ಕರ್ನಾಟಕ ರಾಜ್ಯಕ್ಕೆ ವಿಲೀನಗೊಳಿಸುವ ಸಂದರ್ಭ ಕೊಡಗಿನ ಅಭಿವೃದ್ಧಿಗಾಗಿ ಆಗ ಸರಕಾರ ಸುತ್ತೋಲೆಯನ್ನು ಬರೆದಿಟ್ಟಿದ್ದು ಅದನ್ನು ಜಿಲ್ಲಾಧಿಕಾರಿಗಳು ಬಹಿರಂಗ ಪಡಿಸಬೇಕೆಂದು ಅವರು ಒತ್ತಾಯಿಸಿದರು. ಸರಕಾರ ಕೊಡಗು ಜಿಲ್ಲೆಯನ್ನು ಕಡೆಗೆಣಿಸುತ್ತಾ ಬಂದಿದ್ದು ಕೊಡಗಿನ ಜನರು ನಿದ್ರೆ ಮಾಡುತ್ತಿಲ್ಲ ಎಂದು ಎಚ್ಚರಿಸಿದ ಅವರು ಬಜೆಟ್‍ನಲ್ಲಿ ಕಾಫಿ ಬೆಳೆಗಾರರನ್ನು ನಿರ್ಲಕ್ಷಿಸಿದರೆ ಮುಂದೆ ಕೊಡಗಿನ ಎಲ್ಲಾ ಮೂಲ ನಿವಾಸಿಗಳು, ಸಂಘ, ಸಂಸ್ಥೆಗಳು ಮತ್ತು ಎಲ್ಲಾ ಬೆಳೆಗಾರರೊಂದಿಗೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಲು ಸಭೆ ಕರೆದು ರೂಪುರೇಷೆಯನ್ನು ರೂಪಿಸಲಾಗುವುದು ಎಂದು ಅವರು ಸರಕಾರ ವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಟ್ರಪಂಡ ಮೋಹನ್ ಮುದ್ದಪ್ಪ, ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ನಿಡುಮಂಡ ಕೃತಿ, ಕಂಗಾಂಡ ಜಾಲಿ ಪೂವಪ್ಪ, ಇದ್ದರು.

Translate »